ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಆರ್.ಎಂ.ಎಸ್. ಕಚೇರಿ ಶಾಶ್ವತ ಸ್ಥಳಾಂತರ

| Published : Sep 06 2025, 01:01 AM IST

ಸಾರಾಂಶ

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಬ್ರಿಟಿಷ್‌ ಕಾಲದಿಂದಲೂ ಇದ್ದ ಆರ್‌ಎಂಎಸ್‌ (ರೈಲ್ವೆ ಮೇಲ್‌ ಸರ್ವೀಸ್‌) ಕಚೇರಿಯನ್ನು ಈಗ ಶಾಶ್ವತವಾಗಿ ಪಾಂಡೇಶ್ವರ ಅಂಚೆ ಕಚೇರಿ ಆವರಣಕ್ಕೆ ಸ್ಥಳಾಂತರಗೊಂಡಿದೆ

ಆತ್ಮಭೂಷಣ್‌

ಮಂಗಳೂರು: ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ ಬ್ರಿಟಿಷ್‌ ಕಾಲದಿಂದಲೂ ಇದ್ದ ಆರ್‌ಎಂಎಸ್‌ (ರೈಲ್ವೆ ಮೇಲ್‌ ಸರ್ವೀಸ್‌) ಕಚೇರಿಯನ್ನು ಈಗ ಶಾಶ್ವತವಾಗಿ ಪಾಂಡೇಶ್ವರ ಅಂಚೆ ಕಚೇರಿ ಆವರಣಕ್ಕೆ ಸ್ಥಳಾಂತರಗೊಂಡಿದೆ. ಈ ಮೂಲಕ ಶತಮಾನ ಕಂಡ ರೈಲ್ವೆ ನಿಲ್ದಾಣದ ಆರ್‌ಎಂಎಸ್‌ ಕಚೇರಿ ಗತ ಇತಿಹಾಸ ಸೇರಿದೆ. ಭಾರತೀಯ ಅಂಚೆ ಇಲಾಖೆ ದೊಡ್ಡ ನಗರಗಳ ಜಿಲ್ಲಾ ಕೇಂದ್ರ ಅಥವಾ ರೈಲು ಸಂಪರ್ಕ ಇರುವ ಪ್ರಮುಖ ನಗರದಲ್ಲಿ ಅಥವಾ ಪ್ರಮುಖ ಜಂಕ್ಷನ್ ರೈಲು ನಿಲ್ದಾಣದಲ್ಲಿ ಆರ್.ಎಂ.ಎಸ್. ಕಚೇರಿ ಸ್ಥಾಪಿಸುತ್ತದೆ. ರಸ್ತೆ ಸಾರಿಗೆಗಿಂತ ರೈಲು ಮೂಲಕ ದೂರದ ಊರುಗಳಿಗೆ ಅಂಚೆ ಸೇವೆಯನ್ನು ತ್ವರಿತವಾಗಿ ತಲುಪಿಸುವ ದೃಷ್ಟಿಯಿಂದ ಆರ್‌ಎಂಎಸ್‌ ಕಚೇರಿಯನ್ನು ಹೆಚ್ಚಾಗಿ ರೈಲು ನಿಲ್ದಾಣದಲ್ಲೇ ಸ್ಥಾಪಿಸುವುದು ವಾಡಿಕೆ. ಮಂಗಳೂರಿನಲ್ಲೂ ಬಹಳ ವರ್ಷಗಳಿಂದ ಅಂಚೆ ಇಲಾಖೆಯ ಆರ್.ಎಂ.ಎಸ್. ಕಚೇರಿ ಇಲ್ಲಿನ ಸೆಂಟ್ರಲ್ ರೈಲು ನಿಲ್ದಾಣದ ಆವರಣದಲ್ಲಿ ಕಾರ್ಯಾಚರಿಸುತ್ತಿತ್ತು.

