ಸಾರಾಂಶ
- ಸಚಿವರ ಹೆಸರು ಹೇಳಿ ಕೆಲ ಕಾಂಗ್ರೆಸ್ಸಿಗರಿಂದ ದೌರ್ಜನ್ಯ: ಸ್ಥಳೀಯರ ಆರೋಪ, ಅಳಲು - - - ಕನ್ನಡಪ್ರಭ ವಾರ್ತೆ, ದಾವಣಗೆರೆ
ರಸ್ತೆ ಅಭಿವೃದ್ಧಿಗಾಗಿ ಒತ್ತುವರಿ ತೆರವುಗೊಳಿಸಲು ದಾವಣಗೆರೆ ಮಹಾನಗರ ಪಾಲಿಕೆಯ 32ನೇ ವಾರ್ಡ್‌ನಲ್ಲಿ ಕಾಂಗ್ರೆಸ್ ಪಕ್ಷದ ಕೆಲವು ಕಾರ್ಯಕರ್ತರು ಅಡ್ಡಿಪಡಿಸುತ್ತಿದ್ದರೆ, ಮತ್ತೊಂದು ಕಡೆ ಖಾಸಗಿ ಜಾಗದ ಸೆಟ್ ಬ್ಯಾಕ್ ಒಳಗೆ ಶೌಚಾಲಯ, ಸ್ನಾನಗೃಹ ನಿರ್ಮಿಸಿಕೊಳ್ಳುವ ಮೂಲಕ ಅಭಿವೃದ್ಧಿ ಕಾರ್ಯಕ್ಕೆ ಅಡ್ಡಿ ಮಾಡಿದ್ದಾರೆ ಎಂದು ಸ್ಥಳೀಯ ನಿವಾಸಿಗಳು ಆರೋಪಿಸಿದ್ದಾರೆ.ನಗರದ ಪಾಲಿಕೆ 32ನೇ ವಾರ್ಡ್‌ನ ಆಂಜನೇಯ ದೇವಸ್ಥಾನ ರಸ್ತೆಯ ಎರಡೂ ಬದಿ ಫೇವರ್ ಅಳವಡಿಸುವ ಕಾರ್ಯಕ್ಕೆ ವಾರ್ಡ್ ಸದಸ್ಯೆ, ಮಾಜಿ ಮೇಯರ್ ಡಿ.ಎಸ್. ಉಮಾ ಪ್ರಕಾಶ್ ಕ್ರಮ ಕೈಗೊಂಡಿದ್ದಾರೆ. ರಸ್ತೆಯ ಒಂದು ಬದಿ ಫೇವರ್ಸ್ ಅಳವಡಿಕೆ ಆಗಿದೆ. ಮತ್ತೊಂದು ಭಾಗದಲ್ಲಿ ಸುಮಾರು 8-10 ಅಡಿ ರಸ್ತೆ ಒತ್ತುವರಿ ಮಾಡಿ, ಕಬ್ಬಿಣದ ಸರಳು, ತಗಡಿನ ಶೀಟು ಕಾರ್ ಪಾರ್ಕಿಂಗ್ ಮಾಡಿಕೊಂಡು, ಈಗ ಅಭಿವೃದ್ಧಿ ಕಾರ್ಯಕ್ಕೆ ಕಾಂಗ್ರೆಸ್ ಪಕ್ಷದ ಕೆಲವರು ಅಡ್ಡಿ ಮಾಡುತ್ತಿರುವುದು ಎಷ್ಟು ಸರಿ ಎಂದು ಸ್ಥಳೀಯರು ಪ್ರಶ್ನಿಸಿದ್ದಾರೆ.
