ಸಾರಾಂಶ
ಮಂಡ್ಯ ಮತ್ತು ಶಿರಾ ಎಸ್‌ಎಚ್–84 ರಾಜ್ಯ ಹೆದ್ದಾರಿಯ ರಸ್ತೆ ಮುಚ್ಚಿ ಒತ್ತುವರಿ ಮಾಡಿಕೊಂಡು ಸಂಚಾರಕ್ಕೆ ತೊಂದರೆ ಕೊಡುತ್ತಿರುವ ಕ್ರಮ ಖಂಡಿಸಿ ಹಲ್ಲೇಗೆರೆ ಗ್ರಾಮಸ್ಥರು, ಗ್ರಾಪಂ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಕನ್ನಡಪ್ರಭ ವಾರ್ತೆ ಮಂಡ್ಯ
ಮಂಡ್ಯ ಮತ್ತು ಶಿರಾ ಎಸ್‌ಎಚ್–84 ರಾಜ್ಯ ಹೆದ್ದಾರಿಯ ರಸ್ತೆ ಮುಚ್ಚಿ ಒತ್ತುವರಿ ಮಾಡಿಕೊಂಡು ಸಂಚಾರಕ್ಕೆ ತೊಂದರೆ ಕೊಡುತ್ತಿರುವ ಕ್ರಮ ಖಂಡಿಸಿ ಹಲ್ಲೇಗೆರೆ ಗ್ರಾಮಸ್ಥರು, ಗ್ರಾಪಂ ಸದಸ್ಯರು ಹಾಗೂ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.ಗುರುವಾರ ಗ್ರಾಮದ ಹೆದ್ದಾರಿಗಿಳಿದ ಗ್ರಾಮಸ್ಥರು ಜಿಲ್ಲಾಡಳಿತ, ಸರ್ಕಾರ, ಜನಪ್ರತಿನಿಧಿಗಳ ವಿರುದ್ಧ ಘೋಷಣೆ ಕೂಗಿದರು. ರಾಜ್ಯ ಹೆದ್ದಾರಿ ಹಾದು ಹೋಗಿರುವ ಗ್ರಾಮದ ಹೃದಯಭಾಗದಲ್ಲಿ ಜಾಗವನ್ನು ಕೆಲವರು ಒತ್ತುವರಿ ಮಾಡಿಕೊಂಡು ಸಂಚಾರಕ್ಕೆ ಅಡ್ಡಿಪಡಿಸುತ್ತಿದ್ದಾರೆ. ದಿನನಿತ್ಯ ಶಾಲಾ ಕಾಲೇಜುಗಳಿಗೆ ಹೋಗುವ ವಿದ್ಯಾರ್ಥಿಗಳು, ಉದ್ಯೋಗಸ್ಥರು ಹಾಗೂ ಸಾರ್ವಜನಿಕರಿಗೆ ತೊಂದರೆ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಾರೋ ಒಬ್ಬರ ಹಿತಾಶಕ್ತಿಯಿಂದ ಸಂಚಾರಕ್ಕೆ ಅಡ್ಡಿ ಪಡಿಸುತ್ತಿರುವುದು ಖಂಡನೀಯ. ಈ ರಸ್ತೆಯ ದುರಸ್ತಿ ಮಾಡಿಸುವುದಾಗಿ ಹೇಳಿ ತಿಂಗಳುಗಳೇ ಕಳೆದಿವೆ. ಆದರೂ ಇತ್ತ ಯಾವ ಅಧಿಕಾರಿಗಳು ಸುಳಿದಿಲ್ಲ. ಶಾಸಕರು ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಇಲ್ಲಿನ ಅಧಿಕಾರಿಗಳಿಗೆ ತಕ್ಷಣವೇ ಆದೇಶ ನೀಡಿ ಸಮಸ್ಯೆ ಇತ್ಯರ್ಥ ಪಡಿಸಬೇಕು ಎಂದು ಒತ್ತಾಯಿಸಿದರು.ಗ್ರಾಮದಲ್ಲಿ ಕೆಸರು ಗದ್ದೆಯಾಗಿರುವ ಕಿರಿದಾದ ರಸ್ತೆಯಲ್ಲಿಯೇ ಸಂಚಾರ ಮಾಡುವ ಸ್ಥಿತಿ ನಿರ್ಮಾಣವಾಗಿದೆ. ದಿನ ನಿತ್ಯದ ಹೊಲ ಗದ್ದೆಗಳಿಗೆ ಹೋಗಲು ತೊಂದರೆಯಾಗಿದೆ. ವಯೋವೃದ್ಧರು ಇಲ್ಲಿರುವ ಗುಂಡಿಗಳಲ್ಲಿ ಬೀಳುವಂತಾಗಿದೆ. ಎಲ್ಲರೂ ಈ ರಸ್ತೆಯನ್ನೇ ಅವಲಂಬಿಸಿರುವುದರಿಂದ ದುರಸ್ತಿ ಕಾರ್ಯವನ್ನು ತಕ್ಷಣ ಮುಗಿಸಿ ನೆರವಾಗಬೇಕು. ಇಲ್ಲವಾದರೆ ನಿರಂತರ ಧರಣಿ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಸಿದರು.
ಪ್ರತಿಭಟನೆಯಲ್ಲಿ ಪಿಎಲ್‌ಡಿ ಬ್ಯಾಂಕ್ ನಿರ್ದೇಶಕ ಸಿ.ಕೆ.ಪಾಪಯ್ಯ, ಗ್ರಾಪಂ ಅಧ್ಯಕ್ಷೆ ಎ.ಪಿ.ಸುಮಾ, ಉಪಾಧ್ಯಕ್ಷೆ ಭಾಗ್ಯಮ್ಮ, ಸದಸ್ಯರಾದ ಕರೀಗೌಡ, ರಾಮಲಿಂಗೇಗೌಡ, ಕೃಷ್ಣ, ದಯಾನಂದ್, ಶ್ರುತಿ, ಕೆ.ಎಂ.ನಾಗರಾಜು, ಗೀತಾ, ಜಯರಾಮೇಗೌಡ, ಮುಖಂಡರಾದ ಶಶಿಕುಮಾರ್, ಬೋರೇಗೌಡ, ವಿದ್ಯಾರ್ಥಿಗಳು ಮತ್ತು ಮಹಿಳೆಯರು ಭಾಗವಹಿಸಿದ್ದರು.