ಕಾರ್ಕಳ: ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದಲ್ಲಿ ಕಾರ್ಯನಿರ್ವಹಿಸುತ್ತಿರುವ ಕಾರ್ಕಳ ಸಾಂತ್ವನ ಕೇಂದ್ರದ ವ್ಯಾಪ್ತಿಯಲ್ಲಿ ಅಜೆಕಾರು, ಕಾರ್ಕಳ ಹಾಗೂ ಹೆಬ್ರಿ ಹೋಬಳಿಗಳು ಸೇರಿವೆ. ಇತ್ತೀಚಿನ ದಿನಗಳಲ್ಲಿ ಜಾಲ ತಾಣಪ್ರಭಾವದಿಂದ ಕೌಟುಂಬಿಕ ಕಲಹ ಪ್ರಕರಣಗಳು ಹೆಚ್ಚುತ್ತಿವೆ ಎಂಬ ಅಭಿಪ್ರಾಯವಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಪ್ರಕರಣಗಳ ಸಂಖ್ಯೆ ಜಾಸ್ತಿಯಾಗಿದೆ.
2017-18ರಿಂದ ಕಳೆದ ಐದು ವರ್ಷಗಳಲ್ಲಿ ಸಾಂತ್ವನ ಕೇಂದ್ರದಲ್ಲಿ 1,311ಕ್ಕೂ ಅಧಿಕ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 940ಕ್ಕೂ ಹೆಚ್ಚು ಪ್ರಕರಣಗಳನ್ನು ಯಶಸ್ವಿಯಾಗಿ ಇತ್ಯರ್ಥಪಡಿಸಲಾಗಿದೆ. ಉಳಿದ ಪ್ರಕರಣಗಳನ್ನು ಅಗತ್ಯ ಕಾನೂನು ಕ್ರಮಕ್ಕಾಗಿ ಪೊಲೀಸ್ ಠಾಣೆಗಳಿಗೆ ವರ್ಗಾಯಿಸಲಾಗಿದೆ.ಕೇಂದ್ರದಲ್ಲಿ ಲೈಂಗಿಕ ಕಿರುಕುಳ, ವರದಕ್ಷಿಣೆ ಕಿರುಕುಳ, ಕೌಟುಂಬಿಕ ಕಲಹ, ಅಕ್ರಮ ಸಂಬಂಧಗಳು, ಪ್ರೇಮ ಪ್ರಕರಣಗಳು, ಮಾನಸಿಕ ಸಮಸ್ಯೆಗಳು, ಜಾಗ, ಆಸ್ತಿ ವಿವಾದಗಳು, ಸಾಲ ಸಂಬಂಧಿತ ಪ್ರಕರಣಗಳು ಸೇರಿದಂತೆ ವಿವಿಧ ರೀತಿಯ ದೂರುಗಳನ್ನು ಪರಿಶೀಲಿಸಿ ಸಮಾಲೋಚನೆ ಮೂಲಕ ಪರಿಹರಿಸಲಾಗುತ್ತಿದೆ. ತಿಂಗಳಿಗೆ ಸರಾಸರಿ 20ಕ್ಕೂ ಹೆಚ್ಚು ಹೊಸ ಪ್ರಕರಣಗಳು ದಾಖಲಾಗುತ್ತಿವೆ.