ಗಣೇಶ ಮೂರ್ತಿ ಮೆರವಣಿಗೆ ವೇಳೆ ನಾಗಮಂಗಲ ಪಟ್ಟಣದಲ್ಲಿ ಗಲಭೆ : ಪೊಲೀಸರಿಂದ 54 ಮಂದಿ ದಸ್ತಗಿರಿ

| Published : Sep 13 2024, 01:34 AM IST / Updated: Sep 13 2024, 01:24 PM IST

ಗಣೇಶ ಮೂರ್ತಿ ಮೆರವಣಿಗೆ ವೇಳೆ ನಾಗಮಂಗಲ ಪಟ್ಟಣದಲ್ಲಿ ಗಲಭೆ : ಪೊಲೀಸರಿಂದ 54 ಮಂದಿ ದಸ್ತಗಿರಿ
Share this Article
  • FB
  • TW
  • Linkdin
  • Email

ಸಾರಾಂಶ

ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಬುಧವಾರ ರಾತ್ರಿ ನಡೆಸಿದ ಕಲ್ಲುತೂರಾಟ, ಪೆಟ್ರೋಲ್ ಬಾಂಬ್‌ನಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದ ಪಟ್ಟಣದ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತಿದೆ.

 ನಾಗಮಂಗಲ :  ಗಣೇಶ ಮೂರ್ತಿ ಮೆರವಣಿಗೆ ವೇಳೆ ಕಿಡಿಗೇಡಿಗಳು ಬುಧವಾರ ರಾತ್ರಿ ನಡೆಸಿದ ಕಲ್ಲುತೂರಾಟ, ಪೆಟ್ರೋಲ್ ಬಾಂಬ್‌ನಿಂದ ಪ್ರಕ್ಷುಬ್ಧ ವಾತಾವರಣ ನಿರ್ಮಾಣವಾಗಿದ್ದ ಪಟ್ಟಣದ ಪರಿಸ್ಥಿತಿ ಇನ್ನೂ ಬೂದಿಮುಚ್ಚಿದ ಕೆಂಡದಂತಿದೆ.

ಇಡೀ ರಾತ್ರಿ ಪೊಲೀಸರು ಹರಸಾಹಸ ನಡೆಸಿ ಪರಿಸ್ಥಿತಿಯನ್ನು ನಿಯಂತ್ರಣಕ್ಕೆ ತಂದಿದ್ದರೂ ಕೂಡ ನಾಗಮಂಗಲ ಪಟ್ಟಣದಲ್ಲಿ ಬಿಗುವಿನ ವಾತಾವರಣ ಮುಂದುವರೆದಿದೆ. ಪಟ್ಟಣದ ಪ್ರಮುಖ ಸ್ಥಳಗಳಲ್ಲಿ ಬಿಗಿ ಪೊಲೀಸ್ ಭದ್ರತೆಯನ್ನು ನಿಯೋಜಿಸಲಾಗಿದೆ.

54 ಮಂದಿ ವಶಕ್ಕೆ:

ಗಣೇಶ ಮೆರವಣಿಗೆ ಸಮಯದಲ್ಲಿ ಎರಡು ಕೋಮಿನ ನಡುವೆ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ೧೫೦ಕ್ಕೂ ಹೆಚ್ಚು ಮಂದಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಸ್ಲಿಂ ಸಮುದಾಯದ ೨೩ ಮಂದಿ ಹಾಗೂ ಹಿಂದೂ ಸಮುದಾಯದ ೩೧ಮಂದಿ ಸೇರಿ ಒಟ್ಟು ೫೪ ಮಂದಿಯನ್ನು ವಶಕ್ಕೆ ಪಡೆದುಕೊಂಡು ಅವರ ವಿರುದ್ಧ ಭಾರತೀಯ ದಂಡ ಸಂಹಿತೆ ೧೦೯, ೧೧೫, ೧೧೮, ೧೨೧, ೧೩೨, ೧೮೯, ೧೯೦ ಸೇರಿದಂತೆ ಒಟ್ಟು ೧೬ ಸೆಕ್ಷನ್‌ಗಳಡಿಯಲ್ಲಿ ಎಫ್‌ಐಆರ್ ದಾಖಲಿಸಿ ಇನ್ನುಳಿದವರ ಪತ್ತೆಗೆ ಶೋಧಕಾರ್ಯ ಮುಂದುವರಿಸಿದ್ದಾರೆ.

