ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಪಡೆದು ಬಳ್ಳಾರಿ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನೂ ಹೊತ್ತಿರುವ ಸಚಿವ ಬಿ. ನಾಗೇಂದ್ರ ಅವರ ಮೇಲೆ ಜಿಲ್ಲೆಯ ಜನರು ಭಾರೀ ನಿರೀಕ್ಷೆ ಇಟ್ಟಿದ್ದಾರೆ.
ಮಂಜುನಾಥ ಕೆ.ಎಂ.
ಬಳ್ಳಾರಿ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ಸರ್ಕಾರದ ಸಚಿವ ಸಂಪುಟದಲ್ಲಿ ಮತ್ತೆ ಸ್ಥಾನ ಪಡೆದು ಬಳ್ಳಾರಿ ಜಿಲ್ಲಾ ಉಸ್ತುವಾರಿಯ ಜವಾಬ್ದಾರಿಯನ್ನೂ ಹೊತ್ತಿರುವ ಸಚಿವ ಬಿ. ನಾಗೇಂದ್ರ ಅವರ ಮೇಲೆ ಜಿಲ್ಲೆಯ ಜನರು ಭಾರೀ ನಿರೀಕ್ಷೆ ಇಟ್ಟಿದ್ದಾರೆ. ಎಲ್ಲ ಸಂಪನ್ಮೂಲಗಳಿದ್ದರೂ ಅಭಿವೃದ್ಧಿಯ ಹಲವು ಕ್ಷೇತ್ರಗಳಲ್ಲಿ ನಿರೀಕ್ಷಿತ ಮಟ್ಟದ ಪ್ರಗತಿ ಸಾಧಿಸಲು ಸಾಧ್ಯವಾಗದ ಬಳ್ಳಾರಿಯನ್ನು ಹೊಸ ದಿಕ್ಕಿನತ್ತ ಕೊಂಡೊಯ್ಯುವ ಹೊಣೆಗಾರಿಕೆ ಇದೀಗ ನಾಗೇಂದ್ರ ಅವರ ಹೆಗಲ ಮೇಲೆ ಬಿದ್ದಿದೆ. ಸರ್ಕಾರದ ಅವಧಿ ಇನ್ನೆರಡು ವರ್ಷಗಳಿಗೆ ಸೀಮಿತವಾಗಿರುವ ಹಿನ್ನೆಲೆಯಲ್ಲಿ, ಕಡಿಮೆ ಅವಧಿಯಲ್ಲಿ ಹೆಚ್ಚಿನ ಸಾಧನೆ ಮಾಡುವ ಸವಾಲು ಸಚಿವರ ಮುಂದಿದೆ. ಬಿ. ನಾಗೇಂದ್ರ ಪ್ರತಿನಿಧಿಸುವ ಬಳ್ಳಾರಿ ಗ್ರಾಮೀಣ ಕ್ಷೇತ್ರ ಸೇರಿದಂತೆ ಜಿಲ್ಲೆಯ ಬಹುತೇಕ ಕ್ಷೇತ್ರಗಳಲ್ಲಿ ಮೂಲಸೌಲಭ್ಯಗಳ ಸಾಕಷ್ಟು ಸುಧಾರಣೆ ಅಗತ್ಯವಾಗಿದೆ.ಬಿಎಂಸಿಆರ್‌ಸಿಯ ಅವ್ಯವಸ್ಥೆಗೆ ಕಡಿವಾಣ ಅಗತ್ಯ
ಬಳ್ಳಾರಿ ವೈದ್ಯಕೀಯ ಮಹಾವಿದ್ಯಾಲಯ ಹಾಗೂ ಸಂಶೋಧನಾ ಸಂಸ್ಥೆ (ಬಿಎಂಸಿಆರ್‌ಸಿ) ಕುರಿತು ಸಾರ್ವಜನಿಕರಿಂದ ನಿರಂತರ ದೂರುಗಳು ಕೇಳಿಬರುತ್ತಿವೆ. ವೈದ್ಯರ ಕೊರತೆ, ಅಗತ್ಯ ಸೌಲಭ್ಯಗಳ ಅಭಾವ, ರೋಗಿಗಳ ಸೇವೆಯಲ್ಲಿ ವಿಳಂಬ, ಆಡಳಿತಾತ್ಮಕ ಲೋಪ ಸೇರಿದಂತೆ ಹಲವು ಸಮಸ್ಯೆಗಳು ಸರ್ಕಾರಿ ಆಸ್ಪತ್ರೆಯ ಮೇಲಿನ ಜನರ ವಿಶ್ವಾಸಕ್ಕೆ ಧಕ್ಕೆ ತಂದಿವೆ. ಇದರಿಂದ ಬಡ ರೋಗಿಗಳು ಅನಿವಾರ್ಯವಾಗಿ ಖಾಸಗಿ ಆಸ್ಪತ್ರೆಗಳತ್ತ ಮುಖ ಮಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆಯ ಆಡಳಿತ ವ್ಯವಸ್ಥೆಯನ್ನು ಸುಧಾರಿಸಿ, ವೈದ್ಯಕೀಯ ಸೇವೆಯನ್ನು ಗುಣಮಟ್ಟಕ್ಕೆ ತರುವ ಅಗತ್ಯವಿದೆ. ನಗರದ ಟ್ರಾಮಾ ಕೇರ್ ಸೆಂಟರ್ ಸಮೀಪದ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇನ್ನೂ ಪೂರ್ಣ ಪ್ರಮಾಣದಲ್ಲಿ ಕಾರ್ಯನಿರ್ವಹಿಸುತ್ತಿಲ್ಲ. ಹೊರರೋಗಿಗಳ ಚಿಕಿತ್ಸೆಗೆ ಮಾತ್ರ ಸೀಮಿತವಾಗಿದ್ದು ಒಳರೋಗಿ ಸೇವೆ ಸೇರಿದಂತೆ ಎಲ್ಲ ವಿಭಾಗಗಳು ಆರಂಭವಾದರೆ ಬಳ್ಳಾರಿ ಮಾತ್ರವಲ್ಲದೆ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೂ ಅನುಕೂಲವಾಗಲಿದೆ.ಕಾಮಗಾರಿಗಳಿಗೆ ವೇಗ ಬೇಕು
ಬಳ್ಳಾರಿ ನಗರದ ಬಹುತೇಕ ಪ್ರಮುಖ ರಸ್ತೆಗಳು ಗುಂಡಿಗಳಿಂದ ಕೂಡಿದ್ದು, ನಿತ್ಯ ಅಪಘಾತಗಳು ಸಂಭವಿಸುತ್ತಿವೆ. ವಾಹನ ಸವಾರರು ಮತ್ತು ಪಾದಚಾರಿಗಳು ಜೀವಭಯದಲ್ಲಿ ಸಂಚರಿಸುವಂತಾಗಿದೆ. ಹಲವು ವರ್ಷಗಳಿಂದ ನಿರ್ಲಕ್ಷ್ಯಕ್ಕೊಳಗಾಗಿರುವ ರಸ್ತೆ ಕಾಮಗಾರಿಗಳನ್ನು ಆದ್ಯತೆಯ ಮೇರೆಗೆ ಕೈಗೆತ್ತಿಕೊಂಡು ಮೂಲಸೌಕರ್ಯವನ್ನು ಸುಧಾರಿಸಬೇಕಿದೆ. ನಗರದ ರೇಡಿಯೋ ಪಾರ್ಕ್ ರೈಲ್ವೆ ಫ್ಲೈಓವರ್ ಕಾಮಗಾರಿ ಹಲವು ವರ್ಷಗಳಿಂದ ಪೂರ್ಣಗೊಂಡಿಲ್ಲ. ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದ್ದರೂ ರಾಜ್ಯ ಸರ್ಕಾರದ ಪಾಲಿನ ಕೆಲಸಗಳು ವಿಳಂಬವಾಗಿರುವುದು ಜನರ ಅಸಮಾಧಾನಕ್ಕೆ ಕಾರಣವಾಗಿದೆ. ಉಳಿದ ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಸಾರ್ವಜನಿಕ ಸಂಚಾರಕ್ಕೆ ಮುಕ್ತಗೊಳಿಸಬೇಕಾಗಿದೆ. ಕೋಲ್ಡ್ ಸ್ಟೋರೇಜ್ ನಿರ್ಮಾಣಕ್ಕೆ ಸುಮಾರು ₹11 ಕೋಟಿ ಹಾಗೂ ರಸ್ತೆ ಸೇರಿದಂತೆ ಇತರ ಕಾಮಗಾರಿಗಳಿಗೆ ₹9 ಕೋಟಿ ಬಿಡುಗಡೆಯಾಗಿದ್ದರೂ ನಿರೀಕ್ಷಿತ ವೇಗ ಕಾಣುತ್ತಿಲ್ಲ. ರೈತರ ಹಿತದೃಷ್ಟಿಯಿಂದ ಈ ಯೋಜನೆಯನ್ನು ಶೀಘ್ರ ಪೂರ್ಣಗೊಳಿಸುವ ಅಗತ್ಯವಿದೆ. ನಗರದ ಬೈಪಾಸ್ ರಸ್ತೆಯಲ್ಲಿ ನಿರ್ಮಾಣವಾಗುತ್ತಿರುವ ಆರ್‌ಟಿಒ ಚಾಲಕರ ಫಿಟ್‌ನೆಸ್ ಪರೀಕ್ಷಾ ಕೇಂದ್ರದ ಕಾಮಗಾರಿಯೂ ಶೇ. 