ಕಾರ್ಕಳ ತಾಲೂಕಿನಲ್ಲಿ ಕೌಟುಂಬಿಕ ಹಿಂಸೆ, ಗಂಡ-ಹೆಂಡತಿ ನಡುವಿನ ಕಲಹ ಹಾಗೂ ಮದ್ಯಪಾನದ ಪರಿಣಾಮದಿಂದ ಉಂಟಾಗುವ ಸಮಸ್ಯೆಗಳೇ ಹೆಚ್ಚಿನ ಸಂಖ್ಯೆಯಲ್ಲಿ ದಾಖಲಾಗುತ್ತಿವೆ. ಇದಲ್ಲದೆ, 480ಕ್ಕೂ ಹೆಚ್ಚು ದಾಂಪತ್ಯ ಮತ್ತು ಕುಟುಂಬ ಕಲಹ ಪ್ರಕರಣಗಳಲ್ಲಿ ಸಾಮಾಜಿಕ ಜಾಲತಾಣಗಳ ದುರ್ಬಳಕೆ ಹಾಗೂ ಅಕ್ರಮ ಸಂಬಂಧಗಳೇ ಪ್ರಮುಖ ಕಾರಣಗಳಾಗಿ ಕಂಡುಬಂದಿವೆ ಎಂದು ಕೇಂದ್ರದ ಅಧಿಕಾರಿಗಳು ತಿಳಿಸಿದ್ದಾರೆ.ಸಾಂತ್ವನ ಕೇಂದ್ರದ ಅಧ್ಯಕ್ಷೆಯಾಗಿ ಯಶೋಧ ಎಸ್. ಶೆಟ್ಟಿ ಕಾರ್ಯನಿರ್ವಹಿಸುತ್ತಿದ್ದು, ಸಮಾಲೋಚಕರಾಗಿ ಶ್ರದ್ಧಾ ಜೈನ್ ಹಾಗೂ ಸಮಾಜ ಸೇವಾ ಕಾರ್ಯಕರ್ತೆಯಾಗಿ ಸುಪ್ರಿಯಾ ಸೇವೆ ಸಲ್ಲಿಸುತ್ತಿದ್ದಾರೆ. .ಕೇಂದ್ರ ಹಾಗೂ ರಾಜ್ಯ ಸರ್ಕಾರದ ಸಹಯೋಗದೊಂದಿಗೆ ಶಿಶುಪಾಲನಾ ಕೇಂದ್ರವೂ ಕಾರ್ಯನಿರ್ವಹಿಸುತ್ತಿದ್ದು, ಪ್ರಸ್ತುತ ಸುಮಾರು 15 ಸರ್ಕಾರಿ ನೌಕರರ ಮಕ್ಕಳು ಇಲ್ಲಿ ಆರೈಕೆ ಮತ್ತು ಪೂರ್ವಶಿಕ್ಷಣ ಪಡೆಯುತ್ತಿದ್ದಾರೆ.ಸಾಮಾಜಿಕ ಜಾಲತಾಣಗಳ ಪ್ರಭಾವದಿಂದ ಕುಟುಂಬಗಳಲ್ಲಿ ಅನುಮಾನ, ಭಿನ್ನಾಭಿಪ್ರಾಯ ಮತ್ತು ಕಲಹಗಳು ಹೆಚ್ಚುತ್ತಿರುವುದು ಇತ್ತೀಚಿನ ಪ್ರಕರಣಗಳಲ್ಲಿ ಸ್ಪಷ್ಟವಾಗಿ ಕಂಡುಬರುತ್ತಿದೆ ಎಂದು ಸಾಂತ್ವನ ಕೇಂದ್ರ ಮೂಲಗಳು ತಿಳಿಸಿದೆ.
ಮಹಿಳೆಯರು ಮತ್ತು ಮಕ್ಕಳಿಗೆ ಯಾವುದೇ ರೀತಿಯ ಸಮಸ್ಯೆ ಎದುರಾದರೆ ಭಯಪಡದೆ ಸಾಂತ್ವನ ಕೇಂದ್ರ ಸಂಪರ್ಕಿಸಬೇಕು. ಸಮಯೋಚಿತ ಸಮಾಲೋಚನೆಯಿಂದ ಅನೇಕ ಕುಟುಂಬಗಳನ್ನು ಒಗ್ಗೂಡಿಸಲು ಸಾಧ್ಯ-ಯಶೋಧ ಎಸ್. ಶೆಟ್ಟಿ, ಸಾಂತ್ವನ ಕೇಂದ್ರ, ಮಹಿಳಾ ಮಂಡಳಿಗಳ ಒಕ್ಕೂಟ ಕಾರ್ಕಳ