ಒತ್ತುವರಿ ತೆರವಿಗೆ ಮುಂದಾಗಿದ್ದ ಪಾಲಿಕೆ ಸಿಬ್ಬಂದಿಗೆ ಆಡಳಿತ ಪಕ್ಷದ ಕಾರ್ಯಕರ್ತರು ಅಡ್ಡಿಪಡಿಸಿ, ನಿಂದಿಸಿ ಕಳಿಸುತ್ತಿದ್ದಾರೆ. ತಮಗೆ ಸಚಿವರು ಗೊತ್ತು, ಸಂಸದರು ಗೊತ್ತು ಎಂಬುದಾಗಿ ಸಾರ್ವಜನಿಕವಾಗಿಯೇ ಮಹಿಳಾ ಎಂಜಿನಿಯರ್‌ಗಳಿಗೆ ನಿಂದಿಸಿ, ಅಡ್ಡಿಪಡಿಸುತ್ತಿದ್ದಾರೆ. ಅಷ್ಟೇ ಅಲ್ಲ, ಸಚಿವರ ಪಿಎ ಎಂದು ಹೇಳಿ, ಯಾರಿಂದಲೋ ಮಹಿಳಾ ಅಧಿಕಾರಿಗಳಿಗೆ ಕರೆ ಮಾಡಿಸಿ, ಅಭಿವೃದ್ಧಿ ಕಾರ್ಯಕ್ಕೆ ಸ್ವತಃ ಆಡಳಿತ ಪಕ್ಷದವರೇ ಅಡ್ಡಿಪಡಿಸಿ, ಸಾರ್ವಜನಿಕ ಕೆಲಸ, ಕಾರ್ಯಕ್ಕೆ ಅಡ್ಡಗಾಲು ಹಾಕುತ್ತಿದ್ದಾರೆ ಎಂದು ದೂರಿದ್ದಾರೆ.ಆಂಜನೇಯ ದೇವಸ್ಥಾನ ಮುಂಭಾಗದ ಓಣಿಗಳಲ್ಲಿ ಬಡವರು 15-22 ಅಡಿ ನಿವೇಶನಗಳಲ್ಲಿ ಮನೆ ಕಟ್ಟಿಕೊಂಡಿದ್ದಾರೆ. ಹಿಂಭಾಗದಲ್ಲಿ 2 ಅಡಿ ಸೆಟ್ ಬ್ಯಾಕ್ ಬಿಟ್ಟುಕೊಂಡಿದ್ದಾರೆ. ಅದರಲ್ಲಿ ಶೌಚಾಲಯ, ಸ್ನಾನಗೃಹ ನಿರ್ಮಿಸಿದ್ದಾರೆ. ಈ ಬಡವರು ಕಟ್ಟಿಕೊಂಡ ಶೌಲಾಯಗಳಿಂದ ತೊಂದರೆಯಾಗಿದ್ದರೆ ನೋಟಿಸ್ ನೀಡಿ, ಸರಿಪಡಿಸಲು ಕಾಲಾವಕಾಶ ನೀಡಬೇಕಾಗಿತ್ತು. ಆದರೆ, ಕಾಂಗ್ರೆಸ್‌ನ ಕೆಲ ಕಾರ್ಯಕರ್ತರ ಒತ್ತಡಕ್ಕೆ ಮಣಿದು, ಪಾಲಿಕೆ ಸಿಬ್ಬಂದಿ ಸ್ಥಳೀಯ ಪಾಲಿಕೆ ಸದಸ್ಯೆ ಉಮಾ ಪ್ರಕಾಶರ ಗಮನಕ್ಕೂ ತಾರದೇ, ಬಡವರ ಮನೆ ಹಿಂಭಾಗದ ಸೆಟ್ ಬ್ಯಾಕ್‌ನ ಶೌಚಾಲಯ, ಸ್ನಾನಗೃಹಗಳನ್ನು ಒಡೆದು ಹಾಕಿದ್ದಾರೆ ಎಂದು ಆರೋಪಿಸಿದ್ದಾರೆ.
ಸ್ಥಳೀಯ ಯುವಕನೊಬ್ಬ ಪಾಲಿಕೆ ಸಿಬ್ಬಂದಿಗೆ ಈ ಬಗ್ಗೆ ಪ್ರಶ್ನಿಸಿದರೆ, ಕಾಂಗ್ರೆಸ್ ಕಾರ್ಯಕರ್ತರ ಒತ್ತಡಕ್ಕೆ ಮೇಲಾಧಿಕಾರಿಗಳು ತಮಗೆ ಈ ಕೆಲಸಕ್ಕೆ ಕಳಿಸಿದ್ದಾರೆ. ಅದಕ್ಕಾಗಿ ತೆರವುಗೊಳಿಸುತ್ತಿದ್ದೇವೆ ಎಂಬುದಾಗಿ ಹೇಳುತ್ತಾರೆ. ಸಾರ್ವಜನಿಕರಿಗೆ ತೀವ್ರ ತೊಂದರೆ ನೀಡುತ್ತಿದ್ದಾರೆ. ಇಂಥವರ ಬಗ್ಗೆ ಜಿಲ್ಲಾ ಸಚಿವರು ಗಮನಹರಿಸಿ, ಬಡವರು, ಕೂಲಿ ಕಾರ್ಮಿಕರು, ಶ್ರಮಿಕರು, ಸಾರ್ವಜನಿಕರಿಗೆ ಆಗುತ್ತಿರುವ ತೊಂದರೆ ತಪ್ಪಿಸಬೇಕು ಎಂದು ಒತ್ತಾಯಿಸಿದ್ದಾರೆ.- - -