20 ಅಂಗಡಿಗಳಿಗೆ ಹಾನಿ, 8 ಬೈಕ್ ಆಹುತಿ:

ಗಣೇಶ ಮೂರ್ತಿ ಮೆರವಣಿಗೆ ವೇಳೆ ಎರಡು ಕೋಮಿನ ನಡುವೆ ಉಂಟಾಗಿರುವ ಈ ಘರ್ಷಣೆಯಿಂದಾಗಿ ಪಟ್ಟಣದ ಸಾಧನ ಟೆಕ್ಸ್‌ಟೈಲ್ಸ್, ಪಾತ್ರೆ ಅಂಗಡಿಗಳು, ಹಣ್ಣಿನ ಅಂಗಡಿಗಳು, ಚಪ್ಪಲಿ ಮತ್ತು ಬಳೆ ಅಂಗಡಿಗಳು, ಕಾಫಿ ಟೀ ಅಂಗಡಿಗಳು, ಗ್ಯಾರೇಜ್, ಪಂಚರ್‌ ಶಾಪ್ ಸೇರಿದಂತೆ ೨೦ಕ್ಕೂ ಹೆಚ್ಚು ಅಂಗಡಿಗಳು ಹಾಗೂ ರಸ್ತೆ ಬದಿ ನಿಲ್ಲಿಸಿದ್ದ ಕೆಲ ಬೈಕ್‌ಗಳು ಸುಟ್ಟು ಭಸ್ಮವಾಗಿವೆ. ಮೈಸೂರು ರಸ್ತೆಯಲ್ಲಿರುವ ಬಜಾಜ್ ಶೋರೂಂನ ಮುಂಭಾಗ ಅಳವಡಿಸಿದ್ದ ದೊಡ್ಡ ದೊಡ್ಡ ಗಾಜುಗಳನ್ನು ದ್ವಂಸಗೊಳಿಸಿ, ಸಿಸಿ ಕ್ಯಾಮೆರಾ ನಾಶಪಡಿಸಿ ಮಾರಾಟಕ್ಕಿಟ್ಟಿದ್ದ ಲಕ್ಷಾಂತರ ಮೌಲ್ಯದ ೮ಹೊಸ ಬೈಕ್‌ಗಳನ್ನು ಕದ್ದೊಯ್ಯಲಾಗಿದೆ. ಅಲ್ಲದೇ, ಶೋಂ ರೂಂನಲ್ಲೇ ಒಂದು ಬೈಕನ್ನು ಜಖಂಗೊಳಿಸಲಾಗಿದೆ. ಘಟನೆಯಿಂದಾಗಿ ಕೋಟ್ಯಂತರ ರು. ನಷ್ಟವಾಗಿದೆ.

