ಸಾರಾಂಶ
ಕಂಪ್ಲಿ: ತಾಲೂಕಿನ ನಂ.10 ಮುದ್ದಾಪುರ ಗ್ರಾಮದಲ್ಲಿನ ಸರ್ವೇ ನಂ 433 ಜಮೀನಿನ ಬಳಿಯ ಹಾದಿ ಹಾಗೂ ಕಾಲುವೆ ಜಾಗವನ್ನು ಸ್ಥಳೀಯ ಪ್ರಭಾವಿಗಳು ಅತಿಕ್ರಮಣ ಮಾಡಿಕೊಂಡು ಉಳುಮೆ ಮಾಡುತ್ತಿದ್ದಾರೆ. ಇದರಿಂದಾಗಿ ನಿತ್ಯ ಈ ಭಾಗದ ಬಡ ಹಾಗೂ ಸಣ್ಣ ರೈತರಿಗೆ ಕೃಷಿ ಚಟುವಟಿಕೆಗಳಿಗಾಗಿ ತಮ್ಮ ಜಮೀನುಗಳಿಗೆ ತೆರಳಲು ಸಮಸ್ಯೆಯಾಗುತ್ತಿದೆ.ಗ್ರಾಮ ನಕಾಶೆ ಕಂಡ ದಾರಿಗಳಲ್ಲಿ ಬಳಕೆದಾರ ರೈತರು ತಿರುಗಾಡಲು ಅವಕಾಶ ಇದ್ದಾಗಲೂ ಕೆಲವು ಭೂ ಮಾಲೀಕರು ಬಳಕೆದಾರ ರೈತರಿಗೆ ತಿರುಗಾಡಲು ಅಡ್ಡಿಪಡಿಸುತ್ತಿದ್ದಾರೆ.
ಇನ್ನು ಈ ಕುರಿತು ನೀರಾವರಿ ಇಲಾಖೆಯ ಎಇಇ ಅವರ ಗಮನಕ್ಕೆ ತಂದು ಕಾಲುವೆ ಹಾಗೂ ಹಾದಿ ಅತಿಕ್ರಮಣ ಮಾಡಿದವರ ವಿರುದ್ಧ ಕ್ರಮ ಜರುಗಿಸಿ ಜಮೀನುಗಳಿಗೆ ತೆರಳಲು ಹಾದಿ ಕಲ್ಪಿಸಲು ಮುಂದಾಗುವಂತೆ ಸ್ಥಳೀಯರು ಒತ್ತಾಯಿಸಿದರೂ ಪ್ರಯೋಜನವಾಗಿಲ್ಲ. ಈ ಕುರಿತು ವರ್ಷದ ಹಿಂದೆ ರೈತರು ಕಿಸಾನ್ ಜಾಗೃತಿ ವಿಕಾಸ್ ಸಂಘದಿಂದ ತಹಸೀಲ್ದಾರ್ ಗೆ ಮನವಿ ಸಲ್ಲಿಸಿದರೂ ಯಾವುದೇ ರೀತಿಯ ಪ್ರಯೋಜನವಾಗಿಲ್ಲ.
ಸರ್ಕಾರಿ ಆದೇಶ ಉಲ್ಲಂಘನೆ: ರೈತರು ವ್ಯವಸಾಯದ ಉದ್ದೇಶಗಳಿಗಾಗಿ ಬಳಸುವ ಕೃಷಿ ಸಲಕರಣೆಗಳನ್ನು ಸಾಗಿಸಲು ಅನ್ಯ ಬಹು ಮಾಲೀಕರ ಖಾಸಗಿ ಜಮೀನುಗಳಲ್ಲಿ ತಿರುಗಾಡಲು ದಾರಿ ಸಮಸ್ಯೆ ಇದೆ. ಬಳಕೆದಾರ ರೈತರಿಗೆ ತೊಂದರೆಯಾಗುತ್ತಿದೆ. ಈ ಕುರಿತು ಸ್ಥಳೀಯ ತಾಲೂಕು ಆಡಳಿತ ಎಚ್ಚೆತ್ತುಕೊಂಡು ಹಾದಿ ತೆರವುಗೊಳಿಸಿ ಸುಗಮ ದಾರಿ ಕಲ್ಪಿಸಲು ಕಂದಾಯ ಇಲಾಖೆ ಭೂ ಮಂಜೂರಾತಿ ಅಧೀನ ಕಾರ್ಯದರ್ಶಿ ಸಿ.ವಿಮಲಮ್ಮ 2023ರ ಅಕ್ಟೋಬರ್ 20ರಂದು ಆದೇಶ ಹೊರಡಿಸಿದ್ದರು. ಆದೇಶ ಹೊರಡಿಸಿ ಹಲವು ತಿಂಗಳು ಕಳೆದರೂ ಸಂಬಂಧಪಟ್ಟ ಅಧಿಕಾರಿಗಳು ಸೂಕ್ತ ಕ್ರಮ ಜರುಗಿಸದೇ ಸರ್ಕಾರದ ಆದೇಶ ಉಲ್ಲಂಘಿಸಿದ್ದಾರೆ.
ಹೋರಾಟದ ಎಚ್ಚರಿಕೆ: ಅಧಿಕಾರಿಗಳು ಎಚ್ಚೆತ್ತುಕೊಂಡು ಹಾದಿ, ಕಾಲುವೆ ಒತ್ತುವರಿ ಮಾಡಿಕೊಂಡವರ ವಿರುದ್ಧ ಕಠಿಣ ಕ್ರಮ ಜರುಗಿಸಿ ರೈತರಿಗೆ ಅನುಕೂಲತೆ ಕಲ್ಪಿಸಿಕೊಡಬೇಕು. ಇಲ್ಲದಿದ್ದಲ್ಲಿ ನೀರಾವರಿ ಇಲಾಖೆಯ ಮುಂಭಾಗದಲ್ಲಿ ಹೋರಾಟ ನಡೆಸಲಾಗುವುದು ಎಂದು ಕಿಸಾನ್ ಜಾಗೃತಿ ವಿಕಾಸ್ ಸಂಘದ ರಾಷ್ಟ್ರೀಯ ಅಧ್ಯಕ್ಷ ಯೋಗೇಂದರ ನಾಯ್ಡು ಎಚ್ಚರಿಕೆ ನೀಡಿದ್ದಾರೆ.