ಸ್ವೇಚ್ಛಾಚಾರದಿಂದ ಮಾರಕ ರೋಗ ತಗಲುವ ಅಪಾಯ

| Published : Dec 06 2024, 08:59 AM IST

ಸ್ವೇಚ್ಛಾಚಾರದಿಂದ ಮಾರಕ ರೋಗ ತಗಲುವ ಅಪಾಯ
Share this Article
  • FB
  • TW
  • Linkdin
  • Email

ಸಾರಾಂಶ

ಎಚ್‌ಐವಿ ಮತ್ತು ಏಡ್ಸ್ ಕಳೆದ 35 ವರ್ಷಗಳಿಂದ ಮಾನವ ಜನಾಂಗವನ್ನು ಕಾಡುತ್ತಿದೆ. ಇದರ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಫ್ರೀವೆನಷನ್ ಸೊಸೈಟಿಯ ನಿರಂತರ ಕಾರ್ಯಕ್ರಮಗಳಿಂದಾಗಿ ಎಚ್‌ಐವಿ ಸೋಂಕಿತರ ಪ್ರಮಾಣವು ಕಡಿಮೆಯಾಗಿದೆ.

ಧಾರವಾಡ:

ಅಪಾಯಕಾರಿ ಎಚ್‌ಐವಿ ಕುರಿತು ಯುವ ಜನಾಂಗ ಎಚ್ಚರದಿಂದ ಇರಬೇಕು. ಸ್ವೇಚ್ಛಾಚಾರದ ನಡುವಳಿಕೆಯಿಂದ ಮಾರಕ ರೋಗ ತಗಲುವ ಅಪಾಯವಿದೆ. ಏಡ್ಸ್‌ದಂತಹ ರೋಗಗಳಿಂದ ದೂರವಿರಲು ಅರಿವು, ಜಾಗೃತಿ ಮತ್ತು ಸುರಕ್ಷತಾ ಕ್ರಮ ಪಾಲಿಸಬೇಕೆಂದು ಜಿಲ್ಲಾಧಿಕಾರಿ ದಿವ್ಯಪ್ರಭು ಹೇಳಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಕಚೇರಿ ಆವರಣದಲ್ಲಿ ಜಿಲ್ಲಾಡಳಿತವು ಆರೋಗ್ಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಜತೆಗೂಡಿ ಬುಧವಾರ ಆಯೋಜಿಸಿದ್ದ ವಿಶ್ವ ಏಡ್ಸ್ ದಿನದ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ಬಾವುಟ ತೋರಿ ಚಾಲನೆ ನೀಡಿದ ಅವರು, ಎಚ್‌ಐವಿ ಮತ್ತು ಏಡ್ಸ್ ಕಳೆದ 35 ವರ್ಷಗಳಿಂದ ಮಾನವ ಜನಾಂಗವನ್ನು ಕಾಡುತ್ತಿದೆ. ಇದರ ನಿಯಂತ್ರಣಕ್ಕಾಗಿ ರಾಷ್ಟ್ರೀಯ ಏಡ್ಸ್ ನಿಯಂತ್ರಣ ಸಂಸ್ಥೆ ಹಾಗೂ ಕರ್ನಾಟಕ ರಾಜ್ಯ ಏಡ್ಸ್ ಫ್ರೀವೆನಷನ್ ಸೊಸೈಟಿಯ ನಿರಂತರ ಕಾರ್ಯಕ್ರಮಗಳಿಂದಾಗಿ ಎಚ್‌ಐವಿ ಸೋಂಕಿತರ ಪ್ರಮಾಣವು ಕಡಿಮೆಯಾಗಿದೆ. ಈ ವೈರಸ್‌ ನಗರ ಪ್ರದೇಶದಿಂದ ಗ್ರಾಮೀಣ ಪ್ರದೇಶಕ್ಕೆ ಹಾಗೂ ಅಪಾಯದ ಸಮುದಾಯಗಳಿಂದ ಸಾಮಾನ್ಯ ಜನರೆಡೆಗೆ ವಿಸ್ತರಿಸಿದ್ದು, ನಿಯಂತ್ರಣ ಅಗತ್ಯ ಎಂದರು.