ಎರಡೂ ಗುಂಪಿನ ಕಿಡಿಗೇಡಿಗಳ ಆಕ್ರೋಶಕ್ಕೆ ಸಾಧನಾ ಟೆಕ್ಸ್‌ಟೈಲ್ಸ್‌ನಲ್ಲಿದ್ದ ೨ ಕೋಟಿಗೂ ಹೆಚ್ಚು ಮೌಲ್ಯದ ಬಟ್ಟೆಗಳು, ಶ್ರೀನಿವಾಸ ಹಾರ್ಡ್‌ವೇರ್ ಮತ್ತು ಜಯರಾಮೇಗೌಡ ಸಬ್‌ಮರ್ಸಿಬಲ್ಸ್‌ನಲ್ಲಿದ್ದ ಲಕ್ಷಾಂತರ ಮೌಲ್ಯದ ಪಂಪ್, ಮೋಟಾರ್‌ಗಳು, ಪಾತ್ರೆ, ಹಣ್ಣು, ಚಪ್ಪಲಿ ಮತ್ತು ಅಲಂಕಾರಿಕ ವಸ್ತುಗಳಿದ್ದ ಅಂಗಡಿಗಳು, ರಸ್ತೆ ಬದಿ ನಿಂತಿದ್ದ ಕೆಲ ಬೈಕ್‌ಗಳು, ಸ್ಕೂಟರ್‌ಗ್ಯಾರೇಜ್, ಪಂಚರ್ ಶಾಪ್, ಟೈಲರ್, ಕಾಫಿ ಟೀ ಶಾಪ್ ಸೇರಿದಂತೆ ೨೦ಕ್ಕೂ ಹೆಚ್ಚು ಅಂಗಡಿಗಳು ಬೆಂಕಿಗಾಹುತಿಯಾಗಿವೆ.

ಬೆಂಕಿ ನಂದಿಸುವುದಕ್ಕೆ ಹರಸಾಹಸ:

ಬೇಕರಿ, ದಿನಸಿ ಸೇರಿದಂತೆ ಹಲವು ಅಂಗಡಿ ಮುಂಗಟ್ಟುಗಳ ಬಾಗಿಲುಗಳು ಕಿಡಿಗೇಡಿಗಳು ನಡೆಸಿದ ದಾಂಧಲೆಯಿಂದ ಜಖಂಗೊಂಡವು. ತಡರಾತ್ರಿ ೧೨ಗಂಟೆವರೆಗೂ ನಾಗಮಂಗಲ ಪಟ್ಟಣದಲ್ಲಿ ಬೆಂಕಿ ಹೊತ್ತಿ ಉರಿಯಿತು. ಸ್ಥಳಕ್ಕಾಗಮಿಸಿದ ಅಗ್ನಿಶಾಮಕ ದಳದ ಸಿಬ್ಬಂದಿ ಹರಸಾಹಸ ಪಟ್ಟು ಬೆಂಕಿ ನಂದಿಸಿದರೆ, ಪೊಲೀಸರು ಇಡೀ ರಾತ್ರಿ ಪಟ್ಟಣ ವ್ಯಾಪ್ತಿಯ ಎಲ್ಲ ರಸ್ತೆಗಳಲ್ಲಿ ಗಸ್ತು ನಡೆಸಿ ಪರಿಸ್ಥಿತಿಯನ್ನು ಹತೋಟಿಗೆ ತಂದರು.

ಒಂದು ಟ್ರ್ಯಾಕ್ಟರ್‌ನಷ್ಟು ಕಲ್ಲು, ಗಾಜಿನ ಚೂರುಗಳ ತೆರವು:

ಕಿಡಿಗೇಡಿಗಳು ನಡೆಸಿದ ಕಲ್ಲು ಮತ್ತು ಬಾಟಲ್‌ಗಳ ತೂರಾಟದಿಂದ ಪುರಸಭೆ ಕಚೇರಿಯ ಕಿಟಕಿ ಗಾಜುಗಳು ಪುಡಿ ಪುಡಿಯಾಗಿವೆ. ಕಲ್ಲು ಮತ್ತು ಬಾಟಲ್‌ಗಳ ತೂರಾಟದಿಂದ ಪಟ್ಟಣದ ಮಂಡ್ಯ ಸರ್ಕಲ್ ಹಾಗೂ ಟಿ.ಮರಿಯಪ್ಪ ವೃತ್ತದ ರಾಷ್ಟ್ರೀಯ ಹೆದ್ದಾರಿ ರಸ್ತೆಯಲ್ಲಿ ಬಿದ್ದಿದ್ದ ಒಂದು ಟ್ರ್ಯಾಕ್ಟರ್‌ನಷ್ಟು ಕಲ್ಲು ಹಾಗೂ ಗಾಜಿನ ಚೂರುಗಳನ್ನು ಗುರುವಾರ ನಸುಕಿನಲ್ಲಿಯೇ ಪುರಸಭೆಯ ಪೌರಕಾರ್ಮಿಕರು ತೆರವುಗೊಳಿಸಿ ಹೆದ್ದಾರಿಯ ವಾಹನ ಸಂಚಾರಕ್ಕೆ ಅನುವು ಮಾಡಿಕೊಟ್ಟರು.

