ಉಳ್ಳಾಲ: ಸಾರ್ವಜನಿಕ ದೂರುಗಳು ಹಾಗೂ ಅಪಘಾತಗಳ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ ಹಾಗೂ ಸ್ಥಳೀಯಾಡಳಿತದ ನೇತೃತ್ವದಲ್ಲಿ ತೊಕ್ಕೊಟ್ಟು ಮಂಗಳೂರು ವಿಶ್ವವಿದ್ಯಾನಿಲಯ ರಸ್ತೆಯ ತೊಕ್ಕೊಟ್ಟುವಿನಿಂದ ಅಸೈಗೋಳಿವರೆಗೆ ಹೆದ್ದಾರಿ ಬದಿಯ ಗೂಡಂಗಡಿಗಳ ತೆರವು ಕಾರ‍್ಯಾಚರಣೆ ಸೋಮವಾರ ಬೆಳಗ್ಗಿನಿಂದ ಸಂಜೆಯವರೆಗೂ ಎರಡು ಜೆಸಿಬಿಗಳು ಹಾಗೂ 10 ಮಂದಿ ಕೆಲಸಗಾರರ ಮೂಲಕ ನಡೆಯಿತು.

50 ಕ್ಕೂ ಹೆಚ್ಚು ಗೂಡಂಗಡಿಗಳ ತೆರವು ಕಾರ‍್ಯಾಚರಣೆ ನಡೆಯಿತು. ಸಾರ್ವಜನಿಕ ದೂರುಗಳ ಹಿನ್ನೆಲೆಯಲ್ಲಿ ಫೆ.2 ರಂದು ಹೆದ್ದಾರಿ ಸಮೀಪದಲ್ಲಿ ಹಾಕಿರುವ ಗೂಡಂಗಡಿಗಳು, ಬೀದಿ ಬದಿ ವ್ಯಾಪಾರದ ಶೆಡ್ ಗಳಿಗೆ ತೆರವುಗೊಳಿಸಲು ಸ್ಟಿಕರ್ ಅಂಟಿಸಲಾಗಿತ್ತು. ಫೆ.5 ರ ಒಳಗೆ ತೆರವು ನಡೆಸುವಂತೆ ಸೂಚನೆ ನೀಡಲಾಗಿತ್ತು. ಬಳಿಕ ಎರಡು ದಿನಗಳ ಕಾಲ ಹೆಚ್ಚು ದಿನ ಮುಂದೂಡಿ ಇಂದು ತೆರವು ಕಾರ‍್ಯಾಚರಣೆಯನ್ನು ಕೈಗೊಳ್ಳಲಾಗಿತ್ತು. ತೊಕ್ಕೊಟ್ಟು, ಚೆಂಬುಗುಡ್ಡೆ, ಪಂಡಿತ್ ಹೌಸ್, ಕುತ್ತಾರು, ಯೆನೆಪೋಯ, ನಿತ್ಯಾನಂದನಗರ, ಕೆ.ಎಸ್ ಹೆಗ್ಡೆ, ದೇರಳಕಟ್ಟೆ, ಕಣಚೂರು, ನಾಟೆಕಲ್ , ಅಸೈಗೋಳಿವರೆಗೂ ಹೆದ್ದಾರಿಯ ಎರಡೂ ಇಕ್ಕೆಲಗಳಲ್ಲಿ ಇರಿಸಲಾದ ಅಂಗಡಿಗಳ ತೆರವು ಕಾರ‍್ಯಾಚರಣೆಯನ್ನು ನಡೆಸಲಾಯಿತು. ಉಳ್ಳಾಲ ನಗರಸಭೆ ವ್ಯಾಪ್ತಿಗಳಲ್ಲಿ ಬಸ್ಸು ನಿಲ್ದಾಣದ 100 ಮೀ ಅಂತರದಲ್ಲಿ ಎಲ್ಲಿಯೂ ಮೀನು ಮಾರಾಟ ನಡೆಸದಂತೆಯೂ ಸೂಚಿಸಲಾಯಿತು. ಇದರಿಂದಾಗಿ ಮೀನು ಮಾರಾಟದ ನೀರನ್ನು ಅಲ್ಲೇ ಬಿಡುವುದರಿಂದ ಬಸ್ಸು ನಿಲ್ದಾಣಗಳಲ್ಲಿ ಪ್ರಯಾಣಿಕರಿಗೆ ನಿಲ್ಲಲು ಸಾಧ್ಯವಾಗುತ್ತಿಲ್ಲ. ಹಾಗಾಗಿ ಮುಂದಿನ ದಿನಗಳಲ್ಲಿಯೂ ಬಸ್ಸು ನಿಲ್ದಾಣದ ಸಮೀಪ ಅಥವಾ 100 ಮೀ ಅಂತರದಲ್ಲಿ ಮೀನು ಮಾರಾಟ ನಡೆಸುವುದು ಕಂಡುಬಂದಲ್ಲಿ ಸ್ಥಳೀಯಾಡಳಿತ ಸೂಕ್ತ ಕ್ರಮಕೈಗೊಳ್ಳುವ ಎಚ್ಚರಿಕೆಯನ್ನು ಸಾರ್ವಜನಿಕರಿಗೆ ನೀಡಿತು.ಕಾರ‍್ಯಾಚರಣೆಯಲ್ಲಿ ಲೋಕೋಪಯೋಗಿ ಇಲಾಖೆಯ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ಪ್ರೀತಮ್, ಸಹಾಯಕ ಇಂಜಿನಿಯರ್ ದಾಸ್ ಪ್ರಕಾಶ್, ಉಳ್ಳಾಲ ನಗರಸಭೆ ಆಯುಕ್ತರಾದ ಸಂತೋಷ್, ಆರೋಗ್ಯ ಅಧಿಕಾರಿ ನವೀನ್ ಕುಮಾರ್, ಬೆಳ್ಮ ಅಭಿವೃದ್ಧಿ ಅಧಿಕಾರಿ ರಮೇಶ್, ಉಳ್ಳಾಲ, ಕೊಣಾಜೆ ಮತ್ತು ಸಿಎಆರ್ ಸಿಬ್ಬಂದಿ ಭಾಗಿಯಾಗಿದ್ದರು.ಬೀದಿಬದಿ ಅನುಮತಿ ಪಡೆಯಿರಿ

ಬೀದಿ ಬದಿ ಅಂಗಡಿಗಳಿಗೆ ಸ್ಥಳೀಯಾಡಳಿತದಿಂದ ಲೈಸೆನ್ಸ್ ಪಡೆದುಕೊಳ್ಳುವುದು ಕಡ್ಡಾಯವಾಗಿದೆ. ತಳ್ಳುವ ಗಾಡಿಗಳಲ್ಲಿ ವ್ಯಾಪಾರ ನಡೆಸಲು ಯಾವುದೇ ಅಡ್ಡಿಯಿಲ್ಲ. ಆದರೆ ಸಂಬಂಧಿಸಿದ ಸ್ಥಳೀಯಾಡಳಿತ ಸಂಸ್ಥೆಯಿಂದ ಬೀದಿ ಬದಿ ವ್ಯಾಪಾರ ಲೈಸೆನ್ಸ್ ಪಡೆದುಕೊಂಡು ಮಾತ್ರ ವ್ಯಾಪಾರ ನಡೆಸಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸಾರ್ವಜನಿಕ ಸಂಚಾರಕ್ಕೆ ತೊಂದರೆಯಾಗದಂತೆ, ರಸ್ತೆ ಹಾಗೂ ಪಾದಚಾರಿ ಮಾರ್ಗಗಳನ್ನು ಅಕ್ರಮವಾಗಿ ಆಕ್ರಮಿಸದೇ ವ್ಯಾಪಾರ ನಡೆಸಬೇಕು. ನಿಯಮಾನುಸಾರ ಲೈಸೆನ್ಸ್ ಪಡೆದುಕೊಂಡು ಶಿಸ್ತುಬದ್ಧವಾಗಿ ವ್ಯಾಪಾರ ಮಾಡಿದಲ್ಲಿ ಯಾವುದೇ ಕ್ರಮಕ್ಕೆ ಒಳಪಡಿಸುವುದಿಲ್ಲ ಎಂದು ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.