ಬಾಕ್ಸ್-1 * ಕೆಲವರಿಂದ ಅಡ್ಡಿ ನಿಜ: ಉಮಾ ಪ್ರಕಾಶ ಪಾಲಿಕೆಯ 32ನೇ ವಾರ್ಡ್‌ನ ಆಂಜನೇಯ ದೇವಸ್ಥಾನದ ರಥ ಬೀದಿ ಅಭಿವೃದ್ಧಿಪಡಿಸಲು ರಸ್ತೆ ಬದಿಗೆ ಫೇವರ್ ಅಳವಡಿಸುವ ಜಾಗದಲ್ಲಿ ಒತ್ತುವರಿ ತೆರವಿಗೆ ಕಾಂಗ್ರೆಸ್ಸಿನ ಕೆಲ ಕಾರ್ಯಕರ್ತರು ಅಡ್ಡಿಪಡಿಸಿದ್ದು ನಿಜ. ಪಾಲಿಕೆ ಆಯುಕ್ತರು, ಜಿಲ್ಲಾ ಉಸ್ತುವಾರಿ ಸಚಿವರ ಗಮನಕ್ಕೆ ತರಲಾಗಿದೆ ಎಂದು ಪಾಲಿಕೆ ಸದಸ್ಯೆ, ಮಾಜಿ ಮೇಯರ್ ಡಿ.ಎಸ್.ಉಮಾ ಪ್ರಕಾಶ ತಿಳಿಸಿದ್ದಾರೆ.ಸ್ವಹಿತಾಸಕ್ತಿಗಾಗಿ ಕೆಲವರು ಅಭಿವೃದ್ಧಿಗೆ ಅಡ್ಡಿಪಡಿಸುತ್ತಿರುವುದನ್ನು ಸಚಿವರು ತಪ್ಪಿಸಬೇಕು. ರಸ್ತೆಯಲ್ಲೇ ಕೆಲವರು ನೀರಿನ ಸಂಪು ಸಹ ನಿರ್ಮಿಸಿದ್ದಾರೆ. ಅಂತಹ ತೊಟ್ಟಿಗಳನ್ನು ತೆರವುಗೊಳಿಸುವಂತೆ ಒತ್ತಡವಿದೆ. ಕೆಲವರು ತಮಗೂ ರಸ್ತೆಯಲ್ಲೇ ಸಂಪು ನಿರ್ಮಿಸಲು ಅವಕಾಶ ನೀಡುವಂತೆ ಕೇಳುತ್ತಾರೆ. ಅಕ್ರಮ ಸಂಪು, ರಸ್ತೆ ಒತ್ತುವರಿ ತೆರವಿಗೆ ಆಯುಕ್ತರಿಗೂ ಮನವಿ ಮಾಡಿದ್ದೇನೆ. ವಾರ್ಡ್‌ನಲ್ಲಿ ಹೊಸ ಕಟ್ಟಡ ಕಟ್ಟುವವರಿಗೆ ರಸ್ತೆಗೆ ಚಾಚಿಕೊಂಡು ರ್ಯಾಂಪ್ ನಿರ್ಮಿಸುವುದನ್ನು ತಡೆಯಲು ಪಾಲಿಕೆ ಸಿಬ್ಬಂದಿಗೆ ನಿರ್ದೇಶನ ನೀಡುವಂತೆಯೂ ಆಗ್ರಹಿಸಿದ್ದೇನೆ ಎಂದಿದ್ದಾರೆ.
ಬಡವರ ಶೌಚಾಲಯ ತೆರವಿಗೆ ಮುನ್ನ ನೋಟೀಸ್ ನೀಡಿ, ನೂನ್ಯತೆ ಸರಿಪಡಿಸಲು ಹೇಳಬೇಕಿತ್ತು. ಸರಿಪಡಿಸದಿದ್ದರೆ ಪಾಲಿಕೆ ಕ್ರಮ ಜರುಗಿಸಬೇಕಿತ್ತು ಎಂದೂ ತಿಳಿಸಿದ್ದಾರೆ.- - - -13ಕೆಡಿವಿಜಿ12: ಡಿ.ಎಸ್.ಉಮಾ ಪ್ರಕಾಶ
-13ಕೆಡಿವಿಜಿ13: ಆಂಜನೇಯ ದೇವಸ್ಥಾನ ಎದುರಿನ ರಸ್ತೆಯಲ್ಲಿ ಬಾಕಿ ಉಳಿದಿರುವ ಫೇವರ್ಸ್ ಅಳವಡಿಕೆ ಕಾಮಗಾರಿ. -13ಕೆಡಿವಿಜಿ14: 32ನೇ ವಾರ್ಡ್‌ನಲ್ಲಿ ಸೆಟ್ ಬ್ಯಾಕ್ ಜಾಗದಲ್ಲಿ ನಿರ್ಮಿಸಿದ್ದ ಅಕ್ರಮ ಶೌಚಾಲಯ, ಸ್ನಾನಗೃಹಗಳನ್ನು ಪಾಲಿಕೆ ತೆರವುಗೊಳಿಸಿರುವುದು.