ಸಾರಾಂಶ
ರಾಂ ಅಜೆಕಾರು
ಕನ್ನಡಪ್ರಭ ವಾರ್ತೆ ಕಾರ್ಕಳಕರಾವಳಿಯಲ್ಲಿ ತಾಪಮಾನ ಏರಿಕೆಯ ಹೊತ್ತಿನಲ್ಲಿ ಕೋಳಿ ಮಾಂಸ ಹಾಗೂ ಮೊಟ್ಟೆಯ ಬೆಲೆ ಗಗನಕ್ಕೆ ಏರಿಕೆಯಾಗಿದ್ದು, ಗ್ರಾಹಕರಿಗೆ ಬೆಲೆ ಏರಿಕೆ ಬಿಸಿ ತಟ್ಟಿದೆ. ಕೋಳಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣ ಅಧಿಕ ಉಷ್ಣತೆ. ಕೋಳಿ ಶೆಡ್‌ಗಳಲ್ಲಿ ಈಗ ನೀರಿನ ಕೊರತೆ ಎದುರಾಗಿದೆ.ನೀರಿನ ಕೊರತೆ: ಕೋಳಿ ಮರಿಗಳನ್ನು ತಂದು ಶೆಡ್‌ನಲ್ಲಿ ಇಡಲು ತಂಪಾದ ವಾತಾವರಣವೇ ಬೇಕು. ಆದರೆ ಬಿಸಿ ತಾಪದಿಂದ ಕೋಳಿ ಮರಿಗಳು ಸಾಯುತ್ತಿವೆ. ಟೈಸನ್ ಕೋಳಿಗಳನ್ನು ಆದ್ರತೆ ರಹಿತವಾದ ವಾತಾವರಣದಲ್ಲಿ ಸಾಕಲಾಗುತ್ತದೆ. ಕೋಳಿ ಬೆಲೆ ಹೆಚ್ಚಳಕ್ಕೆ ಪ್ರಮುಖ ಕಾರಣವೇ ಅಧಿಕ ಉಷ್ಣತೆ. ಕೋಳಿ ಶೆಡ್‌ಗಳಲ್ಲಿ ನೀರಿನ ಕೊರತೆ ಎದುರಾಗಿದೆ.
ಬೆಳವಣಿಗೆ ಕುಂಠಿತ: ಪ್ರತಿ ಸೋಮವಾರ ಕೋಳಿ ಫಾರಂ ಕಂಪನಿಗಳು ಕೋಳಿ ಮರಿಗಳ ಬೆಲೆ ನಿರ್ಧರಿಸುತ್ತಿದ್ದು, ಈ ವಾರದಲ್ಲಿ ಬಾಯ್ಲರ್ ಕೋಳಿ ಮರಿಯೊಂದಕ್ಕೆ 48 ರು. ನಿಗದಿಪಡಿಸಲಾಗಿದೆ. ಮಾರ್ಚ್‌ನಲ್ಲಿ ಕೋಳಿ ಮರಿಯೊಂದಕ್ಕೆ 40- 48 ರು. ವರೆಗೆ ಬೆಲೆ ಹೆಚ್ಚಳವಾಗಿದೆ. ಕಳೆದ ಬಾರಿ ಮರಿಯೊಂದಕ್ಕೆ 35 ರು. ನಿಗದಿಯಾಗಿತ್ತು. ಸಾಧಾರಣ ಉಷ್ಣತೆಯಲ್ಲಿ ಕೋಳಿಮರಿಗಳು 42 ದಿನಗಳ ಬೆಳವಣಿಗೆಯೊಂದಿಗೆ 2.3 ಕೆ.ಜಿ.ವರೆಗೆ ತೂಕ ಬರುತ್ತದೆ. ಆದರೆ ಈಗ ಉಷ್ಣತೆ ಹೆಚ್ಚು ದಾಖಲಾದ ಹಿನ್ನೆಲೆ 1.9 ಕೆ.