ಕನ್ನಡಪ್ರಭ ವಾರ್ತೆ ಪಾಂಡವಪುರ

ಕಂದಾಯ ಇಲಾಖೆಯಿಂದ ಸಾಗುವಳಿಯಲ್ಲಿ ಮಂಜೂರಾಗಿರುವ ಜಮೀನಿನ ಮೇಲೆ ರೈತ ಸಂಘದ ಮುಖಂಡರೊಬ್ಬರ ಅನುಕೂಲಕ್ಕಾಗಿ ಅಧಿಕಾರ ದುರ್ಬಳಕೆ ಮಾಡಿಕೊಂಡು ತಾಲೂಕು ಆಡಳಿತವೇ ರಸ್ತೆ ಮಾಡಲು ಮುಂದಾಗಿದೆ ಎಂದು ಆರೋಪಿಸಿ ಜಮೀನಿನ ಮಾಲೀಕರಾದ ಗೌರಮ್ಮ, ಪುತ್ರ ಅಂಕೇಗೌಡ ಎಂಬುವರು ಆರೋಪಿಸಿದರು.

ಪಟ್ಟಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ, ತಾಲೂಕಿನ ಕನಗನಮರಡಿ ಗ್ರಾಮದ ಸರ್ವೇ 94ರಲ್ಲಿ ಇವರು 25 ಗುಂಟೆ ಜಮೀನನ್ನು ಗ್ರಾಮದ ಎಸ್.ನಿಂಗೇಗೌಡ ಎಂಬ ರೈತರಿಗೆ 1984ರಲ್ಲಿ ಸಾಗುವಳಿಯಲ್ಲಿ ಮಂಜೂರಾಗಿದೆ. ಅದಾದ ಬಳಿಕ ನಿಂಗೇಗೌಡ ಎಂಬ ರೈತ ಅದೇ ಗ್ರಾಮದ ಗೌರಮ್ಮ ರಾಮೇಗೌಡ ಎಂಬುವರಿಗೆ 5 ಗುಂಟೆ ಹಾಗೂ ಪದ್ಮ ಎಂಬುವರಿಗೆ 20 ಗುಂಟೆ ಜಮೀನನ್ನು 2004ರಲ್ಲಿ ಮಾರಾಟ ಮಾಡಿದ್ದಾರೆ. ಈ ಜಮೀನು ದುರಸ್ತು ಆಗಿಲ್ಲ ಎಂಬ ಕಾರಣಕ್ಕೆ ಸರ್ವೇಯರ್ ಭಾಸ್ಕರ್ ಎಂಬುವರು ರೈತ ಸಂಘದ ಮುಖಂಡ ಬಲರಾಮೇಗೌಡ ಎಂಬುವರಿಗೆ ಅನುಕೂಲ ಮಾಡಿಕೊಡಲು ಗೋಮಾಳ ಎಂಬುದಾಗಿ ಅಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ ನಾವು ಖರೀದಿಸಿರುವ ಜಮೀನಿನ ಮೇಲೆ ರಸ್ತೆ ಮಾಡಲು ಹೊರಟಿದ್ದಾರೆ ಎಂದು ಕಿಡಿಕಾರಿದರು.

ನಮ್ಮ ಜಮೀನಿನ ಪಕ್ಕದಲ್ಲಿ ಇರುವ ರೈತ ಸಂಘ ಮುಖಂಡ ಬಲರಾಮೇಗೌಡ ಎಂಬುವರಿಗೆ ರಸ್ತೆ ಇಲ್ಲ. ಹಾಗಾಗಿ ಸರ್ವೇಯರ್ ಭಾಸ್ಕರ್ ಎಂಬುವರು ಮೂಲಕ ಮೇಲಾಧಿಕಾರಿಗಳಿಗೆ ಸುಳ್ಳು ಮಾಹಿತಿ ನೀಡಿ, ಜೊತಗೆ ಅಧಿಕಾರಿಗಳಿ ಒತ್ತಡ ತಂದು ಪೊಲೀಸ್ ಭದ್ರತೆಯಲ್ಲಿ ದಬ್ಬಾಳಿಕೆಯ ಮೇಲೆ ರಸ್ತೆ ಮಾಡಿಸಲು ಹೊರಟಿದ್ದಾರೆ. ಜಮೀನಿನಲ್ಲಿ ರಸ್ತೆ, ಬಂಡಿದಾರಿ, ಕಾಲುದಾರಿ ಎಂಬುದಾಗಿ ಇಲ್ಲದಿದ್ದರೂ ಸಹ ಅಧಿಕಾರಿಗಳು ರಸ್ತೆ ಮಾಡಲು ಹೊರಟಿದ್ದಾರೆ, ಈ ಬಗ್ಗೆ ತಹಸೀಲ್ದಾರ್ ಅವರಿಗೆ ಮನವಿ ನೀಡಿದರೂ ಸ್ಪಂದನೆ ನೀಡುತ್ತಿಲ್ಲ. ಬಡವರ ಪರ ನಿಲ್ಲಬೇಕಾದ ಅಧಿಕಾರಿಗಳು ಒತ್ತಡಕ್ಕೆ ಒಳಗಾಗುತ್ತಿದ್ದಾರೆ ಎಂದು ಆರೋಪಿಸಿದರು.

ನಾವು ಯಾವುದೇ ಕಾರಣಕ್ಕೂ ನಮ್ಮ ಜಮೀನಿನಲ್ಲಿ ರಸ್ತೆ ಮಾಡಲು ಬಿಡುವುದಿಲ್ಲ, ನಾವು ಹಣಕೊಟ್ಟು ಖರೀದಿಸಿರುವ ಭೂಮಿ ಇದಾಗಿದೆ. ನಮಗೆ ಈ ಭೂಮಿ ಬಿಟ್ಟರೆ ಬೇರೆಯಾವುದೆ ಭೂಮಿ ಇರೋದಿಲ್ಲ. ಸಂಬಂಧಿಸಿದ ಜಿಲ್ಲಾಧಿಕಾರಿಗಳು ಈ ಬಗ್ಗೆ ಮಧ್ಯೆ ಪ್ರವೇಶ ಮಾಡಿ ಪರಿಶೀಲಿಸಿ ನ್ಯಾಯ ದೊರಕಿಸಿಕೊಡಬೇಕು, ಇಲ್ಲವಾದರೆ ಸಾಮೂಹಿಕ ಆತ್ಮಹತ್ಯೆ ಮಾಡಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.


ಗೋಷ್ಠಿಯಲ್ಲಿ ಪದ್ಮ, ಮುಖಂಡ ಸಿ.ಸ್ವಾಮೀಗೌಡ, ಜಯರಾಮು ಇದ್ದರು.