ಸಾರಾಂಶ
ಬೈಲಹೊಂಗಲ ಪಟ್ಟಣದಲ್ಲಿ ಬುಧವಾರ ಗುಡುಗು ಸಹಿತ ಸುರಿದ ಧಾರಾಕಾರ ಮಳೆಯ ಪರಿಣಾಮ ಪ್ರಮುಖ ರಸ್ತೆಗಳ ತುಂಬೆಲ್ಲ ನೀರು ಹರಿದು, ಸಂಚಾರಕ್ಕೆ ಅಡಚಣೆ ಉಂಟಾಯಿತು.
ಕನ್ನಡಪ್ರಭ ವಾರ್ತೆ ಬೈಲಹೊಂಗಲ
ಪಟ್ಟಣದಲ್ಲಿ ಬುಧವಾರ ಗುಡುಗು ಸಹಿತ ಸುರಿದ ಧಾರಾಕಾರ ಮಳೆಯ ಪರಿಣಾಮ ಪ್ರಮುಖ ರಸ್ತೆಗಳ ತುಂಬೆಲ್ಲ ನೀರು ಹರಿದು, ಸಂಚಾರಕ್ಕೆ ಅಡಚಣೆ ಉಂಟಾಯಿತು.ಮಳೆಯಿಂದ ಗಟಾರಗಳು ತುಂಬಿ ಪ್ರಮುಖ ರಸ್ತೆಗಳು ಜಲಾವೃತಗೊಂಡು ವಾಹನ ಸಂಚಾರಕ್ಕೆ ಅಡಚಣೆ ಆಗಿ ಸವಾರರು ಪರದಾಡುವಂತಾಯಿತು. ಕೆಲಕಾಲ ಟ್ರಾಫಿಕ್ ಜಾಮ್ ಆಗಿತ್ತು. ರಸ್ತೆಯಲ್ಲಿ ರಭಸದಿಂದ ಹರಿಯುತ್ತಿದ್ದ ನೀರಿನಲ್ಲಿ ಕೆಲ ದ್ವಿಚಕ್ರ ವಾಹನ ಸವಾರರು, ಪಾದಚಾರಿಗಳು ರಸ್ತೆ ದಾಟಲು ಹರಸಾಹಸ ಪಡುವಂತಾಯಿತು. ರಸ್ತೆಗಳು ನದಿಯಂತೆ ಕಾಣುತ್ತಿದ್ದವು. ದಟ್ಟವಾದ ಮೋಡ ಕವಿದಿದ್ದರಿಂದ ಮಧ್ಯಾಹ್ನವೂ ವಾಹನಗಳು ಹೆಡ್‌ಲೈಟ್ ಹಚ್ಚಿಕೊಂಡು ಸಂಚರಿಸಬೇಕಾಯಿತು.
ಭಾರೀ ಮಳೆಗೆ ಚರಂಡಿ ಬ್ಲಾಕ್ ಆಗಿ ಸಾಯಿ ಮಂದಿರ ಹತ್ತಿರದ ಬಾಯಪಾಸ್ ರಸ್ತೆಯ ಕಾರು ಗ್ಯಾರೇಜ್ ಗೆ ನೀರು ನುಗ್ಗಿತು. ಅಂಗಡಿಕಾರರು ನೀರು ಹೊರ ಹಾಕಲು ಹರಸಾಹಸ ಪಟ್ಟರು. ಇದರ ಹತ್ತಿರದಲ್ಲೇ ನಿರ್ಮಾಣ ಹಂತದಲ್ಲಿರುವ ಮನೆ ಸುತ್ತ ಮಳೆ ನೀರು ಆವರಿಸಿ ಮನೆ ಮಾಲೀಕರು ಆತಂಕ ವ್ಯಕ್ತಪಡಿಸಿದರು. ಚನ್ನಮ್ಮ ವೃತ್ತದ ಬಸ್ ತಂಗುದಾಣ , ಸಂಗೊಳ್ಳಿ ರಾಯಣ್ಣ ವೃತ್ತ, ಕೇಂದ್ರ ಬಸ್ ನಿಲ್ದಾಣ, 4ನೇ ವಾರ್ಡದ ಹುಡೇದ ಬಾವಿ, ಬಾಗವಾನ ಚಾಳ ಸೇರಿದಂತೆ ಮುಖ್ಯರಸ್ತೆಗಳು ಮಳೆ ನೀರಿನಿಂದ ಕೆರೆಯಂತೆ ಕಂಡುಬಂದವು. ಪುರಸಭೆ ಮುಖ್ಯಾಧಿಕಾರಿ ವೀರೇಶ ಹಸಬಿ ಬಾಗವಾನ ಚಾಳ, ಆಶ್ರಯ ಕಾಲೋನಿ, ಇಂಚಲ ರಸ್ತೆ, ವಿದ್ಯಾನಗರ, ಹುಡೇದ ನಗರ ಸೇರಿ ಇನ್ನಿತರ ಸ್ಥಳಗಳಿಗೆ ಭೇಟಿ ನೀಡಿ ಪರೀಶಿಲಿಸಿ ಬೀದಿಗಳಲ್ಲಿ ಚರಂಡಿ ಸ್ವಚ್ಛತೆಗೆ ಆದ್ಯತೆ ನೀಡಲಾಗುವುದು ಎಂದು ತಿಳಿಸಿದರು.