ಸೆ.14ರವರೆಗೆ ನಿಷೇಧಾಜ್ಞೆ:

ಗಣಪತಿ ವಿಸರ್ಜನೆಗೂ ಮುನ್ನ ನಡೆದ ಮೆರವಣಿಗೆ ವೇಳೆ ಎರಡು ಕೋಮಿನ ನಡುವೆ ಉಂಟಾದ ಘರ್ಷಣೆಯಿಂದಾಗಿ ಉದ್ವಿಗ್ನವಾಗಿರುವ ಪರಿಸ್ಥಿತಿಯನ್ನು ಸಂಪೂರ್ಣವಾಗಿ ಹತೋಟಿಗೆ ತಂದು ಶಾಂತಿ ಸುವ್ಯವಸ್ಥೆ ಕಾಪಾಡುವ ಸಲುವಾಗಿ ಬುಧವಾರ ರಾತ್ರಿಯಿಂದ ಸೆ.14ರ ಶನಿವಾರ ರಾತ್ರಿ  10 ಗಂಟೆವರೆಗೆ ಪಟ್ಟಣದಾದ್ಯಂತ 144 ಸೆಕ್ಷನ್ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ.

ಮದ್ಯ ಮಾರಾಟ ನಿಷೇಧ:

ಪಟ್ಟಣದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡುವ ಸಲುವಾಗಿ ಸೆ.೧೨ರ ಬೆಳಗ್ಗೆ ೬ ಗಂಟೆಯಿಂದ ಸೆ.೧೩ ರ ರಾತ್ರಿ 12 ಗಂಟೆಯವರೆಗೆ ನಾಗಮಂಗಲ ಪಟ್ಟಣ ಹಾಗೂ ಅದರ ಸುತ್ತಮುತ್ತಲಿನ 3 ಕಿ.ಮೀ. ವ್ಯಾಪ್ತಿಯಲ್ಲಿ ಬರುವ ಎಲ್ಲಾ ತರಹದ ಮದ್ಯದ ಅಂಗಡಿ, ಬಾರ್ ಮತ್ತು ರೆಸ್ಟೋರೆಂಟ್‌ಗಳನ್ನು ಮುಚ್ಚುವಂತೆ ಹಾಗೂ ಮದ್ಯ ಮಾರಾಟ, ಮದ್ಯ ಸಂಗ್ರಹಣೆ, ಮದ್ಯ ಸಾಗಾಣಿಕೆ ಮತ್ತು ಶೇಖರಣೆ ಮಾಡುವುದನ್ನು ನಿಷೇಧಿಸಿ ಜಿಲ್ಲಾಧಿಕಾರಿ ಡಾ. ಕುಮಾರ ಆದೇಶ ಹೊರಡಿಸಿದ್ದಾರೆ. ಕರ್ನಾಟಕ ಅಬಕಾರಿ ಕಾಯ್ದೆ 1965 ರ ಕಲಂ 21ರನ್ವಯ ಪ್ರದತ್ತವಾದ ಅಧಿಕಾರವನ್ನು ಚಲಾಯಿಸಿ ಈ ಆದೇಶವನ್ನು ಹೊರಡಿಸಲಾಗಿದೆ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ:

