ಸಾರಾಂಶ
ಕನ್ನಡಪ್ರಭ ವಾರ್ತೆ ಕೊಟ್ಟೂರು
ಕೊಟ್ಟೂರು ಪಟ್ಟಣದಲ್ಲಿ ಕಳೆದ ಮೂರು ನಾಲ್ಕು ದಿನಗಳಿಂದ ಮಳೆ ಉತ್ತಮವಾಗಿ ಸುರಿಯುತ್ತಿದ್ದು, ಮಂಗಳವಾರ ಬೆಳಗ್ಗೆಯಿಂದಲೇ ಗುಡುಗು-ಸಿಡಿಲುಗಳ ಆರ್ಭಟಗಳೊಂದಿಗೆ ವ್ಯಾಪಕ ಮಳೆ ಸುರಿಯಿತು.ಈ ಮಳೆಯಿಂದಾಗಿ ತಾಲೂಕಿನ ಕೂಡ್ಲಿಗಿ ರಸ್ತೆಯಲ್ಲಿನ ವಡ್ಡರ ಹಳ್ಳ ತುಂಬಿ ಮೇಲೆ ಹರಿದ ಪರಿಣಾಮ ಸುಮಾರು ಅರ್ದ ಗಂಟೆಗಳವರೆಗೆ ಕೊಟ್ಟೂರು -ಕೂಡ್ಲಿಗಿ ನಡುವಿನ ರಸ್ತೆ ಸಂಚಾರ ಹರಿಯುತ್ತಿದ್ದ ನೀರಿನಲ್ಲೇ ಮಾಡುವಂತಾಗಿ ಪ್ರಯಾಣಿಕರು ತೀವ್ರ ತೊಂದರೆ ಅನುಭವಿಸಿದರು.
ಹೊಸಪೇಟೆಯಲ್ಲಿ ನಡೆದ ರಾಜ್ಯ ಸರ್ಕಾರದ ಸಮಾವೇಶಕ್ಕೆ ಬಸ್ ತೆರಳಿದ್ದರಿಂದ ಬಸ್ ಸಂಚಾರ ಕಂಡುಬರಲಿಲ್ಲ. ಆದರೆ ಈ ಮಾರ್ಗದ ಮೂಲಕ ಕೂಡ್ಲಿಗಿಯಿಂದ ಕೊಟ್ಟೂರಿಗೆ ಬರುವ ಕಾರು, ಟ್ರಾಕ್ಸ್ ಮತ್ತಿತರ ವಾಹನಗಳು ವಡ್ಡರ ಹಳ್ಳದ ನೀರಿನ ಪ್ರವಾಹವನ್ನೇ ದಾಟುತ್ತಾ ಪ್ರಯಾಸ ಪಟ್ಟು ಕೆಲಹೊತ್ತು ಸಂಚರಿಸಿದವು.ಇತರ ತಗ್ಗು ಪ್ರದೇಶಗಳಾದ ಪಟ್ಟಣದ ಬಸ್‌ನಿಲ್ದಾಣ, ಬಳ್ಳಾರಿ ಕ್ಯಾಂಪ್ ಮತ್ತು ಇಟಿಗಿ ರಸ್ತೆಯಲ್ಲಿ ರೈಲ್ವೆ ಸೇತುವೆ ಬಳಿ ಕೂಡಾ ಮಳೆಯ ನೀರು ಪ್ರವಾಹೋಪಾದಿಯಲ್ಲಿ ರಸ್ತೆಯ ಮೇಲೆ ಹರಿಯುತ್ತಿದ್ದ ಕಾರಣದಿಂದಾಗಿ ಪ್ರಯಾಣಿಕರ ವಾಹನಗಳಿಗೆ ತೊಂದರೆ ಉಂಟಾಯಿತು.
ತಾಲೂಕಿನ ಕೆಲಕಡೆ ಮತ್ತು ಕೊಟ್ಟೂರಿನ ಕೆಲ ಜಮೀನುಗಳಲ್ಲಿ ಮಳೆಯ ನೀರು ನಿಂತುಕೊಂಡಿರುವ ಪರಿಣಾಮ ಬೆಳೆದಿರುವ ಬೆಳೆಗಳು ಹಾನಿಗೊಳಗಾಗಿವೆ. ಗುಡುