ಇಲ್ಲಿಗೆ ಸಮೀಪದ ಚೆರಿಯಪರಂಬು-ಕಲ್ಲುಮೊಟ್ಟೆಗೆ ತೆರಳುವ ರಸ್ತೆಯ ದುಸ್ಥಿತಿಯಿಂದ ಜನಸಾಮಾನ್ಯರು ಹೈರಾಣಗಿದ್ದಾರೆ. ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಜನಸಾಮಾನ್ಯರು ನಡೆದಾಡಲು, ವಾಹನ ಚಾಲಕರಿಗೂ ಸಮಸ್ಯೆ ಉಂಟಾಗಿದೆ.

ದುಗ್ಗಳ ಸದಾನಂದ ನಾಪೋಕ್ಲು:ಇಲ್ಲಿಗೆ ಸಮೀಪದ ಚೆರಿಯಪರಂಬು-ಕಲ್ಲುಮೊಟ್ಟೆಗೆ ತೆರಳುವ ರಸ್ತೆಯ ದುಸ್ಥಿತಿಯಿಂದ ಜನಸಾಮಾನ್ಯರು ಹೈರಾಣಗಿದ್ದಾರೆ. ರಸ್ತೆ ಸಂಪೂರ್ಣ ಕೆಸರುಮಯವಾಗಿದ್ದು, ಜನಸಾಮಾನ್ಯರು ನಡೆದಾಡಲು, ವಾಹನ ಚಾಲಕರಿಗೂ ಸಮಸ್ಯೆ ಉಂಟಾಗಿದೆ. ಚೆರಿಯ ಪರಂಬು ಭಾಗದಲ್ಲಿ ಸಾಕಷ್ಟು ಮನೆಗಳಿದ್ದು ಇಲ್ಲಿಂದ ಹೆಚ್ಚಿನ ಸಂಖ್ಯೆಯ ವಿದ್ಯಾರ್ಥಿಗಳು ಶಾಲೆಗಳಿಗೆ ತೆರಳುತ್ತಿದ್ದಾರೆ. ಗ್ರಾಮಸ್ಥರು ತಮ್ಮ ಕೆಲಸ ಕಾರ್ಯಗಳಿಗಾಗಿ ಪೇಟೆಯನ್ನು ಅವಲಂಬಿಸಿರುವುದು ಅನಿವಾರ್ಯ. ಆದರೆ ಈ ರಸ್ತೆಯಲ್ಲಿ ನಡೆದಾಡುವುದು ತೀರಾ ಸಮಸ್ಯೆಯಾಗಿ ಕಾಡುತ್ತಿದೆ. ರಸ್ತೆ ಪೂರ್ತಿ ಗುಂಡಿಮಯವಾಗಿದ್ದು, ಗುಂಡಿಗಳಲ್ಲಿ ಕೆಸರು ಮಣ್ಣು ತುಂಬಿಕೊಂಡು ಸಮಸ್ಯೆಗಳ ಸರಮಾಲೆಯಲ್ಲಿ ಸೃಷ್ಟಿಸಿದೆ.

ಈ ರಸ್ತೆಯಲ್ಲಿ ಖಾಸಗಿ ವಾಹನಗಳು, ಆಟೋಗಳು ಸೇರಿದಂತೆ ಶಾಲೆ ವಿದ್ಯಾರ್ಥಿಗಳನ್ನು ಕರೆದೊಯಲು ಶಾಲಾ ವಾಹನಗಳು ಕೂಡ ಸಂಚರಿಸುತ್ತಿವೆ. ಸೋಮವಾರ ಖಾಸಗಿ ಶಾಲೆ ಬಸ್ಸೊಂದು ಕೆಸರಿನಲ್ಲಿ ಹೂತು ಹೋಗಿ ಸಮಸ್ಯೆ ಉಂಟಾಯಿತು. ರಸ್ತೆಯಲ್ಲಿ ಮಣ್ಣು ತಂದು ಸುರಿದಿದ್ದ ಪರಿಣಾಮ ಮಳೆ ನೀರು ಸೇರಿಕೊಂಡು ಸಂಪೂರ್ಣ ರಸ್ತೆ ಕೆಸರುಮಯವಾಗಿದೆ. ಗ್ರಾಪಂ ತುರ್ತಾಗಿ ರಸ್ತೆ ದುರಸ್ತಿಗೆ ಕ್ರಮ ಕೈಗೊಳ್ಳುವಂತೆ ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಚರಿಯಪರಂಬು -ಕಲ್ಲುಮೊಟ್ಟೆ ಸಂಪರ್ಕ ರಸ್ತೆ ಸಂಪೂರ್ಣ ದುಸ್ಥಿತಿಯಲ್ಲಿದ್ದು, ವಾಹನ ಸಂಚಾರ ಅಡಚಣೆಯಾಗುತ್ತಿದೆ. ಇದರಿಂದಾಗಿ ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ತೀವ್ರ ಭಾವನೆ ಪಡುವಂತಾಗಿದೆ. ಕೂಡಲೇ ಸಂಬಂಧಪಟ್ಟವರು ಸೂಕ್ತ ಕ್ರಮ ಕೈಗೊಳ್ಳಬೇಕು.

- ಸಮ್ಮದ್, ಚಾಲಕ ಚೆರಿಯ ಪರಂಬು

ರಸ್ತೆ ಸಮಸ್ಯೆಯನ್ನು ಕೂಡಲೇ ಸರಿಪಡಿಸಲಾಗುವುದು. ಈ ನಿಟ್ಟಿನಲ್ಲಿ ಜಿಲ್ಲಾ ಕಾರ್ಯಪಾಲಕ ಅಭಿಯಂತರರಾದ ಭಾಸ್ಕರ್ ಅವರ ಗಮನಕ್ಕೂ ತರಳಾಗಿದೆ. ಅವರು ಕೂಡ ಖುದ್ದು ಪರಿಶೀಲನೆ ಮಾಡುವರು.

-ಚಂದ್ರಮೌಳಿ ನಾಪೋಕ್ಲು ಗ್ರಾಪಂ ಪಿಡಿಒ