ನಾಗಮಂಗಲ ಪಟ್ಟಣದಲ್ಲಿ ಉದ್ರಿಕ್ತ ಪರಿಸ್ಥಿತಿ ನೆಲೆಸಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆಯಾಗಿ ಪಟ್ಟಣ ವ್ಯಾಪ್ತಿಯ ಎಲ್ಲ ಶಾಲಾ-ಕಾಲೇಜುಗಳು ಮತ್ತು ಅಂಗನವಾಡಿಗಳಿಗೆ ಗುರುವಾರ (ಸೆ.12) ರಜೆ ಘೋಷಿಸಿ ಜಿಲ್ಲಾಧಿಕಾರಿ ಡಾ.ಕುಮಾರ ಆದೇಶ ಹೊರಡಿಸಿದ್ದರು.

ಅಘೋಷಿತ ಬಂದ್:

ಗಣೇಶ ಮೆರವಣಿಗೆಯಲ್ಲಿ ಉಂಟಾದ ಗಲಭೆ ಪ್ರಕರಣದಿಂದಾಗಿ ಗುರುವಾರ ಪಟ್ಟಣದಲ್ಲಿ ಅಘೋಷಿತ ಬಂದ್ ಮಾಡಲಾಗಿತ್ತು. ಪಟ್ಟಣದಲ್ಲಿ ಹಾಲು, ತರಕಾರಿ, ಔಷಧಿ ಅಂಗಡಿಗಳನ್ನು ಹೊರತುಪಡಿಸಿ ಇನ್ಯಾವುದೇ ಸಣ್ಣ ಪುಟ್ಟ ಅಂಗಡಿಗಳನ್ನೂ ಸಹ ತೆರೆದಿರಲಿಲ್ಲ. ಚಾಮರಾಜನಗರ ಜೀವರ್ಗಿ ರಾಷ್ಟ್ರೀಯ ಹೆದ್ದಾರಿಯ ಮೈಸೂರು ರಸ್ತೆ, ತುಮಕೂರು ರಸ್ತೆ, ಮಂಡ್ಯ ರಸ್ತೆ ಸೇರಿದಂತೆ ಸದಾ ಕಾಲ ಜನಜಂಗುಳಿಯಿಂದ ಕೂಡಿರುತ್ತಿದ್ದ ಕೆಎಸ್‌ಟಿ ರಸ್ತೆ, ಸಂತೆ ಬೀದಿ, ಮಾರ್ಕೆಟ್ ರಸ್ತೆ ಬಿಕೋ ಎನ್ನುತ್ತಿದ್ದವು. ಜನ ಹಾಗೂ ವಾಹನ ಸಂಚಾರ ವಿರಳವಾಗಿತ್ತು.

ಪ್ರತ್ಯೇಕ ಪ್ರತಿಭಟನೆ:

ನಮ್ಮವರದ್ದು ಏನೂ ತಪ್ಪಿಲ್ಲ. ಯಾವುದೇ ತಪ್ಪಿಲ್ಲದಿದ್ರು ನಮ್ಮವರನ್ನ ಕರೆತಂದಿದ್ದಾರೆ. ನಮ್ಮವರು ಎಲ್ಲಿದ್ದಾರೆ, ಹೇಗಿದ್ದಾರೆ ಅನ್ನೋ ಮಾಹಿತಿಯೂ ಇಲ್ಲ ಎಂದು ಹಿಂದು ಹಾಗೂ ಮುಸ್ಲಿಂ ಮಹಿಳೆಯರು ನಾಗಮಂಗಲ ಟೌನ್ ಪೊಲೀಸ್ ಠಾಣೆ ಎದುರು ಗುರುವಾರ ಪ್ರತ್ಯೇಕ ಪ್ರತಿಭಟನೆ ನಡೆಸಿದರು.

