ಲೋಕೋಪಯೋಗಿ ಇಲಾಖೆಯ ಪ್ರಮುಖ ರಸ್ತೆಗಳ ನಿರ್ವಹಣೆಗೆ ಕಳೆದ ವರ್ಷ ಪ್ರಾಯೋಗಿಕ ಜಾರಿ ಮಾಡಿದ್ದ ರಸ್ತೆ ನಿರ್ವಾಹಕ (ರೋಡ್‌ ಕಂಡಕ್ಟರ್‌) ಯಶಸ್ವಿಯಾಗಿದ್ದರೂ, ಈ ವರ್ಷ ಅದನ್ನು ತಡೆ ಹಿಡಿಯಲಾಗಿರುವುದರಿಂದ ರಸ್ತೆ ನಿರ್ವಹಣೆಗೆ ಮತ್ತೆ ಸಂಕಷ್ಟ ಎದುರಾಗಿದೆ.

ದಯಾನಂದ ಕಲ್ನಾರ್‌ಕನ್ನಡಪ್ರಭ ವಾರ್ತೆ ಮಂಗಳೂರುಲೋಕೋಪಯೋಗಿ ಇಲಾಖೆಯ ಪ್ರಮುಖ ರಸ್ತೆಗಳ ನಿರ್ವಹಣೆಗೆ ಕಳೆದ ವರ್ಷ ಪ್ರಾಯೋಗಿಕ ಜಾರಿ ಮಾಡಿದ್ದ ರಸ್ತೆ ನಿರ್ವಾಹಕ (ರೋಡ್‌ ಕಂಡಕ್ಟರ್‌) ಯಶಸ್ವಿಯಾಗಿದ್ದರೂ, ಈ ವರ್ಷ ಅದನ್ನು ತಡೆ ಹಿಡಿಯಲಾಗಿರುವುದರಿಂದ ರಸ್ತೆ ನಿರ್ವಹಣೆಗೆ ಮತ್ತೆ ಸಂಕಷ್ಟ ಎದುರಾಗಿದೆ.

ಏನೀದು ರಸ್ತೆ ನಿರ್ವಾಹಕ ಹುದ್ದೆ ?

ಲೋಕೋಪಯೋಗಿ ಇಲಾಖೆಯಲ್ಲಿ ರಸ್ತೆ ನಿರ್ವಾಹಕ ಎಂಬ ಹುದ್ದೆ ಈ ಹಿಂದೆಯೇ ಇತ್ತು, ಅದನ್ನು 10 ವರ್ಷಗಳ ಹಿಂದೆ ರದ್ದು ಮಾಡಲಾಗಿದೆ. ಆದರೆ 2024ರಲ್ಲಿ ಲೋಕೋಪಯೋಗಿ ಇಲಾಖೆಯ ರಸ್ತೆಗಳ ವಾರ್ಷಿಕ ನಿರ್ವಹಣೆಗೆ ರಸ್ತೆ ನಿರ್ವಾಹಕ (ಗ್ಯಾಂಗ್‌ಮನ್‌/ರಸ್ತೆ ಕಂಡಕ್ಟರ್‌) ನೇಮಕಾತಿಗೆ ಸೂಚಿಸಲಾಗಿತ್ತು. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯಲ್ಲಿ ಬರುವ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ವಾರ್ಷಿಕ ನಿರ್ವಹಣೆಗಾಗಿ ಪ್ರತಿ ವರ್ಷ ಅನುದಾನವನ್ನು ಒದಗಿಸಲಾಗುತ್ತದೆ. ಅದರನ್ವರ ಅವಶ್ಯಕವಾಗಿ ನಿರ್ವಹಣೆ ಮಾಡಬೇಕಾದ ರಸ್ತೆಗಳನ್ನು ಗುರುತಿಸಿ, ಯೋಜನೆ ರೂಪಿಸಿ ಗುತ್ತಿಗೆ ನೀಡುವ ಮೂಲಕ ಕಾಮಗಾರಿಗಳನ್ನು ಅನುಷ್ಠಾನ ಮಾಡಲಾಗುತ್ತಿತ್ತು. 2024ರಲ್ಲಿ ಈ ನಿರ್ವಹಣೆ ಅಂಶಗಳ ಜೊತೆಗೆ ಪ್ರತಿ ವಿಭಾಗದ ರಾಜ್ಯ ಹೆದ್ದಾರಿ ಮತ್ತು ಜಿಲ್ಲಾ ಮುಖ್ಯ ರಸ್ತೆಗಳ ಒಟ್ಟು ಜಾಲದ ಉದ್ದವನ್ನು ಆಧರಿಸಿ ಪ್ರತಿ 30 ಕಿ.ಮೀ.ಗೆ ಒಬ್ಬ ರಸ್ತೆ ನಿರ್ವಾಹಕ (ಗ್ಯಾಂಗ್‌ಮೆನ್‌) ನೇಮಕಾತಿಯನ್ನು ಸಹ ವಾರ್ಷಿಕ ಗುತ್ತಿಗೆಯಲ್ಲಿ ಸೇರ್ಪಡೆ ಮಾಡಲು ಸೂಚಿಸಲಾಗಿತ್ತು.

