ಕುಕ್ಕೆ: ಕುಮಾರಪರ್ವತದ ಕುಮಾರಪಾದಕ್ಕೆ ಪೂಜೆ

| Published : Jan 03 2024, 01:45 AM IST

ಸಾರಾಂಶ

ಕುಕ್ಕೆ ಸುಬ್ರಹ್ಮಣ್ಯದ ಪವಿತ್ರ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಕ್ಕೆಸಂಪ್ರದಾಯದ ಪ್ರಕಾರ ಮಂಗಳವಾರ ಪೂಜೆ ನೆರವೇರಿತು.

ಕನ್ನಡಪ್ರಭ ವಾರ್ತೆ ಸುಬ್ರಹ್ಮಣ್ಯ

ಇಲ್ಲಿನ ಪವಿತ್ರ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಕ್ಕೆ ಕುಕ್ಕೆಸುಬ್ರಹ್ಮಣ್ಯ ದೇವಳದ ಅರ್ಚಕ ಸೀತರಾಮ ಎಡಪಡಿತ್ತಾಯ ಸಂಪ್ರದಾಯದ ಪ್ರಕಾರ ಮಂಗಳವಾರ ಪೂಜೆ ನೆರವೇರಿಸಿದರು.ಮದ್ಯಾಹ್ನ ಸುಮಾರು ೧೨ ಗಂಟೆಯ ಹೊತ್ತಿಗೆ ಕುಮಾರಪರ್ವತದ ತುತ್ತ ತುದಿಯಲ್ಲಿರುವ ಕುಮಾರನ ಪಾದಗಳಿಗೆ ಅರ್ಚಕರು ವಿವಿಧ ವೈಧಿಕ ವಿದಿ ವಿಧಾನಗಳ ಮೂಲಕ ಪೂಜೆ ಸಲ್ಲಿಸಿದರು.

ದೇವಳದ ಆಡಳಿತ ಮಂಡಳಿ ಅಧ್ಯಕ್ಷ ಮೋಹನ್ ರಾಂ ಸುಳ್ಳಿ, ಸದಸ್ಯರಾದ ಪ್ರಸನ್ನ ದರ್ಬೆ, ಲೋಕೇಶ್ ಮುಂಡೋಕಜೆ, ಶೋಭಾ ಗಿರಿಧರ್, ಮಾಜಿ ಮಾಸ್ಟರ್ ಪ್ಲಾನ್ ಸದಸ್ಯ ಮನೋಜ್.ಎಸ್, ದೇವಳದ ಸಿಬ್ಬಂದಿ ಸೇರಿದಂತೆ ನೂರಾರು ಭಕ್ತರು ಕುಕ್ಕೆಯಿಂದ ೧೮ ಕಿ.ಮೀ. ದೂರವಿರುವ ಎತ್ತರದ ಪರ್ವತ ಏರಿ ವೈಧಿಕ ವಿದಿ ವಿಧಾನಗಳಲ್ಲಿ ಭಾಗವಹಿಸಿದರು.ನಾಗಾರಾಧನೆಯ ಪ್ರಸಿದ್ಧ ಪುಣ್ಯ ತಾಣ ಸುಬ್ರಹ್ಮಣ್ಯದ ಕುಕ್ಕೆಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಮತ್ತು ಕುಮಾರಪರ್ವತಕ್ಕೆ ಪವಿತ್ರ ಸಂಬಂಧವಿದ್ದು, ಈ ಪ್ರಕಾರ ಪೂರ್ವ ಶಿಷ್ಟ ಸಂಪ್ರದಾಯದ ಪ್ರಕಾರ ನಡೆದ ಕುಮಾರಯಾತ್ರೆಯಲ್ಲಿ ದೇವಳದ ಅರ್ಚಕರು ಆರಂಭದಲ್ಲಿ ಕುಮಾರನ ಪಾದಗಳಿಗೆ ಜಲಾಭಿಷೇಕ ನೆರವೇರಿಸಿದರು.ಬಳಿಕ ಸೀಯಾಳಾಭಿಷೇಕ ಮಾಡಿದರು.

ನಂತರ ಅರಸಿನ ಮತ್ತು ಕಲ್ಲು ಸಕ್ಕರೆಯನ್ನು ಪಾದಗಳಿಗೆ ಅರ್ಪಿಸಿದರು. ನಂತರ ಪುಷ್ಪಾಲಂಕರಾದ ಮಾಡಿ ಫಲಸಮರ್ಪಣೆ ನೆರವೇರಿಸಿದರು. ನೈವೇದ್ಯ ಸಮರ್ಪಣೆ ಮಾಡಿದರು. ಬಳಿಕ ವೈದಿಕರ ಮಂತ್ರೋಚ್ಚರಣೆಯ ನಡುವೆ ಅರ್ಚಕರು ಪಾದಗಳಿಗೆ ಪೂಜೆ ನೆರವೇರಿಸಿದರು.