12000 ಜನರಿಗೆ ಚಿಕಿತ್ಸೆ:

ಜಿಲ್ಲೆಯಲ್ಲಿ 2023-24ನೇ ಸಾಲಿನಲ್ಲಿ ಲೈಂಗಿಕ ಸಂಪರ್ಕದ ಸೋಂಕುಗಳ ಬಗ್ಗೆ 6029 ಜನರು ಚಿಕಿತ್ಸೆ ಪಡೆದಿದ್ದಾರೆ. 2024-25ರ ಅಕ್ಟೋಬರ್‌ ವರೆಗೆ 5805 ಜನರು ಚಿಕಿತ್ಸೆ ಪಡೆದುಕೊಂಡಿದ್ದಾರೆ. ಎಚ್‌ಐವಿ ಸೋಂಕಿತ ತಂದೆ, ತಾಯಿಯವರಿಂದ ಮಕ್ಕಳಿಗೆ ಸೋಂಕು ಬರದಂತೆ ತಡೆಯುವುದು ಈ ಚಿಕಿತ್ಸೆಯ ಧ್ಯೇಯವಾಗಿದೆ ಎಂದ ಅವರು, ಏಡ್ಸ್‌ನೊಂದಿಗೆ ಬದುಕುತ್ತಿರುವ 371 ಜನರಿಗೆ ಅನ್ನ ಅಂತ್ಯೋದಯ ಕಾರ್ಯಕ್ರಮ, ರಾಜೀವ್ ಗಾಂಧಿ ಗ್ರಾಮೀಣ ವಸತಿ ಯೋಜನೆ ಅಡಿಯಲ್ಲಿ 764 ಜನರ ಪಟ್ಟಿಯನ್ನು ಆಯ್ಕೆ ಮಾಡಿ ಸಲ್ಲಿಸಲಾಗಿದೆ ಎಂದು ಜಿಲ್ಲಾಧಿಕಾರಿ ತಿಳಿಸಿದರು.

ಜಿಲ್ಲಾ ಆರೋಗ್ಯಾಧಿಕಾರಿ ಡಾ. ಶಶಿ ಪಾಟೀಲ ಮಾತನಾಡಿ, 2020-21ರಲ್ಲಿ 36,985 ಗರ್ಭಿಣಿಯರು ಪರೀಕ್ಷಿಸಿದ್ದು, 20 ಜನರಲ್ಲಿ ರೋಗ ಕಂಡುಬಂದಿದೆ. 2021-22 ರಲ್ಲಿ 44,707ರಲ್ಲಿ 24, 2022-23ರಲ್ಲಿ 50,384ರ ಪೈಕಿ 15, 2023-24ರಲ್ಲಿ 50,501ರ ಪೈಕಿ 14, ಅಕ್ಟೋಬರ್‌ ವರೆಗೆ 27,063ರ ಪೈಕಿ 10 ಗರ್ಭಿಣಿಯರಲ್ಲಿ ರೋಗ ಕಂಡುಬಂದಿದೆ ಎಂದು ತಿಳಿಸಿದರು.

ಹಿರಿಯ ಸಿವಿಲ್ ನ್ಯಾಯಾಧೀಶ ಪರಶುರಾಮ ದೊಡ್ಡಮನಿ, ಆರೋಗ್ಯ ಇಲಾಖೆಯ ಡಾ. ಸುಜಾತಾ ಹಸವಿಮಠ, ಡಾ. ರವೀಂದ್ರ ಬೋವೆರ, ಡಾ. ಕೆ.ಎನ್. ತನುಜಾ, ಡಾ. ಹಳ್ಳಿಗೇರಿ ಇದ್ದರು. ಹರ್ಲಾಪುರದ ಕಲಾವಿದ ಎಸ್.ಎಸ್. ಹಿರೇಮಠ ನೇತೃತ್ವದ ಯುವಜನ ಹಾಗೂ ಸಾಂಸ್ಕೃತಿಕ ಅಭಿವೃದ್ಧಿ ಕೇಂದ್ರ ಕಲಾವಿದರ ಜಾನಪದ ತಂಡ ಏಡ್ಸ್‌ ಜಾಗೃತಿ ಗೀತೆಗಳನ್ನು ಜಾಥಾದಲ್ಲಿ ಪ್ರಸ್ತುತ ಪಡಿಸಿತು.