ಜಿ. ತೂಗುತ್ತಿದ್ದು, ಬೆಳವಣಿಗೆ ಕುಂಠಿತವಾಗುತ್ತದೆ. ಕೆಲವು ಸಾವನ್ನಪ್ಪುತ್ತವೆ.ಮುಂದಿನ ಮೂರು ತಿಂಗಳ ಸವಾಲು: ಅಧಿಕ ಉಷ್ಣತೆ ಕಾರಣ ಕೋಳಿ ಮರಿಗಳು ಉಷ್ಣತೆ ತಡೆಯಲಾರದೆ ಸಾವನ್ನಪ್ಪುತ್ತವೆ. ಕೆಲವು ಬಾರಿ ಹೆಚ್ಚಿನ ಉಷ್ಣತೆಯಿಂದ ಕೋಳಿಗಳು ತೂಕ ಕಳೆದುಕೊಳ್ಳುವ ಪ್ರಮೇಯವಿದೆ. ಈ ಸಮಯ ನೀರಿನ ಪೂರೈಕೆ ಅಗತ್ಯ. ಆದರೆ ನೀರಿನ ಪೂರೈಕೆ ಇಲ್ಲದಿದ್ದರೆ ಕೋಳಿಗಳ ಸಂರಕ್ಷಣೆ ಹಾಗೂ ಬೆಳವಣಿಗೆ ಕಷ್ಟ, ತ್ರಾಸದಾಯಕವಾಗಿದೆ. ಕಳೆದ ವರ್ಷ ಜೂನ್ ಅಂತ್ಯದ ವೇಳೆಗೆ ಕಾರ್ಕಳ ಹಾಗೂ ಹೆಬ್ರಿ ತಾಲೂಕಿನ ವ್ಯಾಪ್ತಿಯಲ್ಲಿ 280 ಕೋಳಿ ಶೆಡ್‌ಗಳು ಕೋಳಿಮರಿಗಳ ಪೂರೈಕೆ ಕಡಿತವಾಗಿದ್ದ ಕಾರಣ ಬಂದ್ ಆಗಿದ್ದವು.
ಹೆಚ್ಚಿದ ಸಮಾರಂಭಗಳು: ಪ್ರಸಕ್ತ ಸಾಲಿನಲ್ಲಿ ಮದುವೆ, ಮೆಹೆಂದಿ, ಸೋಡ್ತಿ ಸೇರಿದಂತೆ ಹೆಚ್ಚಿನ ಸಮಾರಂಭಗಳಿದ್ದು, ಕೋಳಿ ಮಾಂಸಕ್ಕೆ ಹೆಚ್ಚಿನ ಬೇಡಿಕೆಯಿದೆ. ಕಾರ್ಕಳ ಹಾಗೂ ಹೆಬ್ರಿ ತಾಲೂಕು ವ್ಯಾಪ್ತಿಗಳ 315 ಕೋಳಿ ಶೆಡ್‌ಗಳಿವೆ.ಬೆಲೆ ಎಷ್ಟಿದೆ?: ಅವಿಭಜಿತ ಕಾರ್ಕಳ ಹಾಗೂ ಹೆಬ್ರಿ ತಾಲೂಕುಗಳಲ್ಲಿ ಬ್ರಾಯ್ಲರ್ ಕೋಳಿ ಮಾಂಸ ರಿಟೈಲ್ ವ್ಯಾಪಾರದಲ್ಲಿ ಕೆ.ಜಿ.ಯೊಂದಕ್ಕೆ 220-240 ರು., ರಖಂ ಕೆ.ಜಿ.ಯೊಂದಕ್ಕೆ 210-230 ರು., ಟೈಸನ್ ಕೋಳಿ ಕೆ.ಜಿ.ಯೊಂದಕ್ಕೆ 230-250 ರು., ರಖಂ ಕೆ.ಜಿ.ಯೊಂದಕ್ಕೆ 220-240 ರು. ದರದಲ್ಲಿ ಮಾರಾಟ ವಾಗುತ್ತಿದೆ. ಇಡೀ ಕೋಳಿ ಖರೀದಿಸುವವರು ಬ್ರಾಯ್ಲರ್ ಕೆ.ಜಿ.