ರಸ್ತೆ ನಿರ್ವಾಹಕರು ವಾರ್ಷಿಕ ನಿರ್ವಹಿಸುವ ಕೆಲಸಗಳನ್ನು ಹೊರತುಪಡಿಸಿ ಇತರ ನಿರ್ವಹಣಾ ಕಾಮಗಾರಿಗಳನ್ನು ಕಾಲಕಾಲಕ್ಕೆ ಸಂಬಂಧಪಟ್ಟ ಎಂಜೀನಿಯರ್‌ಗಳ ನಿರ್ದೇಶನದಂತೆ ನಿರ್ವಹಿಸುವುದು, ರಸ್ತೆ ಭಾಗದಲ್ಲಿ ನಡೆಯುವ ನಿರ್ಮಾಣ ಮತ್ತು ರಸ್ತೆ ಅಗೆತ, ಒತ್ತುವರಿ, ರಸ್ತೆ ಬದಿ ಅನಧಿಕೃತ ಅಂಗಡಿಗಳ, ಅನಧಿಕೃತ ಚಟುವಟಿಕೆಗಳ ಬಗ್ಗೆ ನಿಗಾ ವಹಿಸಿ, ಕ್ರಮ ವಹಿಸುವುದು ಅಥವಾ ಅಧಿಕಾರಿಗಳ ಗಮನ ತರುವುದು, ಮಳೆಗಾಲದಲ್ಲಿ ಉಂಟಾಗುವ ಅಡಚಣೆಗಳ ಬಗ್ಗೆ ನಿಗಾ ವಹಿಸಿ ತೆರವು ಮಾಡುವುದು ಮುಂತಾದ ಕೆಲಸಗಳನ್ನು ಮಾಡುತ್ತಿದ್ದರು.

ಹಲವೆಡೆ ಯಶಸ್ವಿ:

ಕಳೆದ ವರ್ಷ ರಸ್ತೆ ನಿರ್ವಾಹಕ ನೇಮಕಾತಿ ಮಾಡಿ ದ.ಕ. ಜಿಲ್ಲೆ ಸೇರಿದಂತೆ ಹಲವೆಡೆ ಪ್ರಾಯೋಗಿಕವಾಗಿ ಕೆಲಸ ಮಾಡಿಸಲಾಗಿತ್ತು, ಬಹಳಷ್ಟು ಪರಿಣಾಮಕಾರಿಯಾಗಿ ಪ್ರಯೋಜನವಾಗಿ ಯಶಸ್ವಿಯಾಗಿತ್ತು. ದ.ಕ.ಜಿಲ್ಲೆಯಲ್ಲಿ ಒಟ್ಟು 50-60 ಗ್ಯಾಂಗ್‌ಮೆನ್‌ಗಳು ಕೆಲಸ ನಿರ್ವಹಿಸಿದ್ದರು. ಲೋಕೋಪಯೋಗಿ ಇಲಾಖೆಯಲ್ಲಿ ಎಂಜೀನಿಯರ್‌ ಹುದ್ದೆಗಳು ಖಾಲಿ ಇದ್ದು, ಇಂತಹ ಪರಿಸ್ಥಿತಿಯಲ್ಲಿ ಗ್ಯಾಂಗ್‌ಮೆನ್‌ಗಳು ಸಕಾಲದಲ್ಲಿ ನಿರ್ವಹಣಾ ಕೆಲಸ ಮಾಡಿ ಇಲಾಖೆಗೆ ನೆರವಾಗಿದ್ದರು. ಅಲ್ಲದೇ ಸ್ಥಳೀಯರೇ ಗ್ಯಾಂಗ್‌ಮೆನ್‌ಗಳಾಗಿ ಇದ್ದುದರಿಂದ ರಸ್ತೆಯಲ್ಲಿ ಉಂಟಾಗುತ್ತಿದ್ದ ಸಮಸ್ಯೆಗಳನ್ನು ಗಮನಿಸಿ ತಕ್ಷಣ ಮಾಹಿತಿ ನೀಡಿ ಪರಿಹರಿಸುವ ಕಾರ್ಯ ಮಾಡಲಾಗುತ್ತಿತ್ತು.

ನೇಮಕಾತಿಗೆ ತಡೆ ?

