ಸಾರಾಂಶ
ಸುಮಾರು ೫ ಕೋಟಿ ರು. ವೆಚ್ಚದಲ್ಲಿ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.
ಕನ್ನಡಪ್ರಭ ವಾರ್ತೆ ಸಾಗರ
ಸುಮಾರು ೫ ಕೋಟಿ ರು. ವೆಚ್ಚದಲ್ಲಿ ರಾಜ್ಯ ಹಾಗೂ ಜಿಲ್ಲಾ ಹೆದ್ದಾರಿ ಅಭಿವೃದ್ಧಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುತ್ತದೆ ಎಂದು ಶಾಸಕ ಗೋಪಾಲಕೃಷ್ಣ ಬೇಳೂರು ತಿಳಿಸಿದರು.ಪಟ್ಟಣದ ಪ್ರವಾಸಿ ಮಂದಿರದ ಸಭಾಭವನದಲ್ಲಿ ಗುರುವಾರ ಲೋಕೋಪಯೋಗಿ ಇಲಾಖೆ ಪ್ರಗತಿ ಪರಿಶೀಲನೆ ನಡೆಸಿ ಮಾತನಾಡಿ, ೨೫೬.೫೫ ಲಕ್ಷ ರು. ವೆಚ್ಚದಲ್ಲಿ ೨೨೮.೧೩ ಕಿ.ಮೀ. ರಾಜ್ಯ ಉದ್ದಾರಿ, ೨೩೭ ಲಕ್ಷ ರು. ವೆಚ್ಚದಲ್ಲಿ ೨೮೫.೩೧ ಕಿ.ಮೀ. ಜಿಲ್ಲಾ ರಸ್ತೆ ಅಭಿವೃದ್ಧಿ ಮಾಡಲಾಗುತ್ತಿದ್ದು, ಟೆಂಡರ್ ಪ್ರಕ್ರಿಯೆ ಮುಗಿದಿದೆ. ದಸರಾ ನಂತರ ಕಾಮಗಾರಿ ಪ್ರಾರಂಭ ಮಾಡಲಾಗುತ್ತದೆ ಎಂದರು.
ಈ ಸಾಲಿನಲ್ಲಿ ಸುರಿದ ವಿಪರೀತ ಮಳೆಯಿಂದಾಗಿ ದೊಡ್ಡಮಟ್ಟದಲ್ಲಿ ರಸ್ತೆ ಹಾಳಾಗಿದೆ. ರಸ್ತೆಗಳ ವಾರ್ಷಿಕ ನಿರ್ವಹಣೆಗೆ ಸರ್ಕಾರದಿಂದ ಅನುದಾನ ಬಿಡುಗಡೆಯಾಗಿದೆ. ಸಾಗರ-ಹೊಸನಗರ ವಿಧಾನಸಭಾ ಕ್ಷೇತ್ರವ್ಯಾಪ್ತಿಯಲ್ಲಿ ಜಂಗಲ್ ಕಟ್ಟಿಂಗ್, ರಸ್ತೆ ನಾಮಫಲಕ, ಅಪಘಾತ ನಡೆಯುವ ರಸ್ತೆಗಳಿಗೆ ಎಚ್ಚರಿಕೆ ಫಲಕ ಹಾಕಲು ಸೂಚನೆ ನೀಡಿದೆ. ಪ್ರಗತಿಪಥ ಯೋಜನೆಯಡಿ ೨೦ ಕೋಟಿ ರು. ವೆಚ್ಚದಲ್ಲಿ ರಸ್ತೆ ನಿರ್ಮಿಸಲಾಗುತ್ತಿದ್ದು, ತಾಪಂ ಕಟ್ಟಡ ನಿರ್ಮಾಣಕ್ಕೆ ೧೬ ಕೋಟಿ ರು. ಪ್ರಸ್ತಾವನೆ ಸಲ್ಲಿಸಿದೆ. ಇದರ ಜೊತೆಗೆ ಸುಮಾರು ೭೫ ಕೋಟಿ ರು. ಪಿಡಬ್ಲೂಡಿ ಇನ್ನಿತರೆ ಇಲಾಖೆಯಿಂದ, ಸಣ್ಣ ನೀರಾವರಿ ನಿಗಮದಿಂದ ೬೦ ಕೋಟಿ ರು. ಹಣ ಮಂಜೂರಾಗಿದೆ ಎಂದು ಮಾಹಿತಿ ನೀಡಿದರು.ಸಾಗರದಿಂದ ಸೊರಬ ತಾಲೂಕಿನ ಗಡಿ, ಹೊಸನಗರದಿಂದ ಬಟ್ಟೆಮಲ್ಲಪ್ಪ, ಹೊಸನಗರ-ರಿಪ್ಪನಪೇಟೆ-ಶಿವಮೊಗ್ಗ ಗಡಿವರೆಗಿನ ರಸ್ತೆ ಪುನರ್ ನಿರ್ಮಾಣಕ್ಕೆ ಅನುದಾನ ಮಂಜೂರಾಗಿದ್ದು, ಶೀಘ್ರ ಕಾಮಗಾರಿ ಪ್ರಾರಂಭವಾಗಲಿದೆ. ಗುಣಮಟ್ಟದ ಕಾಮಗಾರಿಗೆ ಅಧಿಕಾರಿಗಳು ಗಮನ ಹರಿಸಬೇಕು. ಗುತ್ತಿಗೆದಾರರು ಕಳಪೆ ಕಾಮಗಾರಿ ಮಾಡಿದರೆ ಅವರನ್ನು ಬ್ಲಾಕ್ ಲೀಸ್ಟ್‌ಗೆ ಸೇರಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಅಭಿಯಂತರ ಅನಿಲಕುಮಾರ್, ಶಾಸಕರ ವಿಶೇಷ ಕರ್ತವ್ಯಾಧಿಕಾರಿ ಟ.ಪಿ.ರಮೇಶ್, ಶ್ರೀನಿವಾಸ್ ಇತರರಿದ್ದರು.