ಯೊಂದಕ್ಕೆ 170 ರು., ಟೈಸನ್ 180 ರು. ಇದೆ.ಕೋಳಿ ಮೊಟ್ಟೆಯೊಂದಕ್ಕೆ 8 ರು. ವರೆಗೆ ಮಾರಾಟವಾಗುತ್ತಿದೆ.2023ರಲ್ಲಿ ಬ್ರಾಯ್ಲರ್ ಕೋಳಿ ಮಾಂಸ ಬೆಲೆ 160 -180 ರು. ನಡುವೆ ಸ್ಥಿರವಾಗಿತ್ತು. ಟೈಸನ್ ಕೋಳಿಮಾಂಸ 190- 200 ರು. ನಡುವೆ ಸ್ಥಿರವಾಗಿತ್ತು. 2023ರಲ್ಲಿ ಮೊಟ್ಟೆಗೆ 7 ರು. ವರೆಗೆ ಸ್ಥಿರವಾಗಿತ್ತು.ಊರಿನ ಕೋಳಿ ದರ ದುಬಾರಿ: ಹಸೀಲ್ ಕೋಳಿ ಪ್ರಭೇದವು ಕರಾವಳಿ ಭಾಗದಲ್ಲಿ ತಂಬಿಲ ಸೇರಿದಂತೆ ದೈವದ ಆರಾಧನೆಗೆ ಬಲು ಬೇಡಿಕೆ. ಆದ್ದರಿಂದ ಈ ಊರಿನ ಕೋಳಿಗಳ ಬೆಲೆಯಲ್ಲೂ ಏರಿಕೆಯಾಗಿದೆ. ಊರಿನ ಕೋಳಿ ಮಾಂಸ ಕೆ.ಜಿ.ಯೊಂದಕ್ಕೆ 320-350 ರು., ರಖಂಗಳಲ್ಲಿ 300-310 ರು. ವರೆಗೆ ಮಾರಾಟವಾಗುತ್ತಿದೆ. ಇಡೀ ಕೋಳಿ ಕೆಜಿಯೊಂದಕ್ಕೆ 250- 290 ರು. ವರೆಗೆ ಮಾರಾಟ ವಾಗುತ್ತಿದೆ.ಕೋಳಿ ಆಹಾರ ಬೆಲೆ ಏರಿಕೆ: ಸಾಗಾಟ ವೆಚ್ಚ, ಉತ್ಪಾದನೆ ಕುಂಠಿತ, ಕೋಳಿಗಳಿಗೆ ನೀಡುವ ಆಹಾರದ ಕಚ್ಚಾವಸ್ತುಗಳಾದ ಜೋಳ, ಸೋಯಾ, ಎಣ್ಣೆಕಾಳು ಬೆಲೆಗಳಲ್ಲಿ ಗಣನೀಯವಾದ ಏರಿಕೆ, ಕೋಳಿ ಔಷಧ ಬೆಲೆಗಳು ಹಾಗೂ ಕಾರ್ಮಿಕರ ಭತ್ಯೆ, ಶೆಡ್‌ಗಳ ನಿರ್ವಹಣಾ ವೆಚ್ಚಗಳು ಏರಿಕೆಯಾಗಿದ್ದ ಕಾರಣ ಬೆಲೆ ಏರಿಕೆಯಾಗುತ್ತಿದೆ.ಸಂಕುಚಿತ ಮಾರುಕಟ್ಟೆ: 42 ದಿನಗಳ ಕಾಲ ಕೋಳಿ ಮರಿಗಳ ಬೆಳವಣಿಗೆ ಇದ್ದ ಕಾರಣ ಒಂದೂವರೆ ತಿಂಗಳ ಕಾಲ ಮಾರುಕಟ್ಟೆ ಬದಲಾವಣೆಗಳು ಅಗುತ್ತಿರುತ್ತವೆ. ಬೇಡಿಕೆ ಹೆಚ್ಚಾದಂತೆ ಕೋಳಿಗಳನ್ನು ಉತ್ಪಾದನಾ ಪ್ರಕ್ರಿಯೆಯಲ್ಲಿ ವೇಗಗತಿಯಲ್ಲಿ ಸಾಗಿಸಲು ಶೆಡ್‌ಗಳಲ್ಲಿ ಸಾಧ್ಯವಾಗುವುದಿಲ್ಲ. ಕೋಳಿಗಳನ್ನು ಮಲೆನಾಡು ಪ್ರದೇಶಗಳಾದ ಶಿವಮೊಗ್ಗ, ಹಾಸನ, ಹುಬ್ಬಳ್ಳಿಗಳಿಂದ ಕರಾವಳಿ ಪ್ರದೇಶಗಳಿಗೆ ಸಾಗಾಣಿಕೆ ಮಾಡಲಾಗುತ್ತದೆ. ಈ ಸಂದರ್ಭ ಪೂರೈಕೆ ಇದ್ದಾಗ ಬೇಡಿಕೆ ಕುಸಿತವಾಗಬಹುದು, ಬೇಡಿಕೆ ಹೆಚ್ಚಿದ್ದಾಗ ಪೂರೈಕೆ ಕುಸಿತವಾಗಬಹುದು. ಆದ್ದರಿಂದ ಮಾರುಕಟ್ಟೆ ಸಂಕುಚಿತಗೊಳ್ಳಬಹುದು ಎಂದು ಕೋಳಿ ವ್ಯಾಪಾರಿಗಳು ಮಾಹಿತಿ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಕೋಳಿಗಳ ಪೂರೈಕೆ ಸಾಮಾನ್ಯವಾಗಿಬರಬಹುದು. ತಾಪಮಾನದ ಗರಿಷ್ಠ ಏರಿಕೆಯಾಗಿದೆ. ಕೋಳಿಗಳಿಗೆ ತಾಪಮಾನ ಸಮಾನವಾಗಿರಿಸಲು ನೀರು ಸಿಂಪಡಿಸಬೇಕಾಗುತ್ತದೆ. ಬಿಸು ಬೇಸಿಗೆಯಲ್ಲಿ ನೀರಿನ ಲಭ್ಯತೆ ಕಷ್ಟ.। ಶಿವಪ್ರಸಾದ್ ಕೋಟ್ಯಾನ್, ಎ.ವಿ. ಚಿಕನ್ ಹೆಬ್ರಿ-------------ಈ ಬಾರಿ ಕೋಳಿ ಮಾಂಸ ಬೆಲೆಗಳು ಹಳ್ಳಿ ಹಾಗೂ ನಗರಗಳಿಗೆ ಬದಲಾವಣೆಯಾಗಿದೆ. ಅಂಗಡಿ ಬಾಡಿಗೆ, ಸಾಗಾಣಿಕೆ, ನಿರ್ವಹಣಾ ವೆಚ್ಚ ಅತಿಯಾಗಿದೆ. ಹಾಗಾಗಿ ಬೆಲೆಗಳು ಏರಿಕೆಯಾಗಿರಬಹುದು.। ರಶೀದ್ ಕೈಕಂಬ, ಅಜೆಕಾರು ಕೋಳಿ ವ್ಯಾಪಾರಸ್ಥರು.-------------- ಕೋಳಿ ಮಾಂಸದ ಬೆಲೆ ದೀಢಿರ್ ಏರಿಕೆಯಾಗಿದ್ದು, ಮಾಂಸಹಾರಿ ಹೋಟೆಲ್‌ಗಳಲ್ಲಿ ಆಹಾರ ವಸ್ತುಗಳ ಬೆಲೆ ಏರಿಕೆಯಾಗಬಹುದು. ಮಳೆಗಾಲ ಬರುವವರೆಗೆ ಕೋಳಿಮಾಂಸ ಬೆಲೆ ಏರಿಕೆ ಪ್ರಕ್ರಿಯೆ ಮುಂದುವರಿಯಬಹುದು.। ಅರುಣ್ ಪೂಜಾರಿ, ಹೋಟೆಲ್ ಉದ್ಯಮಿ