ಹೆಚ್ಚುತ್ತಿರುವ ಚಿರತೆ ಹಾವಳಿ : ಭಯದ ವಾತಾವರಣದಲ್ಲಿ ಗ್ರಾಮಸ್ಥರು

| Published : Sep 11 2024, 01:01 AM IST

ಹೆಚ್ಚುತ್ತಿರುವ ಚಿರತೆ ಹಾವಳಿ : ಭಯದ ವಾತಾವರಣದಲ್ಲಿ ಗ್ರಾಮಸ್ಥರು
Share this Article
  • FB
  • TW
  • Linkdin
  • Email

ಸಾರಾಂಶ

ಹೆಚ್ಚುತ್ತಿರುವ ಚಿರತೆ ಹಾವಳಿ : ಭಯದ ವಾತಾವರಣದಲ್ಲಿ ಗ್ರಾಮಸ್ಥರು

ಕನ್ನಡ ಪ್ರಭ ವಾರ್ತೆ ತಿಪಟೂರು

ತಾಲೂಕಿನ ಹೊನ್ನವಳ್ಳಿ ಹೋಬಳಿಯ ಹುರುಳಿಹಳ್ಳಿ, ಸಾರ್ಥವಳ್ಳಿ, ಮಣಕೀಕೆರೆ, ಹೊಸಹಳ್ಳಿ, ಕಲ್ಕೆರೆ, ಮಿಸೇತಿಮ್ಮನಹಳ್ಳಿ, ಚೌಲಿಹಳ್ಳಿ, ಹಾಲೇನಹಳ್ಳಿ ಗ್ರಾಮಗಳಲ್ಲಿ ಚಿರತೆಗಳ ಹಾವಳಿ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದ್ದು, ಗ್ರಾಮಸ್ಥರು ತಮ್ಮ ಹೊಲ ತೋಟಗಳಿಗೆ ಹೋಗಲು ಭಯಬೀತರಾಗಿದ್ದು, ಅರಣ್ಯ ಇಲಾಖೆ ಶೀಘ್ರ ಕ್ರಮಕೈಗೊಳ್ಳಬೇಕೆಂದು ಇಲ್ಲಿನ ಗ್ರಾಮಸ್ಥರು ಒತ್ತಾಯಿಸಿದ್ದಾರೆ.

ಒಟ್ಟೊಟ್ಟಿಗೆ 2-3 ಚಿರತೆಗಳು ಓಡಾಡುತ್ತಿವೆ. ಜನರು ಕೆಲಸ ಕಾರ್ಯಗಳಿಗೆ ಹೋಗಲು ಭಯಪಡುವಂತಾಗಿದೆ. ಗ್ರಾಮಸ್ಥರು ದೂರದ ಹೊಲ ತೋಟಗಳಿಗೆ ನೀರು ಹಾಯಿಸಲು ಹಾಗೂ ತಮ್ಮ ದನ, ಕುರಿ, ಮೇಕೆಗಳನ್ನು ಮೇಯಿಸಲು ಹೋಗಲು ಹೆದರುತ್ತಿದ್ದಾರೆ. ಇದರಿಂದಾಗಿ ಪಶುಪಾಲನೆ ಕಷ್ಟವಾಗಿದೆ. ಪ್ರತಿನಿತ್ಯ ಭಯದ ವಾತಾವರಣದಲ್ಲಿ ಬದುಕುವಂತಾಗಿದೆ. ಕುರಿ, ಮೇಕೆಗಳನ್ನು ಮೇಯಿಸುತ್ತಿದ್ದರೆ ಹಾಡುಹಗಲೇ ಚಿರತೆಗಳು ಬಂದು ಕುರಿ, ಮೇಕೆಗಳನ್ನು ರಾಜರೋಷವಾಗಿ ಎತ್ತಿಕೊಂಡು ಹೋಗುತ್ತವೆ. ಚಿರತೆಗಳ ಭಯದಿಂದ ಹೊಲ ತೋಟಗಳಿಗೆ ಹೋಗಿ ನೀರು ಬಿಡಲು ಸಾಧ್ಯವಾಗುತ್ತಿಲ್ಲ. ಗ್ರಾಮದ ಸುತ್ತಾ ಜಾಲಿ ಗಿಡ, ಪೊದೆಗಳು ಹೆಚ್ಚಾಗಿದ್ದು ಇಲ್ಲಿ 2-3 ಚಿರತೆಗಳು ಬೀಡುಬಿಟ್ಟಿದ್ದು ಗ್ರಾಮಸ್ಥರು ಕಂಗಾಲಾಗಿದ್ದಾರೆ. ಕಳೆದ ವರ್ಷವೂ ಚಿರತೆ ಹಾವಳಿಯಿಂದ ಹಸು, ಕರು ಮೇಕೆ ಕುರಿಗಳು ಬಲಿಯಾಗಿದ್ದವು. ಈ ಬಾರಿಯೂ ಚಿರತೆಗಳ ಹೆಚ್ಚಾಗಿದ್ದು ನಮ್ಮ ಸಮಸ್ಯೆಯನ್ನು ಯಾರಿಗೆ ಹೇಳಬೇಕೆಂದು ಗೊತ್ತಾಗುತ್ತಿಲ್ಲ. ಈ ಬಗ್ಗೆ ಅರಣ್ಯ ಇಲಾಖೆಯ ಮೇಲಾಧಿಕಾರಿಗಳು ಗಮನಹರಿಸಿ ಗ್ರಾಮದ ಆಯಕಟ್ಟಿನ ಸ್ಥಳಗಳಲ್ಲಿ ಬೋನ್ ಇಟ್ಟು ಚಿರತೆಗಳ ಹಾವಳಿ ತಡೆಗಟ್ಟಿ ಜನರು ನಿರ್ಭಯದಿಂದ ಓಡಾಡುವಂತೆ ಮಾಡಬೇಕು. ರಾಜರೋಷವಾಗಿ ಜನರೆದುರೇ ಓಡಾಡುವ ಚಿರತೆಗಳು ಗ್ರಾಮದೊಳಗೆ ಬಂದು ಪ್ರಾಣಹಾನಿ ಮಾಡಿದರೆ ಇದಕ್ಕೆ ಅರಣ್ಯ ಇಲಾಖೆಯೇ ನೇರ ಕಾರಣವಾಗಲಿದ್ದು, ಅರಣ್ಯ ಇಲಾಖೆ ನಿರ್ಲಕ್ಷ್ಯ ವಹಿಸದೆ ಚಿರತೆಗಳ ಹಾವಳಿಗೆ ಕಡಿವಾಣ ಹಾಕಬೇಕೆಂದು ಗ್ರಾಮಸ್ಥರು ಒತ್ತಾಯಿಸಿದ್ದಾರೆ.