ಗಣೇಶ ವಿಗ್ರಹಗಳ ಮಾರಾಟಕ್ಕಾಗಿ ಕಿನ್ನಾಳ, ಭಾಗ್ಯ ನಗರ, ಕನಕಗಿರಿ, ಹೊಸಪೇಟೆ ಕಲಾವಿದರು ಆಗಮಿಸಿದ್ದಾರೆ. ಸ್ಥಳೀಯ ಕಲಾವಿದರೂ ಗಾಂಧಿ ವೃತ್ತ, ಬಸವಣ್ಣ ವೃತ್ತ, ಗುಂಡಮ್ಮ ಕ್ಯಾಂಪ್‌ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ₹300ಗಳಿಂದ ₹3 ಸಾವಿರ ವರೆಗೂ ಮಾರಾಟ ಮಾಡಲಾಗುತ್ತಿದೆ.
ರಾಮಮೂರ್ತಿ ನವಲಿ
ಗಂಗಾವತಿ: ಗೌರಿ, ಗಣೇಶ ಹಬ್ಬದ ಆಚರಣೆ ಹಿನ್ನೆಲೆಯಲ್ಲಿ ಗಣೇಶ ವಿಗ್ರಹಗಳ ಸೇರಿದಂತೆ ವಸ್ತುಗಳ ಬೆಲೆ ಗಗನಕ್ಕೇರಿದೆ. ಗಣೇಶ ವಿಗ್ರಹಗಳ ಮಾರಾಟಕ್ಕಾಗಿ ಕಿನ್ನಾಳ, ಭಾಗ್ಯ ನಗರ, ಕನಕಗಿರಿ, ಹೊಸಪೇಟೆ ಕಲಾವಿದರು ಆಗಮಿಸಿದ್ದಾರೆ. ಸ್ಥಳೀಯ ಕಲಾವಿದರೂ ಗಾಂಧಿ ವೃತ್ತ, ಬಸವಣ್ಣ ವೃತ್ತ, ಗುಂಡಮ್ಮ ಕ್ಯಾಂಪ್‌ನಲ್ಲಿ ಮಾರಾಟಕ್ಕಿಟ್ಟಿದ್ದಾರೆ. ₹300ಗಳಿಂದ ₹3 ಸಾವಿರ ವರೆಗೂ ಮಾರಾಟ ಮಾಡಲಾಗುತ್ತಿದೆ.ಆಂಧ್ರ, ತೆಲಂಗಾಣ ಗಣೇಶ ಖರೀದಿ: ನಗರದಲ್ಲಿ ವಿವಿಧ ಸಂಘ ಸಂಸ್ಥೆಯವರು ಪ್ರತಿಷ್ಠಾಪಿಸುವ ಗಣೇಶ ವಿಗ್ರಹಗಳನ್ನು ಆಂಧ್ರ, ತೆಲಂಗಾಣ ರಾಜ್ಯಗಳಿಂದ ಖರೀದಿಸಿದ್ದಾರೆ. ಹಬ್ಬದ ಆಚರಣೆಗಿಂತ ಮೊದಲೇ ₹20 ಸಾವಿರ, ₹50 ಸಾವಿರ ಮುಂಗಡ ನೀಡಿದ್ದಾರೆ. ಕನಿಷ್ಠ 1ರಿಂದ ₹2 ಲಕ್ಷ ಬೆಲೆಯ ಗಣಪತಿ ಖರೀದಿಸಿದ್ದಾರೆ.
ವಸ್ತುಗಳ ಬೆಲೆಯು ಗಗನಕ್ಕೆ: ಗಣಪತಿ ಹಬ್ಬದ ಹಿನ್ನೆಲೆಯಲ್ಲಿ ವಸ್ತುಗಳ ಬೆಲೆ ಗಗನಕ್ಕೇರಿದೆ. ವಿವಿಧ ಬಗೆಯ ಹೂ, ಹಣ್ಣುಗಳು ಸೇರಿದಂತೆ ವಸ್ತುಗಳ ಮಾರಾಟ ಅಧಿಕವಾಗಿದೆ. ವರ್ಷದ 12 ತಿಂಗಳು ಗಂಗಾವತಿ ನಗರದಲ್ಲಿ ಹೂ, ಹಣ್ಣುಗಳು ಮತ್ತು ಬಾಳೆ ಕಂಬಗಳ ಬೆಲೆ ಅಧಿಕ ಮಟ್ಟದಲ್ಲಿ ಮಾರಾಟ ನಡೆಯುತ್ತಿವೆ. ಹಬ್ಬದ ಸಂದರ್ಭದಲ್ಲಿ ಅಧಿಕ ಬೆಲೆ ನೀಡಿ ಗ್ರಾಹಕರು ಖರೀದಿಸುತ್ತಿರುವುದರಿಂದ ಬೆಲೆ ಹೆಚ್ಚಳ ಬಿಸಿ ತಟ್ಟಿದೆ.ಟ್ರಾಫಿಕ್ ಜಾಮ್: ಗಣೇಶ ಹಬ್ಬದ ನಿಮಿತ್ತ ಸಾರ್ವಜನಿಕರು ವಸ್ತುಗಳ ಖರೀದಿಗೆ ಆಗಮಿಸುತ್ತಿರುವುದರಿಂದ ವಿವಿಧ ರಸ್ತೆಗಳಲ್ಲಿ ಸಂಚಾರ ಅಸ್ತವ್ಯಸ್ಥಗೊಂಡಿದೆ. ಗಾಂಧಿ ವೃತ್ತ, ಬಸವಣ್ಣ ವೃತ್ತ, ನಗರೇಶ್ವರ ದೇವಸ್ಥಾನದ ಮುಂದೆ ರಸ್ತೆ ಕಿರಿದಾಗಿದ್ದರಿಂದ ವಾಹನಗಳ ಸಂಚಾರಕ್ಕೆ ಅಡ್ಡಿ ಉಂಟಾಗಿದೆ.
ಕಳೆದ ಮೂರು ತಿಂಗಳಿನಿಂದ ಗಣೇಶ ವಿಗ್ರಹಗಳನ್ನು ತಯಾರು ಮಾಡುತ್ತಿದ್ದೇವೆ. ಈಗ ಬಣ್ಣದ ಬೆಲೆ ಹೆಚ್ಚಾಗಿದ್ದರಿಂದ ಮಾಡಿದ ಕೆಲಸಕ್ಕೆ ಕೂಲಿ ಸಿಗದಂತಾಗಿದೆ. ಕುಟಂಬದವರು ಸೇರಿ ಗಣೇಶನ ವಿಗ್ರಹ ತಯಾರಿಸಿದ್ದೇವೆ. ಕುಲಕಸಬು ಬಿಡಬಾರದು ಎಂಬ ಕಾರಣದಿಂದ ಗಣೇಶ ವಿಗ್ರಹಗಳನ್ನು ತಯಾರಿಸುತ್ತಿದ್ದೇವೆ ಎನ್ನುತ್ತಾರೆ ಗಂಗಾವತಿಯ ಕಲಾವಿದ ಪ್ರಕಾಶ ಚಿತ್ರಗಾರ.