ಮಂಗಳೂರಿನ ಬಾರೆಬೈಲ್ ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನಡೆದಿದ್ದು, ನಟ ರಿಷಬ್ ಶೆಟ್ಟಿ, ಪತ್ನಿ ಹಾಗೂ ಮಕ್ಕಳು ಮತ್ತು ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ರಾಮ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಭಾಗಿಯಾಗಿದ್ದರು.
ಮಂಗಳೂರು: ಕಾಂತಾರ ಚಾಪ್ಟರ್ 1 ಸಿನಿಮಾದ ಭರ್ಜರಿ ಯಶಸ್ಸಿನ ಬೆನ್ನಲ್ಲೇ ಚಿತ್ರತಂಡ ಗುರುವಾರ ಮಂಗಳೂರಿಗೆ ಆಗಮಿಸಿ ದೈವದ ಹರಕೆ ತೀರಿಸಿದೆ.
ಮಂಗಳೂರಿನ ಬಾರೆಬೈಲ್ ಜಾರಂದಾಯ ಮತ್ತು ಬಂಟ ದೈವಸ್ಥಾನದಲ್ಲಿ ಹರಕೆ ನೇಮ ನಡೆದಿದ್ದು, ನಟ ರಿಷಬ್ ಶೆಟ್ಟಿ, ಪತ್ನಿ ಹಾಗೂ ಮಕ್ಕಳು ಮತ್ತು ಹೊಂಬಾಳೆ ಫಿಲಂಸ್‌ನ ವಿಜಯ್ ಕಿರಂಗದೂರು, ನಿರ್ದೇಶಕ ಸಂತೋಷ್ ರಾಮ್ ಸೇರಿದಂತೆ ಚಿತ್ರರಂಗದ ಹಲವು ಮಂದಿ ಭಾಗಿಯಾಗಿದ್ದರು.ಸಂಜೆ 5 ಗಂಟೆಗೆ ವಾರಾಹಿ ಪಂಜುರ್ಲಿ ದೈವದ ನೇಮದಲ್ಲಿ ಚಿತ್ರತಂಡ ಭಾಗಿಯಾಗಿದ್ದು, ಗಗ್ಗರ ಸೇವೆ ಜೊತೆಗೆ ಅನ್ನಸಂತರ್ಪಣೆ ಕೂಡ ನಡೆಸಲಾಗಿದೆ. ಎಣ್ಣೆಬೂಳ್ಯದ ಸಂದರ್ಭ ಸ್ವತಃ ರಿಷಬ್ ಶೆಟ್ಟಿ ಮತ್ತವರ ತಂಡ, ಹೊಂಬಾಳೆ ಫಿಲಂನವರು ಭಾಗಿಯಾಗಿದ್ದರು. ಕಳೆದ ಏಪ್ರಿಲ್‌ನಲ್ಲಿ ಇದೇ ದೈವಸ್ಥಾನದ ನೇಮೋತ್ಸವದಲ್ಲಿ ರಿಷಬ್ ಶೆಟ್ಟಿ ಹಾಗೂ ಕುಟುಂಬ ಭಾಗಿಯಾಗಿತ್ತು. ರಿಷಬ್ ಶೆಟ್ಟಿ ಅವರು ತನ್ನ ಮಗನ ಹುಟ್ಟುಹಬ್ಬದ ದಿನ ಬಾರೆಬೈಲು ದೇವಸ್ಥಾನಕ್ಕೆ ಆಗಮಿಸಿದ್ದರು. ಈಗ ಅದೇ ದೇವಸ್ಥಾನದಲ್ಲಿ ಹರಕೆ ನೇಮೋತ್ಸವ ಸಲ್ಲಿಸಿದ್ದಾರೆ.
ಕಳೆದ ಬಾರಿ ‘ಸಿನಿಮಾ ಸಂಸಾರ’ದಲ್ಲಿ ಜಾಗರೂಕತೆಯಿಂದ ಇರುವಂತೆ ಎಚ್ಚರಿಕೆ ದೈವ ಎಚ್ಚರಿಕೆ ನೀಡಿತ್ತು. ಸಿನಿಮಾ ಕ್ಷೇತ್ರ ಎಂದಾಗ ಅಲ್ಲಿ ಶತ್ರುಗಳು ಇರುತ್ತಾರೆ, ಈ ವಿಚಾರದಲ್ಲಿ ಎಚ್ಚರಿಕೆ ಇರಲಿ ಎಂಬ ಸೂಚನೆ ನೀಡಿತ್ತು. ಹರಕೆ ಕಟ್ಟಿಕೊಂಡಿದ್ದರೆ ಅದನ್ನು ಕೊಟ್ಟು ಬಿಡು ಎಂದು ರಿಷಬ್‌ಗೆ ದೈವ ಸೂಚಿಸಿತ್ತು. ಅದರಂತೆ ಸಿನಿಮಾದ ಯಶಸ್ಸಿನ ಬೆನ್ನಲ್ಲೇ ಅದೇ ದೇವಸ್ಥಾನದಲ್ಲಿ ರಿಷಬ್ ಹರಕೆ ಸಲ್ಲಿಕೆ ಮಾಡಿದ್ದಾರೆ.