ಮಧ್ಯರಾತ್ರಿ ವೇಳೆ ಪೊಲೀಸರು ಮನೆಗೆ ನುಗ್ಗಿ ಕರೆದೊಯ್ದರು ಎಂದು ಮುಸ್ಲಿಂ ಮಹಿಳೆಯರು ವಾದಿಸಿದರೆ, ಗಲಭೆ ಸೃಷ್ಟಿಸಿದವರನ್ನ ಬಿಟ್ಟು, ಗಣೇಶ ಮೂರ್ತಿ ಪ್ರತಿಷ್ಠ್ಠಾಪಿಸಿದವರನ್ನು ಪೊಲೀಸರು ಕರೆದೊಯ್ದಿದ್ದಾರೆ. ನಮ್ಮವರು ಎಲ್ಲಿದ್ದಾರೆ, ಹೇಗಿದ್ದಾರೆ ಗೊತ್ತಿಲ್ಲದೆ ಆತಂಕದಲ್ಲಿದ್ದೇವೆ. ನಾವೇನು ಅವರಪ್ಪನ ಮನೆ ರಸ್ತೆಯಲ್ಲಿ ಮೆರವಣಿಗೆ ಮಾಡಿಲ್ಲ. ಸರ್ಕಾರಿ ರಸ್ತೆಯಲ್ಲಿ ಗಣೇಶ ಮೂರ್ತಿ ಮೆರವಣಿಗೆ ನಡೆಯುತ್ತಿತ್ತು. ಇದನ್ನು ಸಹಿಸದ ಕಿಡಿಗೇಡಿಗಳು ಗಲಭೆ ಸೃಷ್ಠಿಸಿದ್ದಾರೆ. ಅಂತಹವರನ್ನು ಬಿಟ್ಟು ಗಣೇಶ ಕೂರಿಸಿದವರನ್ನೇ ವಶಕ್ಕೆ ಪಡೆದಿದ್ದಾರೆ ಎಂದು ಬದರಿಕೊಪ್ಪಲಿನ ಮಹಿಳೆಯರು ಪೊಲೀಸರ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.

ಈ ವೇಳೆ ಮಹಿಳೆಯರಿಗೆ ಕಾನೂನು ಪಾಠ ಮಾಡಿದ ಜಿಲ್ಲಾ ಎಸ್‌ಪಿ ಮಲ್ಲಿಕಾರ್ಜುನ ಬಾಲದಂಡಿ ವಿಚಾರಣೆ ಮಾಡಲು ಕರೆತಂದಿದ್ದೇವೆ. ತಪ್ಪು ಮಾಡಿಲ್ಲದವರನ್ನು ಬಿಟ್ಟು ಕಳುಹಿಸುತ್ತೇವೆ. 144 ಸೆಕ್ಷನ್ ಜಾರಿಯಲ್ಲಿದೆ. ಗುಂಪುಗೂಡದೆ ಮನೆಗೆ ತೆರಳಿ ಎಂದು ಮನವೊಲಿಸಿದರು. ಆಗ ಹಿಡಿಶಾಪ ಹಾಕಿ ಧಿಕ್ಕಾರ ಕೂಗಿದ ಮಹಿಳೆಯರು ಸ್ಥಳದಿಂದ ನಿರ್ಗಮಿಸಿದರು.

ಪೂರ್ವ ನಿಯೋಜಿತ ಕೃತ್ಯವೇ?:

