ನದಿ ಪಾತ್ರದ ಜಮೀನು ಮುಳುಗಡೆ

| Published : Jul 28 2024, 02:03 AM IST

ಸಾರಾಂಶ

ಗೊರೂರು ಹೇಮಾವತಿ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಹೊರ ಬಿಟ್ಟಿರುವುದರಿಂದ ಅಪಾಯದ ಮಟ್ಟ ಮೀರಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಬೆಳೆ ಜಮೀನು ಮುಳುಗಡೆಯಾಗಿದೆ. ಮರಡಿ, ಅತ್ನಿ, ಹೊನ್ನೇಗೌಡನಹಳ್ಳಿ ಸೇರಿದಂತೆ ಕಸಬಾ ಹೋಬಳಿ ಭಾಗದಲ್ಲಿ ಹೇಮಾವತಿ ನದಿ ಹಾದುಹೋಗಿರುವ ಉದ್ದಕ್ಕೂ ರೈತರು ಬೆಳೆದಿದ್ದ ವಿವಿಧ ಬೆಳೆಗಳು ನೀರು ಪಾಲಾಗಿವೆ.

ಕನ್ನಡಪ್ರಭ ವಾರ್ತೆ ಅರಕಲಗೂಡು

ಮುಂಗಾರು ಮಳೆ ಆರ್ಭಟ ತಗ್ಗದ ಪರಿಣಾಮ ತಾಲೂಕಿನಲ್ಲಿ ಕಾವೇರಿ ಹಾಗೂ ಹೇಮಾವತಿ ನದಿ ಉಕ್ಕಿ ಹರಿಯುತ್ತಿದ್ದು ಅಪಾರ ಪ್ರಮಾಣದಲ್ಲಿ ಬೆಳೆ ಅಚ್ಚುಕಟ್ಟು ಜಮೀನು ಜಲಾವೃತವಾಗಿದೆ. ಕಳೆದ 20 ದಿನಗಳಿಂದ ನಿರಂತರ ಸುರಿಯುತ್ತಿರುವ ಮಳೆಗೆ ಜಮೀನುಗಳಲ್ಲಿ ಜರಿಯಂತೆ ನೀರು ಹರಿಯುತ್ತಿದ್ದೂ, ಇದರಿಂದ ಸಣ್ಣ ಸಣ್ಣ ಕಟ್ಟೆಗಳು ಭರ್ತಿಯಾಗಿವೆ.

ಗೊರೂರು ಹೇಮಾವತಿ ಜಲಾಶಯದಿಂದ ಅಧಿಕ ಪ್ರಮಾಣದ ನೀರು ಹೊರ ಬಿಟ್ಟಿರುವುದರಿಂದ ಅಪಾಯದ ಮಟ್ಟ ಮೀರಿ ನದಿ ಉಕ್ಕಿ ಹರಿಯುತ್ತಿದ್ದು, ನದಿ ಪಾತ್ರದ ಬೆಳೆ ಜಮೀನು ಮುಳುಗಡೆಯಾಗಿದೆ. ಮರಡಿ, ಅತ್ನಿ, ಹೊನ್ನೇಗೌಡನಹಳ್ಳಿ ಸೇರಿದಂತೆ ಕಸಬಾ ಹೋಬಳಿ ಭಾಗದಲ್ಲಿ ಹೇಮಾವತಿ ನದಿ ಹಾದುಹೋಗಿರುವ ಉದ್ದಕ್ಕೂ ರೈತರು ಬೆಳೆದಿದ್ದ ವಿವಿಧ ಬೆಳೆಗಳು ನೀರು ಪಾಲಾಗಿವೆ.

ಕಾವೇರಿ ಪ್ರವಾಹದಿಂದಾಗಿ ಕೊಣನೂರು ಮತ್ತು ರಾಮನಾಥಪುರ ಹೋಬಳಿ ಭಾಗದ ನದಿ ಪಾತ್ರದ ತಗ್ಗು ಪ್ರದೇಶದ ಬೆಳೆ ಜಮೀನು ನೆರೆಗೆ ತುತ್ತಾಗಿ ಹಾಳಾಗಿದೆ. ತಂಬಾಕು, ಆಲಸಂದೆ, ಶುಂಠಿ, ದ್ವಿದಳ ಧಾನ್ಯ ಬೆಳೆಗಳು ಹಾಗೂ ತೋಟದ ಬೆಳೆ ಪ್ರವಾಹದ ನೀರಿನಲ್ಲಿ ಮುಳುಗಿ ನಾಶವಾಗಿ ರೈತರಿಗೆ ಅಪಾರ ಪ್ರಮಾಣದ ಆರ್ಥಿಕ ಸಂಕಷ್ಟ ತಂದೊಡ್ಡಿದೆ.

ಮುಂಗಾರು ಸೋನೆ ಮಳೆ ಸಮಯದಲ್ಲಿ ಪ್ರತಿ ವರ್ಷ ನದಿ ಪಾತ್ರದ ಅಚ್ಚುಕಟ್ಟಿನಲ್ಲಿ ಬೆಳೆದ ಬೆಳೆಗಳು ನೆರೆಗೆ ಸಿಲುಕಿ ಬಲಿಯಾಗುತ್ತಿವೆ. ದುರಾದೃಷ್ಟವಶಾತ್ ಒಂದು ಸಲವೂ ಸಹ ಬಿಡಿಗಾಸು ಪರಿಹಾರ ಸಿಕ್ಕಿಲ್ಲ. ಅಪಾರ ಪ್ರಮಾಣದ ಹಣ ವ್ಯಯಿಸಿ ಕಷ್ಟಪಟ್ಟು ಬೆಳೆದ ಬೆಳೆಗಳ ಫಸಲು ಕೈ ಸೇರುವ ಹೊತ್ತಿಗೆ ನೀರು ಪಾಲಾಗುತ್ತಿವೆ. ಇತ್ತ ಕೈಗೆ ಬಂದ ತುತ್ತು ಬಾಯಿಗೆ ಬಾರದಾಗುತ್ತಿವೆ. ಇನ್ನೊಂದೆಡೆ ಬೆಳೆ ಹಾನಿ ಪರಿಹಾರವೂ ಕೈಸೇರುತ್ತಿಲ್ಲದ ಕಾರಣ ಆರ್ಥಿಕವಾಗಿ ನಷ್ಟ ಅನುಭವಿಸುವಂತಾಗಿದೆ ಎಂದು ರೈತರು ಅಳಲು ತೋಡಿಕೊಂಡಿದ್ದಾರೆ.

ಸಂಚಾರ ಅಸ್ತವ್ಯಸ್ಥ: ಮರಡಿ, ಹೊನ್ನೇಗೌಡನಹಳ್ಳಿ ಸೇರಿದಂತೆ ಗೊರೂರು- ಹೊಳೆನರಸೀಪುರ ಮಾರ್ಗದ ರಸ್ತೆ ಮೇಲೆ ಹೇಮಾವತಿ ನದಿ ಉಕ್ಕಿ ಹರಿದು ಸಂಚಾರ ವ್ಯವಸ್ಥೆ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸಂಪರ್ಕ ರಸ್ತೆ ಸಂಚಾರ ಕಡಿತಗೊಂಡ ಪರಿಣಾಮ ಸಾರ್ವಜನಿಕರು ಮತ್ತು ವಾಹನ ಸವಾರರು ಪರದಾಡುವಂತಾಗಿತ್ತು. ಕೆಲವು ಕಡೆ ಬದಲಿ ರಸ್ತೆಯಲ್ಲಿ ಸುತ್ತಿ ಬಳಸುವಂತಾಗಿತ್ತು.