ನದಿಯಿಲ್ಲದೆ ಯಾವ ದೇಶವೂ ಇಲ್ಲ, ಸಮಾಜವು ಇಲ್ಲ, ಜಗತ್ತು ಇಲ್ಲ. ಎಲ್ಲರೂ ಗೌರವಿಸುವ ಧರ್ಮ ಗ್ರಂಥಗಳಲ್ಲಿ ಸಹ ಉಲ್ಲೇಖವಿದೆ

ಗಂಗಾವತಿ: ಜೀವ ಸಂಕುಲಗಳ ಬದುಕಿಗೆ ನದಿಗಳು ಜೀವಸೆಲೆಗಳಾಗಿದ್ದು, ಇಂತಹ ನದಿಗಳಿಗೆ ಪ್ಲಾಸ್ಟಿಕ್, ಚರಂಡಿ, ಕೈಗಾರಿಕೆ ತ್ಯಾಜ್ಯ ಬಿಡುವುದರಿಂದ ಕಲುಷಿತವಾಗುತ್ತಿರುವುದು ನೋವಿನ ಸಂಗತಿಯಾಗಿದ್ದು, ನದಿಗಳ ಕಲುಷಿತ ಮಾಡುವುದು ಪಾಪದ ಕೆಲಸವಾಗಿದೆ, ನದಿಗಳ ರಕ್ಷಣೆಯಿಂದ ಮಾತ್ರ ಪ್ರಕೃತಿ ರಕ್ಷಣೆ ಸಾಧ್ಯ ಎಂದು ನೇತಾಜಿ ಸುಭಾಷ್ ಚಂದ್ರ ಭೋಸ್ ಮೊಮ್ಮಗಳು ರಾಜಶ್ರೀ ಚೌಧರಿ ಹೇಳಿದರು.

ನಗರದ ಹಿರೇಜಂತಕಲ್ ಪಂಪಾವಿರೂಪಾಕ್ಷೇಶ್ವರ ದೇವಸ್ಥಾನದ ಆವರಣದಲ್ಲಿ ನವದೆಹಲಿಯ ರಾಷ್ಟ್ರೀಯ ಸ್ವಾಭಿಮಾನ ಆಂದೋಲನ, ನಿರ್ಮಲ ತುಂಗಭದ್ರಾ ಅಭಿಯಾನ ಸಮಿತಿ, ಶಿವಮೊಗ್ಗದ ಪರ್ಯಾವರಣ ಟ್ರಸ್ಟ್ ಸಹಯೋಗದಲ್ಲಿ ಶನಿವಾರ ಹಮ್ಮಿಕೊಂಡ 3ನೇ ಹಂತದ ನಿರ್ಮಲ ತುಂಗಭದ್ರಾ, ಜಲ ಜಾಗೃತಿ- ಜನ ಜಾಗೃತಿ ಪಾದಯಾತ್ರೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ನದಿಯ ತಟಗಳಲ್ಲಿ ಜಗತ್ತಿನ ನಾಗರಿಕತೆ, ಸಾಮ್ರಾಜ್ಯ ನಿರ್ಮಾಣ ಆಗಿದ್ದು. ಕೃಷ್ಣದೇವರಾಯ ತನ್ನ ಸಾಮ್ರಾಜ್ಯ ನಿರ್ಮಿಸಿದ್ದು ತುಂಗಭದ್ರಾ ನದಿ ತಟದಲ್ಲಿಯೇ. ನದಿಯಿಲ್ಲದೆ ಯಾವ ದೇಶವೂ ಇಲ್ಲ, ಸಮಾಜವು ಇಲ್ಲ, ಜಗತ್ತು ಇಲ್ಲ. ಎಲ್ಲರೂ ಗೌರವಿಸುವ ಧರ್ಮ ಗ್ರಂಥಗಳಲ್ಲಿ ಸಹ ಉಲ್ಲೇಖವಿದೆ ಎಂದರು.