ಪಟ್ಟಣದಲ್ಲಿ ಬುಧವಾರ ರಾತ್ರಿ ಎರಡು ಕೋಮಿನ ನಡುವೆ ಉಂಟಾದ ಗಲಭೆ ಪೂರ್ವ ನಿಯೋಜಿತ ಕೃತ್ಯವಾಗಿರಬಹುದೆಂಬ ಅನುಮಾನ ಸಾರ್ವಜನಿಕ ವಲಯದಲ್ಲಿ ವ್ಯಾಪಕವಾಗಿ ಕೇಳಿ ಬರುತ್ತಿದೆ. ಕಳೆದ ವರ್ಷ ಪಟ್ಟಣದ ಕೋಟೆ ಗಣಪತಿ ವಿಸರ್ಜನೆಯ ವೇಳೆ ಇದೇ ದರ್ಗಾ ಮುಂಭಾಗದಲ್ಲಿ ಗಣಪತಿ ಮೆರವಣಿಗೆ ಬರುತ್ತಿದ್ದಂತೆ ಹಿಂದೂ-ಮುಸ್ಲಿಂ ಯುವಕರ ನಡುವೆ ಮಾತಿನ ಚಕಮಕಿ, ವಾಗ್ವಾದ ನಡೆದಿತ್ತು. ಆ ವೇಳೆ ಪೊಲೀಸರು ಪರಿಸ್ಥಿತಿಯನ್ನು ತಿಳಿಗೊಳಿಸಿದ್ದರು. ಕಳೆದ ವರ್ಷದ ಸೇಡು ತೀರಿಸಿಕೊಳ್ಳಲು ಬುಧವಾರ ರಾತ್ರಿ ಗಲಭೆ ಸೃಷ್ಟಿಸಿರಬಹುದು. ಇಲ್ಲದಿದ್ದಲ್ಲಿ ಕಿಡಿಗೇಡಿಗಳಿಗೆ ಏಕಾಏಕಿ ಅಷ್ಟೊಂದು ಕಲ್ಲುಗಳು, ಬಾಟಲ್‌ಗಳು ಸಿಕ್ಕಿದ್ದಾದರೂ ಹೇಗೆ. ಪೆಟ್ರೋಲ್ ಬಾಂಬ್‌ಗಳು, ಮಚ್ಚು, ಲಾಂಗ್‌ಗಳು ಎಲ್ಲಿಂದ ಬಂದವು. ಸಂಘರ್ಷದ ಮುನ್ಸೂಚನೆ ಇದ್ದರೂ ಕೂಡ ಸೂಕ್ಷ್ಮ ಪ್ರದೇಶವೆಂದು ಪರಿಗಣಿಸಿ ಭದ್ರತೆ ಹೆಚ್ಚಿಸುವಲ್ಲಿ ಸ್ಥಳೀಯ ಪೊಲೀಸರು ನಿರ್ಲಕ್ಷ್ಯವಹಿಸಿದ್ದರು. ಇದರ ಲಾಭ ಪಡೆದು ನಿಯೋಜಿಸಿದ್ದ ಪೊಲೀಸ್ ಭದ್ರತೆ ನಡುವೆಯೂ ಕಿಡಿಗೇಡಿಗಳು ಗಲಭೆಗೆ ಸಂಚು ರೂಪಿಸಿದ್ದರೇ ಎಂಬ ಅನುಮಾನದ ಮಾತುಗಳು ಕೇಳಿಬರುತ್ತಿವೆ.

ಪೊಲೀಸ್ ಪಥ ಸಂಚಲನ:

ಕೋಮು ಸಂಘರ್ಷದಿಂದ ಬೂದಿ ಮುಚ್ಚಿದ ಕೆಂಡದಂತಾಗಿರುವ ನಾಗಮಂಗಲ ಪಟ್ಟಣವನ್ನು ಸಹಜ ಸ್ಥಿತಿಗೆ ತರಲು ಎಲ್ಲ ರೀತಿಯಲ್ಲೂ ಪೊಲೀಸರು ಸಜ್ಜಾಗಿದ್ದಾರೆ. ಜನರ ರಕ್ಷಣೆಗೆ ನಾವಿದ್ದೇವೆ. ಅಹಿತಕರ ಘಟನೆಗಳಿಗೆ ಅವಕಾಶಕೊಡುವುದಿಲ್ಲ. ಸಾರ್ವಜನಿಕರು ಯಾವುದೇ ವದಂತಿಗಳಿಗೆ ಕಿವಿಕೊಡಬಾರದು. ಶಾಂತಿ ನೆಮ್ಮದಿ ಕದಡುವವರ ವಿರುದ್ಧ ನಿರ್ಧಾಕ್ಷೀಣ್ಯ ಕ್ರಮ ಜರುಗಿಸುವ ಸಂದೇಶದೊಂದಿಗೆ ಪಟ್ಟಣದ ಕೆಲವು ರಸ್ತೆಗಳಲ್ಲಿ ಪಥ ಸಂಚಲನ ನಡೆಸಿದ ಖಾಕಿ ಪಡೆ ಜನರಲ್ಲಿ ಧೈರ್ಯ ತುಂಬಿದೆ.

