ಸಾರಾಂಶ
ಕಾವೇರಿ ನದಿ ನೀರಿನ ಹರಿವು ಹೆಚ್ಚಾದ ಪರಿಣಾಮ ತಾಲೂಕಿನ ನದಿ ಪಾತ್ರದ ಗ್ರಾಮಗಳ ಜಮೀನು ಜಲಾವೃತವಾಗಿದ್ದು, ಜನರು ಪ್ರವಾಹದ ಆತಂಕ ಎದುರಿಸುವಂತಾಗಿದೆ.
ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ
ಕಾವೇರಿ ನದಿ ನೀರಿನ ಹರಿವು ಹೆಚ್ಚಾದ ಪರಿಣಾಮ ತಾಲೂಕಿನ ನದಿ ಪಾತ್ರದ ಗ್ರಾಮಗಳ ಜಮೀನು ಜಲಾವೃತವಾಗಿದ್ದು, ಜನರು ಪ್ರವಾಹದ ಆತಂಕ ಎದುರಿಸುವಂತಾಗಿದೆ.ತಾಲೂಕಿನ ನದಿ ತೀರದ ಗ್ರಾಮಗಳಾದ ಹಳೇ ಹಂಪಾಪುರ ಹಾಗೂ ಮುಳ್ಳೂರಲ್ಲಿ ರೈತರ ನೂರಾರು ಎಕರೆಯಲ್ಲಿ ಬೆಳೆದಿದ್ದ ಬೆಳೆಯ ಪ್ರದೇಶವನ್ನೆ ನೀರು ಆವರಿಸಿದ್ದು ಲಕ್ಷಾಂತರ ರು.ಗಳ ನಷ್ಟ ಅನುಭವಿಸುವಂತಾಗಿದೆ. ಜಮೀನುಗಳು ಈಗಾಗಲೇ ಪ್ರವಾಹದಿಂದ ಜಲಾವೃತವಾಗಿರುವುದರಿಂದ ಗ್ರಾಮಗಳು ಮುಳುಗುವ ಆತಂಕ ಎದುರಾಗಿದೆ.
20 ದಿನಗಳ ಹಿಂದೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಾಗಿ ಜಮೀನುಗಳು ಮುಳುಗಡೆಯಾಗಿ ಗ್ರಾಮದ ಅಂಚಿನಲ್ಲಿ ನೀರು ಹರಿಯುತ್ತಿದೆ. ಮತ್ತೇ ಸೋಮವಾರ ರಾತ್ರಿ ನೀರಿನ ಹರಿವು ಹೆಚ್ಚಾಗಿ ಮತ್ತಷ್ಟು ಜಮೀನುಗಳು ಮುಳುಗಡೆಯಾಗಿರುವುದರಿಂದ ಮತ್ತೊಮ್ಮೆ ಪ್ರವಾಹ ಭೀತಿ ಎದುರಿಸುವಂತಾಗಿದೆ. ಸತತವಾಗಿ ಪ್ರವಾಹ ಭೀತಿ ಎದುರಿಸುತ್ತಿರುವ ಗ್ರಾಮಗಳಲ್ಲಿ ತಾಲೂಕು ಆಡಳಿತವು ಜಿಲ್ಲಾಡಳಿತ ಸೂಚನೆ ಮೇರೆಗೆ ಅಗತ್ಯ ಮುಂಜಾಗ್ರತೆಗೆ ಸಜ್ಜಾಗಿದೆ. ರಾಜ್ಯದ ಹಾಗೂ ಕೇರಳದ ಕರಾವಳಿ ತೀರದ ಜಿಲ್ಲೆಗಳಲ್ಲಿ ಕಳೆದ ಎರಡು ತಿಂಗಳುಗಳಿಂದ ಮಳೆಯ ಪ್ರಮಾಣ ಹೆಚ್ಚಾಗಿರುವ ಹಿನ್ನೆಲೆ ಕಬಿನಿ ಹಾಗೂ ಕೆ ಆರ್ ಎಸ್ ಜಲಾಶಯಗಳಿಗೆ ನಿರಂತರವಾಗಿ ನೀರು ಹರಿದು ಬರುತ್ತಿರುವುದರಿಂದ ಜಲಾಶಯಗಳು ಅದಾಗಲೇ ತುಂಬಿ ಭರ್ತಿಯಾಗಿದೆ.2 ಜಲಾಶಯಗಳಿಂದ 1.25 ಲಕ್ಷ ಕ್ಯೂಸೆಕ್ಸ್ ಗೂ ಅಧಿಕ ಪ್ರಮಾಣದಲ್ಲಿ ನೀರನ್ನು ಕಾವೇರಿ ನದಿಗೆ ಹರಿಬಿಡಲಾಗುತ್ತಿದೆ. ಇದರಿಂದ ಕಾವೇರಿ ನದಿ ಉಕ್ಕಿ ಹರಿಯುತ್ತಿದೆ.ಇದರಿಂದಾಗಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತದೆ. ಕಳೆದ ಬಾರಿಯಂತೆ ಈ ಬಾರಿಯು ಮಳುಗಡೆಯ ಭೀತಿ ಎದುರಾಗಿದೆ.
ಸೋಮವಾರದ ತನಕ ನದಿ ಪಾತ್ರದಲ್ಲಿ ತುಂಬಿ ಹರಿಯುತ್ತಿದ್ದ ನೀರು ಮಂಗಳವಾರ ಹರಿವು ಹೆಚ್ಚಳ ಹಿನ್ನೆಲೆ ಇನ್ನು ಹೆಚ್ಚಿನ ಪ್ರಮಾಣದಲ್ಲಿ ನೀರು ಹರಿಯಬಿಟ್ಟರೆ ಯಾವುದೇ ಕ್ಷಣದಲ್ಲಾದರೂ ನೀರಿನ ಪ್ರಮಾಣ ಹೆಚ್ಚಾಗಿ ಹಲವು ಗ್ರಾಮಗಳಿಗೆ ನೀರು ಪ್ರವೇಶಿಸುವ ಸಾಧ್ಯತೆ ಅಲ್ಲಗೆಳೆಯುವಂತಿಲ್ಲ.ಈ ಹಿನ್ನೆಲೆ ಜಿಲ್ಲಾಡಳಿತ ಸಹಾ ಮುಂಜಾಗ್ರತೆ ಕ್ರಮಕೈಗೊಂಡು ಅಲ್ಲಿನ ನಿವಾಸಿಗಳನ್ನು ಸ್ಥಳಾಂತರ ಮಾಡಿ ಅವರಿಗೆ ಉಟೋಪಚಾರ, ಅಗತ್ಯಕ್ರಮಕ್ಕೂ ಅಧಿಕಾರಿಗಳು ಸಜ್ಜಾಗಿದ್ದು, ಈಗಾಗಲೇ ಕಳೆದ 2 ದಿನಗಳಿಂದ ತಹಸೀಲ್ದಾರ್ ಬಸವರಾಜು ಭೇಟಿ ನೀಡಿ ಅಲ್ಲಿನ ಸ್ಥಿತಿ, ಗತಿ ವೀಕ್ಷಿಸಿದ್ದಾರೆ.