ರಸ್ತೆ ವಿವಾದ: ಸರ್ಕಾರಿ ಬಸ್‌ ಡಿಪೋ ಕಾಮಗಾರಿಗೆ ಹಿನ್ನಡೆ

| Published : May 23 2024, 01:04 AM IST

ರಸ್ತೆ ವಿವಾದ: ಸರ್ಕಾರಿ ಬಸ್‌ ಡಿಪೋ ಕಾಮಗಾರಿಗೆ ಹಿನ್ನಡೆ
Share this Article
  • FB
  • TW
  • Linkdin
  • Email

ಸಾರಾಂಶ

ಚನ್ನಗಿರಿ ಪಟ್ಟಣದ ಹೊರವಲಯದ ಅಜ್ಜಿಹಳ್ಳಿ ಬಳಿ ₹8 ಕೋಟಿ ವೆಚ್ಚದಲ್ಲಿ ನಿರ್ಮಾಣಗೊಂಡಿರುವ ಕೆಎಸ್ಆರ್‌ಟಿಸಿ ಡಿಪೋ

ಕನ್ನಡಪ್ರಭ ವಾರ್ತೆ ಚನ್ನಗಿರಿ

ಪಟ್ಟಣದ ಹೊರವಲಯದ ಅಜ್ಜಿಹಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ರಾಜ್ಯ ರಸ್ತೆ ಸಾರಿಗೆ ನಿಗಮದಿಂದ ಡಿಪೋ ನಿರ್ಮಾಣವಾಗಿದೆ. ಬಸ್‌ಗಳಿಗೆ ಇಂಧನ ಹಾಕುವ ಡಿಸೇಲ್ ಬಂಕ್ ಕಾಮಗಾರಿ ಕೆಲಸ ಮುಗಿದರೆ ಕೆಎಸ್ಆರ್‌ಟಿಸಿ ಡಿಪೋ ನಿರ್ಮಾಣ ಕಾಮಗಾರಿ ಸಂಪೂರ್ಣ ಮುಗಿದಂತಾಗಲಿದೆ. ಆದರೆ, ಡಿಪೋ ಮಾತ್ರ ಕಾರ್ಯಾರಂಭ ಆಗದಿರುವ ಸೂಚನೆಗಳು ಕಾಣುತ್ತಿವೆ.

ಕೆಎಸ್‌ಆರ್‌ಟಿಸಿ ಅಭಿಯಂತರ ನಾಗರಾಜಪ್ಪ ಹೇಳುವಂತೆ, ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳಿಗೆ ಸಂಬಂಧಪಟ್ಟಂತೆ ಕೆಲವು ವಿವಾದಗಳಿವೆ. ಇದು ಬಗೆ ಹರಿಯಬೇಕಾಗಿದೆ ಮತ್ತು ನಿರ್ಮಾಣ ಆಗಿರುವ ಡಿಪೋಗೆ ಸಂಬಂಧಪಟ್ಟ ಜಾಗದಲ್ಲಿ ಕಾಂಪೌಂಡ್ ಗೋಡೆ ನಿರ್ಮಾಣ ಮಾಡಲು ಕೆಲವು ಖಾಸಗಿ ವ್ಯಕ್ತಿಗಳು ಡಿಪೋ ಜಾಗದಲ್ಲಿಯೇ ಓಡಾಡಲು 18 ಅಡಿ ರಸ್ತೆ ಬಿಟ್ಟು ಕಾಂಪೌಂಡ್ ಗೋಡೆ ನಿರ್ಮಾಣ ಮಾಡಿರಿ ಎಂದು ಅಧಿಕಾರಿಗಳಿಗೆ ಒತ್ತಡ ತರುತ್ತಿದ್ದಾರೆ. ಇದರಿಂದ ಡಿಪೋ ಆರಂಭಕ್ಕೆ ತೊಂದರೆಯಾಗುತ್ತಿದೆ. ಆದರೆ, ಯಾವುದೇ ಅಡೆತಡೆಗಳಿದ್ದರೂ 2024ರ ಕೊನೆಯಲ್ಲಿ ಕೆಎಸ್‌ಆರ್‌ಟಿಸಿ ಡಿಪೋ ಸೇವೆ ಪ್ರಾರಂಭವಾಗಲಿದೆ ಎಂದು ಹೇಳುತ್ತಾರೆ.

2021ರಲ್ಲಿ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಕ್ಷೇತ್ರದ ಜನತೆ ಬಹುದಿನಗಳ ಒತ್ತಾಸೆ ಮೇರೆಗೆ ಕೆಆರ್‌ಟಿಸಿ ಡಿಪೋ, ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಆಗಬೇಕು ಎಂಬ ಒತ್ತಡಕ್ಕೆ ಮಣಿದರು. ಆಗ ಅವರು ಪಟ್ಟಣದ ಹೊರವಲಯದಲ್ಲಿ 4 ಎಕರೆ ಸರ್ಕಾರಿ ಭೂ ಪ್ರದೇಶ ಗುರುತಿಸಿ ಸರ್ಕಾರಕ್ಕೆ ₹25 ಲಕ್ಷವನ್ನು ಕೆಎಸ್ಆರ್‌ಟಿಸಿ ವತಿಯಿಂದಲೇ ಪಾವತಿ ಮಾಡಿಸಿ, ₹8 ಕೋಟಿ ವೆಚ್ಚದಲ್ಲಿ ಡಿಪೋ ನಿರ್ಮಾಣಕ್ಕೆ ಚಾಲನೆ ನೀಡಿದ್ದರು. ಆಗಿನಿಂದ ಇಲ್ಲಿಯವರೆಗೆ ಡಿಪೋ ಕಾಮಗಾರಿ ಕೆಲಸ ಕುಂಟುತ್ತ ಸಾಗಿದೆ. ಈ ಆಮೆಗತಿ ಕಾಮಗಾರಿ ಮಧ್ಯೆ ಕೆಲವು ಖಾಸಗಿ ವ್ಯಕ್ತಿಗಳು ರಸ್ತೆ-ಕಾಂಪೌಂಡ್‌ ಎಂಬ ವಿಚಾರ ತೆಗೆದಿದ್ದರಿಂದ ಡಿಪೋ ಆರಂಭ ನಿಗದಿತ ಸಮಯದೊಳಗೆ ಅಸಾಧ್ಯ ಎಂಬ ಸೂಚನೆಯಂತಿದೆ.

ಪಟ್ಟಣದಲ್ಲಿ ನಿರ್ಲಕ್ಷಕ್ಕೆ ಒಳಗಾಗಿದ್ದ ಗಣಪತಿ ಹೊಂಡದ ಜಾಗದಲ್ಲಿ 2009ರಲ್ಲಿ ಕೆಎಸ್ಆರ್‌ಟಿಸಿ ಬಸ್ ನಿಲ್ದಾಣ ನಿರ್ಮಿಸಲು ಜನಾಭಿಪ್ರಾಯ ಕೇಳಲಾಗಿತ್ತು. ಹೊಂಡದ ಪಕ್ಕದ ಕೆರೆಯಲ್ಲಿ ಗಣಪತಿ ಹೊಂಡ ಮತ್ತು ಕೆರೆ ನಿರ್ಮಿಸಿ ಕೊಡುವುದಾಗಿ ಆಗಿನ ಶಾಸಕರಾಗಿದ್ದ ಮಾಡಾಳು ವಿರೂಪಾಕ್ಷಪ್ಪ ಹೇಳಿದ್ದರು. ಆದರೆ, ಸಾರಿಗೆ ಬಸ್‌ ನಿಲ್ದಾಣ ನಿರ್ಮಾಣ ವಿಚಾರದಲ್ಲಿ ಪರ-ವಿರೋಧಗಳು ವ್ಯಕ್ತವಾಗಿದ್ದವು. ಆದಕಾರಣ ಆ ವಿಚಾರ ಅಲ್ಲಿಗೇ ಕೈ ಬಿಡಲಾಗಿತ್ತು ಎಂದು ಸ್ಮರಿಸುತ್ತಾರೆ ಸಾಮಾಜಿಕ ಕಾರ್ಯಕರ್ತ ದೊಡ್ಡಘಟ್ಟದ ರಂಗಸ್ವಾಮಿ.

ಪ್ರಸ್ತುತ ಸಂದರ್ಭದಲ್ಲಿ ಚನ್ನಗಿರಿ ಪಟ್ಟಣದಲ್ಲಿ ಸುಸಜ್ಜಿತ ಬಸ್ ನಿಲ್ದಾಣದ ಅವಶ್ಯಕತೆವಿದೆ. ಈಗಾಗಲೇ 50ಕ್ಕೂ ಹೆಚ್ಚು ಸರ್ಕಾರಿ ಬಸ್‌ ಚನ್ನಗಿರಿ ಮಾರ್ಗವಾಗಿ ಸಂಚರಿಸುತ್ತಿವೆ. ಪಟ್ಟಣದ ಜನತೆಗೆ ಅನುಕೂಲ ಆಗುವಂತಹ ಸೂಕ್ತ ಸ್ಥಳದಲ್ಲಿ ಸರ್ಕಾರಿ ಬಸ್ ನಿಲ್ದಾಣ ನಿರ್ಮಾಣ ಮಾಡಬೇಕಾದ ಜವಾಬ್ದಾರಿ ಜನಪ್ರತಿನಿಧಿಗಳ ಮೇಲಿದೆ. ನಾಗರಿಕರ ನಿರೀಕ್ಷೆಯೂ ಇದೇ ಆಗಿರುವುದು ಸರ್ಕಾರ, ಜನಪ್ರತಿನಿಧಿಗಳು ಗಂಭೀರವಾಗಿ ಗಮನಿಸಬೇಕಿದೆ. ಈ ನಿಟ್ಟಿನಲ್ಲಿ ಸೂಕ್ತ, ಕಟ್ಟುನಿಟ್ಟಿನ ಕ್ರಮಗಳು ಜರುಗಬೇಕಿದೆ.