ಸಾರಾಂಶ
ಹಳಿಯಾಳ:
ಸ್ವಚ್ಛ, ಸುಂದರ ಹಾಗೂ ಮೂಲ ಸೌಲಭ್ಯಗಳನ್ನು ಹೊಂದಿರುವ ಪಟ್ಟಣವೆಂದು ಹೆಸರುವಾಸಿಯಾದ ಹಳಿಯಾಳವು ಭದ್ರತೆಯನ್ನು ಕಳೆದುಕೊಂಡಿದೆಯೇ? ಇಲ್ಲಿ ಸುರಕ್ಷತೆ ಇಲ್ಲವೇ, ಹೀಗೊಂದು ಪ್ರಶ್ನೆ ಚಿಂತೆ, ಆತಂಕವು ಪಟ್ಟಣವಾಸಿಗಳನ್ನು ಕಾಡಲಾರಂಭಿಸಿದೆ.ಕಳೆದ ವಾರ ಗ್ರಾಮಾಂತರ ಭಾಗದಲ್ಲಿ ಹಾಗೂ ಸೋಮವಾರ ರಾತ್ರಿ ಪಟ್ಟಣದಲ್ಲಿ ನಡೆದ ಸರಣಿ ಕಳ್ಳತನದ ಪ್ರಕರಣವು ಪಟ್ಟಣದ ಜನತೆಯನ್ನು ಆತಂಕಕ್ಕೆ ತಳ್ಳಿವೆ.
ಪಟ್ಟಣದ ಪಿಶ್ ಮಾರ್ಕೆಟ್, ಕಾರ್ಪೋರೇಶನ್ ಬ್ಯಾಂಕ್ ರಸ್ತೆ, ಬಸ್ ನಿಲ್ದಾಣ ರಸ್ತೆ ಹೀಗೆ ಜನರ ಹೆಚ್ಚು ಓಡಾಟವಿರುವ ಪ್ರದೇಶದಲ್ಲಿನ ಅಂಗಡಿಗಳಿಗೆ ಕಳ್ಳರು ಕನ್ನ ಹಾಕಿರುವುದು ಪೊಲೀಸ್ ಇಲಾಖೆ ಸೇರಿದಂತೆ ಸಾರ್ವಜನಿಕರಿಗೆ ಸವಾಲನ್ನು ಒಡ್ಡಿದಂತಾಗಿದೆ.ಹಳ್ಳಿಗಳಲ್ಲೂ ಕಳ್ಳತನ: ತಾಲೂಕಿನ ಮುರ್ಕವಾಡ ಗ್ರಾಮದಲ್ಲಿ ಇತ್ತೀಚೆಗೆ ಎರಡು ಮನೆಗಳಲ್ಲಿ ಕಳ್ಳತನವಾಗಿದ್ದ ಘಟನೆ ಮರೆಮಾಚುವ ಮುನ್ನವೇ ಸೋಮವಾರ ರಾತ್ರಿ ಪಟ್ಟಣದಲ್ಲಿ ಐದು ಅಂಗಡಿಗಳ ಕೀಲಿ ಮುರಿದು ಹಣ, ಸಾಮಗ್ರಿ ಕಳ್ಳತನ ಮಾಡಲಾಗಿದೆ.
ಪಟ್ಟಣದಲ್ಲಿ ಸರಣಿ: ಪಟ್ಟಣದ ಪಿಶ್ ಮಾರ್ಕೆಟ್ ಬಳಿಯ ಬೇಕರಿ, ಅದೇ ರಸ್ತೆಯಲ್ಲಿ ಸ್ವಲ್ಪ ದೂರದಲ್ಲಿರುವ ಎಲೆಕ್ಟ್ರಾನಿಕ್ಸ್ ಅಂಗಡಿ, ಹಾಗೂ ಮುಖ್ಯ ಮಾರುಕಟ್ಟೆಯ ಬಳಿಯಿರುವ ಮೊಬೈಲ್ ಅಂಗಡಿ ಮತ್ತು ಬಸ್ ಸ್ಟ್ಯಾಂಡ್ ಬಳಿಯ ಮೊಬೈಲ್ ಅಂಗಡಿಯ ಕೀಲಿ ಮುರಿದು ಹಣವನ್ನು ಕಳವು ಮಾಡಿರುವ ಬಗ್ಗೆ ಮಂಗಳವಾರ ಹಳಿಯಾಳ ಠಾಣೆಗೆ ಬಂದ ಸಂತ್ರಸ್ತ ವ್ಯಾಪಾರಸ್ಥರು ತಿಳಿಸಿದ್ದಾರೆ. ಕಳೆದ ವಾರ ಲೋಕಸಭಾ ಚುನಾವಣೆಯ ಮತದಾನ ನಡೆದ ರಾತ್ರಿ ಪಟ್ಟಣದ ಯಲ್ಲಾಪುರ ನಾಕೆಯ ಬಳಿಯಿರುವ ಬಾರ್‌ವೊಂದರಲ್ಲಿ ಹಣ ಕಳುವಾದ ಪ್ರಕರಣ ನಡೆದಿರುವುದರ ಬಗ್ಗೆ ಈಗ ಮಾಹಿತಿಯು ಬಹಿರಂಗಗೊಂಡಿದೆ.ದೂರು ನೀಡಿಲ್ಲ: ಪಟ್ಟಣದಲ್ಲಿ ಅಂಗಡಿಗಳ ಸರಣಿ ಕಳ್ಳತನದ ಪ್ರಕರಣಗಳು ನಡೆದರೂ ಯಾವೊಬ್ಬ ವ್ಯಾಪಾರಸ್ಥರೂ ದೂರನ್ನು ನೀಡಲು ಮುಂದಾಗದಿರುವುದು ಆಶ್ಚರ್ಯಕರ ಸಂಗತಿ. ಪಟ್ಟಣದಲ್ಲಿ ರಾತ್ರಿ ಹೊತ್ತು ಪೊಲೀಸ್ ಇಲಾಖೆಯಿಂದ ಹೆಚ್ಚಿನ ಗಸ್ತು ಪ್ರಾರಂಭವಾಗಬೇಕಾಗಿದೆ ಎಂಬ ಆಗ್ರಹ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಶೀಘ್ರ ಭೇದಿಸುತ್ತೇವೆ: ಕಳ್ಳತನ ನಡೆದ ಅಂಗಡಿಗಳ ಮಾಲೀಕರು ಯಾರೊಬ್ಬರು ದೂರನ್ನು ನೀಡಲು ಮುಂದಾಗಲಿಲ್ಲ. ಕಳವಿನ ಪ್ರಕರಣದ ಸಮಗ್ರ ಮಾಹಿತಿಯನ್ನು ಕಲೆ ಹಾಕಿದ್ದೇವೆ. ಪಟ್ಟಣದಲ್ಲಿ ನಡೆದ ಸರಣಿ ಕಳ್ಳತನದ ಪ್ರಕರಣವನ್ನು ಇಲಾಖೆಯೇ ಗಂಭೀರವಾಗಿ ಪರಿಗಣಿಸಿದೆ. ಕಳ್ಳರ ಪತ್ತೆಗಾಗಿ ವಿಶೇಷ ತಂಡವನ್ನು ರಚಿಸಿದ್ದು, ಶೀಘ್ರದಲ್ಲಿ ಪ್ರಕರಣ ಭೇದಿಸಲಿದ್ದೇವೆ ಎಂದು ಹಳಿಯಾಳ ಠಾಣೆಯ ಪಿಎಸ್‌ಐ ಮಹಾಂತೇಶ ಕುಂಬಾರ ತಿಳಿಸಿದರು.