80ರಷ್ಟು ಪೂರ್ಣಗೊಂಡು ಉಳಿದ ಕೆಲಸ ನಿಧಾನವಾಗಿದೆ. ಇದಕ್ಕೂ ವೇಗ ನೀಡಬೇಕಾಗಿದೆ.ಜಿಲ್ಲೆಯಲ್ಲಿ ಸಾರಿಗೆ ಇಲಾಖೆಯ ಕಾರ್ಯವೈಖರಿಯ ಕುರಿತು ಸಾರ್ವಜನಿಕರಿಂದ ನಿರಂತರ ಅಸಮಾಧಾನ ವ್ಯಕ್ತವಾಗುತ್ತಿದೆ. ಜಿಲ್ಲೆಯಲ್ಲಿ ಇನ್ನೂ ಹಳೆಯ ಹಾಗೂ ಸೇವೆಗೆ ಯೋಗ್ಯತೆ ಕಳೆದುಕೊಂಡ ಬಸ್‌ಗಳೇ ಹೆಚ್ಚಿನ ಸಂಖ್ಯೆಯಲ್ಲಿ ಓಡುತ್ತಿವೆ. ಗ್ರಾಮೀಣ ಭಾಗಗಳಿಂದ ಶಿಕ್ಷಣಕ್ಕಾಗಿ ನಗರಕ್ಕೆ ಬರುವ ವಿದ್ಯಾರ್ಥಿಗಳು ಬಸ್ ಕೊರತೆಯಿಂದ ಗಂಟೆಗಟ್ಟಲೆ ರಸ್ತೆ ಬದಿಯಲ್ಲಿ ಕಾಯಬೇಕಾದ ಪರಿಸ್ಥಿತಿಯಿದೆ. ವಿದ್ಯಾರ್ಥಿಗಳು, ಕಾರ್ಮಿಕರು ಹಾಗೂ ಸಾರ್ವಜನಿಕರ ಅನುಕೂಲಕ್ಕಾಗಿ ಹೊಸ ಬಸ್‌ಗಳ ಸೇರ್ಪಡೆ ಹಾಗೂ ಮಾರ್ಗಗಳ ವಿಸ್ತರಣೆ ಅಗತ್ಯವಾಗಿದೆ.
ವಿವಿ ಕಡೆಗೂ ವಿಶೇಷ ಗಮನ ಅಗತ್ಯಬಳ್ಳಾರಿಯ ವಿಜಯನಗರ ಶ್ರೀಕೃಷ್ಣದೇವರಾಯ ವಿಶ್ವವಿದ್ಯಾಲಯ ಹಲವು ವರ್ಷಗಳಿಂದ ವಿವಿಧ ವಿವಾದಗಳ ಕೇಂದ್ರವಾಗಿದೆ. ಉನ್ನತ ಶಿಕ್ಷಣದ ಗುಣಮಟ್ಟ ಹೆಚ್ಚಿಸುವ ನಿಟ್ಟಿನಲ್ಲಿ ವಿಶ್ವವಿದ್ಯಾಲಯದ ಆಡಳಿತ ಸುಧಾರಣೆ ಹಾಗೂ ಪಾರದರ್ಶಕ ವ್ಯವಸ್ಥೆ ರೂಪಿಸಲು ಮುಂದಾಗಬೇಕಾಗಿದೆ. ಪ್ರಮುಖವಾಗಿ ವಿವಿಯಲ್ಲಾಗುತ್ತಿರುವ ಶೈಕ್ಷಣಿಕ ಬೆಳವಣಿಗೆಗಳು. ಅಲ್ಲಿನ ಅವ್ಯವಸ್ಥೆಯ ಕಡೆ ಗಮನ ನೀಡಬೇಕಿದೆ.
ಸಚಿವ ಸ್ಥಾನಕ್ಕೆ ಮರಳಿರುವ ಬಿ. ನಾಗೇಂದ್ರ ಅವರಿಗೆ ಈ ಬಾರಿ ಕೇವಲ ಇಲಾಖೆಯ ಆಡಳಿತವಷ್ಟೇ ಅಲ್ಲ, ಜಿಲ್ಲಾ ಉಸ್ತುವಾರಿ ಸಚಿವರ ಜವಾಬ್ದಾರಿಯೂ ಲಭಿಸಿರುವುದರಿಂದ ಜನರ ನಿರೀಕ್ಷೆಗಳು ಮತ್ತಷ್ಟು ಹೆಚ್ಚಾಗಿವೆ. ಹಲವು ಕ್ಷೇತ್ರಗಳಲ್ಲಿ ತ್ವರಿತ ನಿರ್ಧಾರಗಳನ್ನು ಕೈಗೊಂಡು ಬಳ್ಳಾರಿಯ ಅಭಿವೃದ್ಧಿಗೆ ಹೊಸ ವೇಗ ನೀಡುವ ಅಗತ್ಯವಿದ್ದು, ಸಚಿವರ ಕಾರ್ಯಕ್ಷಮತೆಯ ಮೇಲೆಯೇ ಜಿಲ್ಲೆಯ ಭವಿಷ್ಯದ ದಿಕ್ಕು ಅವಲಂಬಿತವಾಗಿದೆ.