ಪೊಲೀಸ್ ಅಧಿಕಾರಿ ಮಂಗಳಮ್ಮ ಮಾತನಾಡಿ ಕೇವಲ ಕಾಯ್ದೆ - ಕಾನೂನುಗಳಿಂದ ಮಾತ್ರ ಈ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ನಡವಳಿಕೆಯ ಮೇಲೆ ಕಣ್ಣಿಡಬೇಕು ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ, ತುಮಕೂರು

ಇಂದು ಮಾದಕ ದ್ರವ್ಯಗಳ ವ್ಯಸನವು ಯುವ ಸಮೂಹವನ್ನು ಹುಳದಂತೆ ಕೊರೆಯುತ್ತಿದೆ. ಚಿಕ್ಕ ವಯಸ್ಸಿನಲ್ಲೇ ಮಕ್ಕಳು ಗಾಂಜಾ, ಡ್ರಗ್ಸ್, ಸಿಗರೇಟ್ ಮತ್ತು ಮದ್ಯಪಾನದಂತಹ ದುಶ್ಚಟಗಳಿಗೆ ಬಲಿಯಾಗುತ್ತಿದ್ದಾರೆ. ಇದು ಕೇವಲ ವ್ಯಕ್ತಿಯ ಆರೋಗ್ಯವನ್ನು ಮಾತ್ರ ಹಾಳು ಮಾಡುವುದಿಲ್ಲ, ಬದಲಿಗೆ ಅವರ ಇಡೀ ಕುಟುಂಬವನ್ನೇ ಬೀದಿಗೆ ತಳ್ಳುತ್ತದೆ. ಸಮಾಜದಲ್ಲಿ ಅಪರಾಧಗಳು ಹೆಚ್ಚಾಗಲು, ನೆಮ್ಮದಿ ಕಡಮೆಯಾಗಲು ಇಂತಹ ವ್ಯಸನಗಳೇ ಪ್ರಮುಖ ಕಾರಣವಾಗಿವೆ ಎಂದು ತುಮಕೂರು ವಿವಿ ಐಕ್ಯೂಎಸಿ ನಿರ್ದೇಶಕ ಪ್ರೊ. ಪರಶುರಾಮ ಕೆ.ಜಿ. ಅಭಿಪ್ರಾಯಪಟ್ಟರು.

ತುಮಕೂರು ವಿಶ್ವವಿದ್ಯಾನಿಲಯ, ವಿವಿಯ ವಿವೇಕಾನಂದ ಪ್ರತಿಷ್ಠಾನದ ವತಿಯಿಂದ ತುಮಕೂರು ವಿವಿ ಕಲಾ ಕಾಲೇಜು, ವಿಜ್ಞಾನ ಕಾಲೇಜು, ಶೇಷಾದ್ರಿಪುರಂ ಕಾಲೇಜು, ವಿದ್ಯಾನಿಧಿ, ವಿದ್ಯಾವಾಹಿನಿ ಕಾಲೇಜುಗಳ ಎನ್ಎಸ್ಎಸ್, ಸ್ಕೌಟ್ ಆ್ಯಂಡ್ ಗೈಡ್, ರೋವರ್ಸ್ ಆ್ಯಂಡ್ ರೇಂಜರ್ಸ್ ಗಳ ಸಹಕಾರದೊಂದಿಗೆ ಮಂಗಳವಾರ ನಶೆ ಮುಕ್ತ ಭಾರತ ಅಭಿಯಾನ ಜಾಗೃತಿ ಜಾಥಾಕ್ಕೆ ಚಾಲನೆ ನೀಡಿ ಮಾತನಾಡಿದರು.