2024-25ರಲ್ಲಿ ಒಂದು ವರ್ಷದ ಅವಧಿಗೆ ಪ್ರಾಯೋಗಿಕ ನೇಮಕಾತಿ ಮಾಡಲಾಗಿತ್ತು. ಅದರಂತೆ ಗ್ಯಾಂಗ್‌ಮೆನ್‌ಗಳು ಕೆಲಸ ನಿರ್ವಹಿಸಿದ್ದರು. 2025-26ನೇ ಸಾಲಿನಲ್ಲೂ ಗ್ಯಾಂಗ್‌ಮೆನ್‌ ನೇಮಕಾತಿಗೆ ಟೆಂಡರ್‌ ಕರೆಯಲಾಗಿತ್ತು ಟೆಂಡರ್‌ ಪ್ರಕ್ರಿಯೆ ಕೂಡ ನಡೆಸಲಾಗಿತ್ತು. ಆದರೆ ಕೊನೆ ಕ್ಷಣದಲ್ಲಿ ಇದಕ್ಕೆ ಸರಕಾರದ ಹಂತದಲ್ಲಿ ತಡೆ ಹಿಡಿಯಲಾಗಿದೆ. ಮಾಹಿತಿಯ ಪ್ರಕಾರ ಕೆಲವೆಡೆ ಗ್ಯಾಂಗ್‌ಮೆನ್‌ಗಳು ಸಮರ್ಪಕ ಕೆಲಸ ನಿರ್ವಹಿಸದೇ ಇರುವುದು ಲೋಕೋಪಯೋಗಿ ಸಚಿವರ ಗಮನಕ್ಕೆ ಬಂದಿದ್ದು, ಸಚಿವರು ಈ ವರ್ಷದ ನೇಮಕಾತಿಗೆ ತಡೆ ನೀಡಿದ್ದಾರೆ ಎಂದು ತಿಳಿದುಬಂದಿದೆ.

ಸಂಕಷ್ಟ ಭೀತಿ !

ಲೋಕೋಪಯೋಗಿ ಇಲಾಖೆಯಲ್ಲಿ ಮೊದಲೇ ಎಂಜೀನಿಯರ್‌, ಸಿಬ್ಬಂದಿ ಕೊರತೆಯಿದ್ದು, ಗ್ಯಾಂಗ್‌ಮೆನ್‌ಗಳು ರಸ್ತೆ ಹೊಂಡ-ಗುಂಡಿ, ಚರಂಡಿ ಬ್ಲಾಕ್‌, ರಸ್ತೆ ಬ್ಲಾಕ್‌ ಮುಂತಾದ ಸಮಸ್ಯೆಗಳನ್ನು ಕಂಡುಕೊಂಡು ದುರಸ್ತಿ ಕಾರ್ಯಾಚರಣೆಗೆ ನೆರವಿಗೆ ಇಲಾಖೆಗೆ ನೆರವಾಗಿದ್ದರು. ಆದರೆ ಗ್ಯಾಂಗ್‌ಮೆನ್‌ ಇಲ್ಲದೇ ಇರುವುದರಿಂದ ರಸ್ತೆ ನಿರ್ವಹಣಾ ಗುತ್ತಿಗೆ ವಹಿಸಿದವರಿಗೆ ದುರಸ್ತಿಗೆ ಸೂಚಿಸಲು ಎಂಜೀನಿಯರ್‌ಗಳೇ ನೇರವಾಗಿ ತಿಳಿಸಬೇಕಾಗಿದ್ದು, ಇದು ಸಕಾದಲ್ಲಿ ಆಗಲು ಸಿಬ್ಬಂದಿ ಕೊರೆತಿಂದ ಅಸಾಧ್ಯವಾಗಿರುವುದರಿಂದ ಸಂಕಷ್ಟ ಭೀತಿ ಎದುರಾಗಿದೆ. ದ.ಕ. ಸೇರಿದಂತೆ ಮಲೆನಾಡಿನಲ್ಲಿ ರಸ್ತೆ ಸಮಸ್ಯೆಗಳು ಆಗಾಗ ಉಂಟಾಗುತ್ತಿರುವುದರಿಂದ ಇಲ್ಲಿಗೆ ಗ್ಯಾಂಗ್‌ಮೆನ್‌ ಅವಶ್ಯಕವಾಗಿದೆ.

ಕಳೆದ ವರ್ಷ ರೋಡ್‌ ಕಂಡಕ್ಟರ್‌ ಮಾಡಲಾಗಿತ್ತು, ಈ ವರ್ಷ ರೋಡ್‌ ಕಂಡಕ್ಟರ್‌ ತೆಗೆದುಕೊಳ್ಳದಂತೆ ಸರ್ಕಾರದ ಹಂತದಲ್ಲಿ ಸೂಚಿಸಲಾಗಿತ್ತು. ಆದ್ದರಿಂದ ನಾವು ರೋಡ್‌ ಕಂಡಕ್ಟರ್‌ ತೆಗೆದುಕೊಂಡಿಲ್ಲ. ರಸ್ತೆ ನಿರ್ವಹಣಾ ಗುತ್ತಿಗೆ ವಹಿಸಿದ ಸಂಸ್ಥೆಯವರೇ ರಸ್ತೆ ನಿರ್ವಹಣಾ ಕೆಲಸ ಮಾಡಲಿದ್ದಾರೆ.

- ರಾಘವೇಂದ್ರ ಇಇ ಮಂಗಳೂರು, ಲೋಕೋಪಯೋಗಿ ಇಲಾಖೆ