ಬಿಗಿ ಬಂದೋಬಸ್ತ್:

ಪಟ್ಟಣದಾದ್ಯಂತ ಬಿಗಿ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದ್ದು, ಪೊಲೀಸರು ಎಲ್ಲೆಡೆ ಹದ್ದಿನ ಕಣ್ಣಿಟ್ಟಿದ್ದಾರೆ. ಆಯಕಟ್ಟಿನ ಸ್ಥಳಗಳಲ್ಲಿ ಕೆಎಸ್‌ಆರ್‌ಪಿ ತುಕಡಿಗಳನ್ನು ಹಾಕಲಾಗಿದೆ. ಬಂದೋಬಸ್ತ್‌ಗಾಗಿ 12 ಕೆಎಸ್‌ಆರ್‌ಪಿ ತುಕಡಿ ಇಬ್ಬರು ಎಸ್‌ಪಿ, ೫ಮಂದಿ ಡಿವೈಎಸ್‌ಪಿ, ೧೫ಮಂದಿ ಸಿಪಿಐ, ೩೦ಮಂದಿ ಪಿಎಸ್‌ಐಗಳು ಸೇರಿ ಒಟ್ಟು ೨೫೦ಕ್ಕೂ ಹೆಚ್ಚು ಪೊಲೀಸ್ ಹಾಗೂ ಗೃಹರಕ್ಷಕ ದಳದ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ.

ನಿರ್ಧಾಕ್ಷಿಣ್ಯ ಕ್ರಮ

ಗಣೇಶ ಮೆರವಣಿಗೆ ಸಮಯದಲ್ಲಿ ಎರಡು ಕೋಮಿನ ನಡುವೆ ಉಂಟಾದ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾವು ಯಾರ ಪರವೂ ಇಲ್ಲ, ವಿರೋಧವೂ ಇಲ್ಲ. ತಪ್ಪಿತಸ್ಥರ ವಿರುದ್ಧ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು. ಗಲಭೆಯಿಂದಾಗಿ ಹಲವು ಅಮಾಯಕರಿಗೆ ತೊಂದರೆ ಆಗಿದೆ. ಅಂಗಡಿಗಳಿಗೆ ಬೆಂಕಿ ಹಚ್ಚಿ ಸಾಕಷ್ಟು ನಷ್ಟ ಮಾಡಿದ್ದಾರೆ. ಈಗಾಗಲೇ ಸಿಸಿಟಿವಿ, ಮೊಬೈಲ್ ವಿಡಿಯೋ ಆಧರಿಸಿ ಪ್ರಮುಖ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನು ಸಾಕಷ್ಟ್ಟು ಜನ ಆರೋಪಿಗಳನ್ನು ಬಂಧಿಸಬೇಕಿದೆ. ಅಮಾಯಕರಿದ್ದರೆ ಖಂಡಿತ ಬಿಡುಗಡೆ ಮಾಡುತ್ತೇವೆ. ಮುಂದೆ ಇಂತಹ ಅಹಿತಕರ ಘಟನೆಗಳು ನಡೆಯದಂತೆ ಕ್ರಮ ಜರುಗಿಸಲಾಗುವುದು. ಜನರು ಆತಂಕಪಡುವ ಅಗತ್ಯವಿಲ್ಲ.

-ಮಲ್ಲಿಕಾರ್ಜುನ ಬಾಲದಂಡಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