ನಮ್ಮ ಸುತ್ತಮುತ್ತ ಯಾರಾದರೂ ಇಂತಹ ವ್ಯಸನಗಳಿಗೆ ಒಳಗಾಗಿದ್ದರೆ ಅವರನ್ನು ಹೀಯಾಳಿಸದೆ, ಪ್ರೀತಿ ಮತ್ತು ಕಾಳಜಿಯಿಂದ ಮುಖ್ಯವಾಹಿನಿಗೆ ತರಲು ಪ್ರಯತ್ನಿಸಬೇಕು. "ದುಶ್ಚಟಗಳಿಂದ ದೂರವಿರೋಣ, ಆರೋಗ್ಯಯುತ ಮತ್ತು ಸದೃಢ ಭಾರತವನ್ನು ನಿರ್ಮಿಸೋಣ " ಎಂಬ ಸಂಕಲ್ಪವನ್ನು ಇಂದೇ ಮಾಡೋಣ ಎಂದು ಹೇಳಿದರು. ತುಮಕೂರು ವಿವಿ ಕಲಾ ಕಾಲೇಜು ಪ್ರಾಂಶುಪಾಲರಾದ ಡಾ. ದಾಕ್ಷಾಯಣಿ ಜಿ. ಮಾತನಾಡಿ, ಇಂದು ಶಾಲಾ-ಕಾಲೇಜು ವಿದ್ಯಾರ್ಥಿಗಳು ಹಾಗೂ ಯುವಜನರು ಡ್ರಗ್ಸ್, ಗಾಂಜಾ ಮತ್ತು ಮದ್ಯಪಾನದಂತಹ ವ್ಯಸನಗಳಿಗೆ ಬಲಿಯಾಗುತ್ತಿರುವುದು ಕಳವಳಕಾರಿ ಸಂಗತಿಯಾಗಿದೆ. ಹಿರಿಯರಾದ ನಾವು ಯುವಕರಿಗೆ ಸರಿಯಾದ ಮಾರ್ಗದರ್ಶನ ನೀಡಬೇಕು ಎಂದು ತಿಳಿಸಿದರು. ತುಮಕೂರು ವಿವಿ ವಿಜ್ಞಾನ ಕಾಲೇಜು ಪ್ರಾಂಶುಪಾಲ ಡಾ. ಎಸ್.ಶ್ರೀನಿವಾಸ್, ಇಂದು ಡ್ರಗ್ಸ್ ಮತ್ತು ಮಾದಕ ದ್ರವ್ಯಗಳ ವ್ಯಸನವು ಕೇವಲ ವ್ಯಕ್ತಿಯ ಆರೋಗ್ಯಕ್ಕೆ ಮಾತ್ರ ಸೀಮಿತವಾಗಿಲ್ಲ; ಇದು ರಾಷ್ಟ್ರೀಯ ಭದ್ರತೆ ಮತ್ತು ಆರ್ಥಿಕತೆಯ ಮೇಲೂ ಗಂಭೀರ ಪರಿಣಾಮ ಬೀರುತ್ತಿದೆ. ಹೀಗಾಗಿ ಇದರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದು ಅಗತ್ಯ ಎಂದು ಹೇಳಿದರು.

ಪೊಲೀಸ್ ಅಧಿಕಾರಿ ಮಂಗಳಮ್ಮ ಮಾತನಾಡಿ ಕೇವಲ ಕಾಯ್ದೆ - ಕಾನೂನುಗಳಿಂದ ಮಾತ್ರ ಈ ಪಿಡುಗನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಲು ಸಾಧ್ಯವಿಲ್ಲ. ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳ ನಡವಳಿಕೆಯ ಮೇಲೆ ಕಣ್ಣಿಡಬೇಕು ಎಂದು ತಿಳಿಸಿದರು.

ನಶೆ ಮುಕ್ತ ಭಾರತ ಅಭಿಯಾನಕ್ಕೆ ತುಮಕೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ. ನಾಗಭೂಷಣ ಎಚ್. ಚಾಲನೆ ನೀಡಿದರು. ಹಿರಿಯ ಪ್ರಾಧ್ಯಾಪಕರಾದ ಪ್ರೊ. ಶೇಟ್ ಪ್ರಕಾಶ್, ಎನ್‌ಸಿಸಿ ಅಧಿಕಾರಿ ಪ್ರೊ. ಅರುಣ್ ಕುಮಾರ್ ಡಿ. ಬಿ., ವಿವೇಕಾನಂದ ಪ್ರತಿಷ್ಠಾನದ ಸಂಚಾಲಕ ಎ.ಎಸ್. ಪಾಟೀಲ್, ವಿವಿಧ ಕಾಲೇಜು ಅಧ್ಯಾಪಕರು, ವಿದ್ಯಾರ್ಥಿಗಳು ಭಾಗವಹಿಸಿದ್ದರು.