ಮಂಗಳೂರಿನಿಂದ ಚೆನ್ನೈಗೆ ಬ್ರಿಟಿಷರ ಕಾಲದಿಂದಲೇ ಸಂಚರಿಸುತ್ತಿರುವ ರೈಲು ಸಂಖ್ಯೆ 12601/02 ಮಂಗಳೂರು ಸೆಂಟ್ರಲ್‌-ಎಂ.ಜಿ.ಆರ್. ಚೆನ್ನೈ ಸೆಂಟ್ರಲ್‌ ಸೂಪರ್ ಫಾಸ್ಟ್ ಮೈಲ್ ಎಕ್ಸ್‌ಪ್ರೆಸ್ ರೈಲಿಗೆ ಇದೇ ಆರ್‌ಎಂಎಸ್‌ ಕಚೇರಿಯಿಂದ ಅಂಚೆ ಕಚೇರಿಗಳಲ್ಲಿ ಬುಕ್ ಮಾಡುವ ಪೋಸ್ಟ್, ಪಾರ್ಸೆಲ್ ಹಾಗೂ ಇತರೇ ವಸ್ತುಗಳನ್ನು ಕಳುಹಿಸಲಾಗುತ್ತಿತ್ತು. ಜೊತೆಗೆ ಈ ಕಚೇರಿಯಲ್ಲಿ 24×7 ಪೋಸ್ಟ್ ಬುಕ್ ಮಾಡುವ ಸೇವೆಯೂ ಲಭ್ಯವಿತ್ತು. ಈಗ ಸೆಂಟ್ರಲ್ ರೈಲು ನಿಲ್ದಾಣದಲ್ಲಿ ಇರುವ ಆರ್‌ಎಂಎಸ್‌ ಕಚೇರಿಯ ಬಾಗಿಲು ಬಂದ್‌ ಆಗಿದ್ದು, ಕೇವಲ ನಾಮಫಲಕ ಮಾತ್ರ ಕಾಣುತ್ತಿದೆ. ಇದರ ಎಲ್ಲ ಸೇವೆಗಳನ್ನು ಪಾಂಡೇಶ್ವರದಲ್ಲಿ ಇರುವ ಅಂಚೆ ಕಚೇರಿ ಆವರಣಕ್ಕೆ ಶಾಶ್ವತವಾಗಿ ಸ್ಥಳಾಂತರಿಸಲಾಗಿದೆ. ಇಲ್ಲಿ ಕೂಡ ದಿನದ 24 ಗಂಟೆಯೂ ಹಿಂದಿನಂತೆಯೇ ಅಂಚೆ ಬುಕ್‌ ಸೇವೆಯನ್ನು ಮುಂದುವರಿಸಲಾಗಿದೆ.

ರೈಲು ನಿಲ್ದಾಣ ಮೇಲ್ದರ್ಜೆ ಕಾಮಗಾರಿಗಾಗಿ ಸ್ಥಳಾಂತರ

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣವನ್ನು ವಿಶ್ವದರ್ಜೆ ರೈಲು ನಿಲ್ದಾಣವಾಗಿ ಮೇಲ್ದರ್ಜೆಗೆ ಏರಿಸುವ ಕಾಮಗಾರಿ ಶೀಘ್ರವೇ ಆರಂಭವಾಗಲಿದೆ. ಹೀಗಾಗಿ ಈ ರೈಲು ನಿಲ್ದಾಣದ ಮೊದಲ ಫ್ಲ್ಯಾಟ್‌ಫಾರಂ ಬಳಿಯ ಪ್ರಧಾನ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದ ಆರ್‌ಎಂಎಸ್‌ ಕಚೇರಿಯನ್ನು ಸ್ಥಳಾಂತರಿಸಲಾಗಿದೆ ಎಂಬುದು ಅಂಚೆ ಇಲಾಖೆ ಅಧಿಕಾರಿಗಳ ಹೇಳಿಕೆ. ಕಳೆದ ವರ್ಷವೇ ಫಾಲ್ಘಾಟ್‌ ರೈಲ್ವೆ ವಿಭಾಗದ ಅಧಿಕಾರಿಗಳು ಆರ್‌ಎಂಎಸ್‌ ಕಚೇರಿಯನ್ನು ಸ್ಥಳಾಂತರಿಸುವಂತೆ ಲಿಖಿತವಾಗಿ ಕೋರಿಕೆ ಸಲ್ಲಿಸಿದ್ದರು. ರೈಲು ನಿಲ್ದಾಣದಲ್ಲಿ ಕಾರ್ಯಾಚರಿಸುತ್ತಿದ್ದ ಆರ್‌ಎಂಎಸ್‌ ಕಚೇರಿಯ ಇಡೀ ಕಟ್ಟಡವನ್ನು ಎದುರಿನ ಪಾರ್ಕಿಂಗ್‌ ಸ್ಥಳದ ವರೆಗೆ ವಿಸ್ತರಿಸುವ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ. ಹಾಗಾಗಿ ಇಡೀ ಕಟ್ಟಡವನ್ನೇ ಕೆಡವಲಾಗುತ್ತದೆ. ಹೀಗಾಗಿ ಆರ್‌ಎಂಎಸ್‌ ಕಚೇರಿ ಸ್ಥಳಾಂತರಿಸುವ ಅನಿವಾರ್ಯತೆಯನ್ನು ರೈಲ್ವೆ ಅಧಿಕಾರಿಗಳು ತಿಳಿಸಿದ್ದರು. ಇದಲ್ಲದೆ ರೈಲು ನಿಲ್ದಾಣದಲ್ಲಿದ್ದ ಆರ್‌ಎಂಎಸ್‌ ಕಚೇರಿಗೆ 1.50 ಲಕ್ಷ ರು.ನಷ್ಟು ಬಾಡಿಗೆಯನ್ನೂ ರೈಲ್ವೆ ಇಲಾಖೆಗೆ ಅಂಚೆ ಇಲಾಖೆ ಪಾವತಿಸುತ್ತಿತ್ತು. ಈಗ ಸ್ವಂತ ಕಟ್ಟಡಕ್ಕೆ ಸ್ಥಳಾಂತರಗೊಂಡ ಕಾರಣ ಬಾಡಿಗೆಯಲ್ಲೂ ಅಂಚೆ ಇಲಾಖೆಗೆ ಉಳಿತಾಯವಾಗಿದೆ. 109 ವರ್ಷಗಳ ಇತಿಹಾಸ ತೆರೆಗೆ

ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದಲ್ಲಿ 1916ರಲ್ಲಿ ಆರ್‌ಎಂಎಸ್‌ ಕಚೇರಿ ಆರಂಭಗೊಂಡಿತ್ತು. ಈಗ ಸ್ಥಳಾಂತರಗೊಳ್ಳುವ ವೇಳೆಗೆ 109 ವರ್ಷಗಳನ್ನು ಪೂರೈಸಿದೆ.

ಆಗ ರಾಜ್ಯದ 24 ಸ್ಥಳಗಳಲ್ಲಿ ಆರ್‌ಎಂಎಸ್‌ ಕಚೇರಿಗಳು ಆರಂಭವಾಗಿದ್ದವು. 2015ರಲ್ಲಿ ಸೆಂಟ್ರಲ್‌ ರೈಲು ನಿಲ್ದಾಣದ ನವೀಕೃತ ಕಟ್ಟಡದಲ್ಲಿ ಆರ್‌ಎಂಎಸ್‌ ಕಚೇರಿ ಕಾರ್ಯಾರಂಭಿಸಿತ್ತು. 1907ರಲ್ಲಿ ಮಂಗಳೂರು-ಕಲ್ಲಿಕೋಟೆ(ಕೋಯಿಕ್ಕೋಡ್‌) ನಡುವೆ ರೈಲು ಸಂಪರ್ಕ ಏರ್ಪಟ್ಟಿತ್ತು.

ಪ್ರಸಕ್ತ ಮಂಗಳೂರು ಆರ್‌ಎಂಎಸ್‌ ವ್ಯಾಪ್ತಿಗೆ ಕರಾವಳಿ, ಮಲೆನಾಡು, ಉತ್ತರ ಕರ್ನಾಟಕದ ಚಿತ್ರದುರ್ಗ ವರೆಗೆ ಒಟ್ಟು 14 ಅಂಚೆ ವಿಭಾಗಗಳು ಒಳಗೊಳ್ಳುತ್ತವೆ. ದಕ್ಷಿಣ ಕನ್ನಡ ಅಂಚೆ ಇಲಾಖೆಯ ಕ್ಯೂ ವಿಭಾಗದಲ್ಲಿ ಬರುತ್ತದೆ.

ರೈಲ್ವೆ ಇಲಾಖೆ ಕಾಮಗಾರಿ ನಡೆಸುವ ಕಾರಣ ಆರ್‌ಎಂಎಸ್‌ ಕಚೇರಿಯನ್ನು ಪಾಂಡೇಶ್ವರ ಅಂಚೆ ಕಚೇರಿ ಆವರಣಕ್ಕೆ ತಾತ್ಕಾಲಿಕ ಸ್ಥಳಾಂತರಿಸಲಾಗಿದೆ. ಆರ್‌ಎಂಎಸ್‌ಗಾಗಿ ಪ್ರತ್ಯೇಕ ಕಟ್ಟಡಕ್ಕೆ ಪರಿಶೀಲನೆ ನಡೆಸಲಾಗುತ್ತಿದೆ.

-ಸುಧಾಕರ ಮಲ್ಯ, ಹಿರಿಯ ಅಂಚೆ ಅಧೀಕ್ಷಕರು, ಮಂಗಳೂರು.