ಸಾರಾಂಶ
ಕಾರು ಹಾಗೂ ತೊಗರಿ ಕಟಾವು ಮಾಡುವ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ 5 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮನಗೂಳಿ- ದೇವಾಪೂರದ ಬಿಜ್ಜಳ ರಾಜ್ಯ ಹೆದ್ದಾರಿಯ ಬಿಳೇಭಾವಿ ಕ್ರಾಸ್ ಬಳಿ ಶುಕ್ರವಾರ ಸಂಜೆ ನಡೆದಿದೆ.
ತಾಳಿಕೋಟೆ : ಕಾರು ಹಾಗೂ ತೊಗರಿ ಕಟಾವು ಮಾಡುವ ವಾಹನದ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಒಂದೇ ಕುಟುಂಬದ ಮೂವರು ಸೇರಿದಂತೆ 5 ಜನರು ಸ್ಥಳದಲ್ಲಿಯೇ ಸಾವನ್ನಪ್ಪಿರುವ ಘಟನೆ ತಾಲೂಕಿನ ಮನಗೂಳಿ- ದೇವಾಪೂರದ ಬಿಜ್ಜಳ ರಾಜ್ಯ ಹೆದ್ದಾರಿಯ ಬಿಳೇಭಾವಿ ಕ್ರಾಸ್ ಬಳಿ ಶುಕ್ರವಾರ ಸಂಜೆ ನಡೆದಿದೆ.
ನಿಂಗಣ್ಣ ಪಾಟೀಲ (55), ಭೀಮಶಿ ಸಂಕನಾಳ (65), ಶಶಿಕಲಾ ಜೈನಾಪೂರ (55), ಶಾಂತವ್ವ ಪಾಟೀಲ (45), ದಿಲೀಪ್ ಪಾಟೀಲ(45) ಅಪಘಾತದಲ್ಲಿ ಮೃತಪಟ್ಟವರು. ಇವರು ವಿಜಯಪುರ ತಾಲೂಕಿನ ಅಲಿಯಾಬಾದ ಗ್ರಾಮದವರಾಗಿದ್ದು, ಅಲ್ಲಿಂದ ಹುಣಸಗಿ ತಾಲೂಕಿನ ಅಗ್ನಿ ಗ್ರಾಮಕ್ಕೆ ವರನ ಮನೆತನ ನೋಡಲು ಕಾರಲ್ಲಿ ತೆರಳಿ ವಾಪಸ್ ಬರುತ್ತಿದ್ದರು. ಆಗ ಈ ಅಪಘಾತ ಸಂಭವಿಸಿದೆ.ನಿಂಗಣ್ಣ ಪಾಟೀಲ, ದಿಲೀಪ್ ಪಾಟೀಲ, ಶಾಂತವ್ವ ಪಾಟೀಲ ಒಂದೇ ಕುಟುಂಬದವರಾಗಿದ್ದು, ಇನ್ನಿಬ್ಬರು ಅದೇ ಗ್ರಾಮದವರು. ಅಲ್ಲದೇ, ಶಾಂತವ್ವ ಪಾಟೀಲ ಅವರ ಮಗಳ ಮದುವೆ ನಿಶ್ಚಯಕ್ಕಾಗಿ ವರನ ಮನೆತನ ನೋಡಿಕೊಂಡು ಬರಲು ತೆರಳಿದ್ದರು. ಆದರೆ, ದುರಾದೃಷ್ಟವಶಾತ್ ಅಪಘಾತದಲ್ಲಿ ಮೃತಪಟ್ಟಿದ್ದಾರೆ.
ಅಪಘಾತದ ಬಳಿಕ ತೊಗರಿ ಕಟಾವು ಮಷಿನ್ ಚಾಲಕ ಸ್ಥಳದಿಂದ ನಾಪತ್ತೆಯಾಗಿದ್ದಾನೆ. ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ, ಡಿವೈಎಸ್ಪಿ ಬಲಪ್ಪ ನಂದಗಾವಿ, ಸಿಪಿಐ ಮಲ್ಲಿಕಾರ್ಜುನ ತುಳಸಿಗೇರಿ, ಪಿಎಸ್‌ಐ ರಾಮನಗೌಡ ಸಂಕನಾಳ ಅವರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮುಂದಿನ ತನಿಖೆ ಕೈಗೊಂಡಿದ್ದಾರೆ