ಮುನಿರಾಬಾದ್: ಹುಲಿಗಿ ಕ್ರಾಸ್ ಸಮೀಪ ಮೇಲ್ಸೇತುವೆ ನಿರ್ಮಾಣದಿಂದ ಈ ಭಾಗದಲ್ಲಿ ಸಂಭವಿಸುತ್ತಿದ್ದ ರಸ್ತೆ ಅಪಘಾತಗಳು ಇಳಿಕೆಯಾಗಲಿದೆ ಎಂದು ಕೊಪ್ಪಳ ಸಂಸದ ರಾಜಶೇಖರ ಹಿಟ್ನಾಳ್ ಹೇಳಿದರು.

ಇಲ್ಲಿನ ಸಮೀಪದ ಹುಲಿಗಿ ಕ್ರಾಸ್ ಬಳಿ ₹35 ಕೋಟಿ ವೆಚ್ಚದಲ್ಲಿ ನಿರ್ಮಿಸಿರುವ ಹುಲಿಗಿ ಕ್ರಾಸ್ ಮೇಲ್ಸೇತುವೆಯನ್ನು ಸೋಮವಾರ ಲೋಕಾರ್ಪಣೆ ಮಾಡಿದ ಆನಂತರ ಅವರು ಮಾತನಾಡಿದರು. ಈ ಮೇಲ್ಸೇತುವೆ ನಿರ್ಮಾಣಕ್ಕೂ ಮುಂಚೆ ಈ ಕ್ರಾಸ್‌ನಲ್ಲಿ ಭಾರಿ ಪ್ರಮಾಣದಲ್ಲಿ ಅಪಘಾತ ಸಂಭವಿಸುತ್ತಿತ್ತು. 300ಕ್ಕೂ ಅಧಿಕ ಜನರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಕೇಂದ್ರ ಸರ್ಕಾರ ಅತ್ಯಂತ ಅಪಘಾತ ವಲಯ ಎಂದು ಘೋಷಿಸಿತ್ತು. ಈಗ ಮೇಲ್ಸೇತುವೆ ನಿರ್ಮಾಣದಿಂದ ಹುಲಿಗಿ ಹಾಗೂ ಸುತ್ತಮುತ್ತಲಿನ ಗ್ರಾಮಸ್ಥರು, ಹುಲಿಗೆಮ್ಮ ದೇವಿ ಭಕ್ತರು ನಿಟ್ಟುಸಿರು ಬಿಡುವಂತೆ ಆಗಿದೆ ಎಂದು ಹೇಳಿದರು.

ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್ ಮಾತನಾಡಿ, ಈ ಸೇತುವೆ ಮಂಜೂರಾತಿಗೆ ಕಾರಣೀಭೂತರಾದ ಮಾಜಿ ಸಂಸದ ಕರಡಿ ಸಂಗಣ್ಣ ಅವರನ್ನು ನೆನಪಿಸಿಕೊಳ್ಳಬೇಕು. ಮಾಜಿ ಸಂಸದರ ಮಾರ್ಗದರ್ಶನದಲ್ಲಿ ತಮ್ಮ ಸೋದರ ರಾಜಶೇಖರ್ ಹಿಟ್ನಾಳ್ ತಮ್ಮ ಕ್ಷೇತ್ರದಲ್ಲಿ ಅನೇಕ ಅಭಿವೃದ್ಧಿ ಕಾರ್ಯಗಳು ಮಾಡುತ್ತಿದ್ದಾರೆ ಎಂದು ಹೇಳಿದರು.

ಮಾಜಿ ಸಂಸದ ಕರಡಿ ಸಂಗಣ್ಣ ಮಾತನಾಡಿ, ತಮ್ಮ ಅಧಿಕಾರ ಅವಧಿಯಲ್ಲಿ ಮಂಜೂರಾತಿ ಆಗಿದ್ದ ಹುಲಿಗಿ ಹಾಗೂ ಹಿಟ್ನಾಳ್ ಕ್ರಾಸ್ ಮೇಲ್ಸೇತುವೆ ಕಾಮಗಾರಿಯನ್ನು ತ್ವರಿತವಾಗಿ ಪೂರ್ಣಗೊಳಿಸುವ ನಿಟ್ಟಿನಲ್ಲಿ ಸಂಸದ ರಾಜಶೇಖರ್ ಹಿಟ್ನಾಳ್ ಆಸಕ್ತಿ ವಹಿಸಿದ್ದು ಶ್ಲಾಘನೀಯ ಎಂದರು.

ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಬಾಲಚಂದ್ರ, ಮುಖಂಡರಾದ ವೀರನಗೌಡ ಪಾಟೀಲ್, ಶರಣೇಗೌಡ ಪಾಟೀಲ್, ಖಾಜಾ ಹುಸೇನ್‌ ಹೊಸಳ್ಳಿ, ಯಂಕಪ್ಪ ಉಪಸ್ಥಿತರಿದ್ದರು. ಹೊಸಳ್ಳಿ, ಲಿಂಗಾಪುರ ಹಾಗೂ ಹುಲಿಗಿ ಗ್ರಾಮಸ್ಥರ ವತಿಯಿಂದ ಸಂಸದ ರಾಜಶೇಖರ್ ಹಿಟ್ನಾಳ್ ಅವರನ್ನು ಸನ್ಮಾನಿಸಲಾಯಿತು.