ನವದೆಹಲಿ ರಾಷ್ಟ್ರೀಯ ಸ್ವಾಭಿಮಾನ ಆಂದೋಲನದ ಅಧ್ಯಕ್ಷ ಬಸವರಾಜ ಪಾಟೀಲ ವೀರಾಪುರ ಮಾತನಾಡಿ, ನದಿಗಳು ತುಂಬಿ ಹರಿದರೆ ಈ ನಿರ್ಮಲತೆ ಕೈಗೊಳ್ಳುವ ಅವಶ್ಯಕತೆ ಬರಲ್ಲ. ಪರಿಸರ ನಾಶದಿಂದಲೇ ನದಿಗಳು ತನ್ನ ಮೂಲ ಸ್ವರೂಪ ಕಳೆದುಕೊಂಡು ಅವನತಿ ಅಂಚಿನತ್ತ ಸಾಗುತ್ತಿವೆ. ದೇಶದಲ್ಲಿರುವ ಎಲ್ಲ ನದಿಗಳ ಪೈಕಿ ಈಗಾಗಲೇ 200 ನದಿಗಳು ಭೂಪಟದಲ್ಲಿ ಕಾಣದಂತೆ ಹೋಗಿವೆ. 80 ನದಿಗಳು ಅಪಾಯದ ಅಂಚಿನಲ್ಲಿವೆ. ಸದ್ಯ ನದಿಗಳ ಮಲೀನತೆ ಸಮಸ್ಯೆ ಒಂದಾದರೆ ನದಿಗಳು ಹರಿಯುವಿಕೆ ಸಮಸ್ಯೆ ಇನ್ನೊಂದು. ಹರಿಹರದಿಂದ ಕಿಷ್ಕಿಂಧವರೆಗೆ ನಡೆದ ಜಾಗೃತಿ ಪಾದಯಾತ್ರೆಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ, ಚರಂಡಿ, ಕೈಗಾರಿಕೆ ನೀರು ಕಾಣ ಸಿಗುತ್ತದೆ ಎಂದು ಹೇಳಿದರು.

ಇದಕ್ಕೂ ಮುನ್ನ ನೇತಾಜಿ ಸುಭಾಷ್ ಚಂದ್ರ ಬೋಸ್ ಮೊಮ್ಮಗಳು, ರಾಜವಂಶಸ್ಥೆ ಹಾಗೂ 3ನೇ ಹಂತದ ತುಂಗಾಭದ್ರ ನಿರ್ಮಲ ಅಭಿಯಾನದ ರಾಯಬಾರಿ ಲಲಿತರಾಣಿ ಶ್ರೀರಂಗದೇವರಾಯಲು ಅವರು ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಲ್ಲಿ ತುಂಗಭದ್ರಾ ನೀರಿಗೆ ವಿಶೇಷ ಪೂಜೆ ಸಲ್ಲಿಸಿದರು. ನಂತರ ಪಂಪಾ ವಿರೂಪಾಕ್ಷೇಶ್ವರ ದೇವಸ್ಥಾನದಿಂದ ಆರಂಭವಾರ ಕಿಷ್ಕಿಂಧ-ಮಂತ್ರಾಲಯದವರೆಗಿನ 3ನೇ ಹಂತದ ನಿರ್ಮಲ ತುಂಗಭದ್ರಾ ಅಭಿಯಾನದ ಜಾಗೃತಿ ಪಾದಯಾತ್ರೆ ಕೃಷ್ಣದೇವರಾಯ ವೃತ್ತದ ಮೂಲಕ ಚೆನ್ನಬಸವ ತಾತನ ಮಠದ ಮೂಲಕ ಜುಲೈನಗರಕ್ಕೆ ತೆರಳಿ ಸಮಾರೋಪವಾಯಿತು.

ಗಾಯತ್ರಿ ಪೀಠದ ದಯಾನಂದ ಸ್ವಾಮೀಜಿ, ಚರ್ಚ್ ಫಾದರ್ ಯೋಹಾನ್ ಬಾಬು, ಮಾಜಿ ಶಾಸಕ ಪರಣ್ಣ ಮುನವಳ್ಳಿ, 3ನೇ ಹಂತದ ನಿರ್ಮಲ ತುಂಗಭದ್ರಾ ಅಭಿಯಾನದ ಸಂಚಾಲಕ ಡಾ. ಶಿವಕುಮಾರ ಮಾಲಿಪಾಟೀಲ, ಅಭಿಯಾನದ ಪ್ರಧಾನ ಸಂಚಾಲಕ ಮಹಿಮಾ ಪಾಟೀಲ್, ಮಾಜಿ ಸಂಸದ ವಿರುಪಾಕ್ಷಪ್ಪ, ಮಾಜಿ ಸಂಸದ ಶಿವರಾಮೆಗೌಡ, ಗಿರೀಶ್ ಪಟೇಲ್, ಜೆ.ನಾಗರಾಜ, ಸಂತೋಷ ಕೆಲೋಜಿ, ಜಗನ್ನಾಥ ಆಲಂಪಲ್ಲಿ, ಗಿರಿರಾಜ ಗುಪ್ತಾ, ಕಾಡಾ ಮಾಜಿ ಅಧ್ಯಕ್ಷ ತಿಪ್ಪೇರುದ್ರ ಸ್ವಾಮಿ, ಮಂಜುನಾಥ ಕಟ್ಟಿಮನಿ, ವಿಷ್ಣುತೀರ್ಥ ಜೋಶಿ, ಮಹೇಶ ಕುಮಾರ ಹಾಗೂ ಇತರರಿದ್ದರು.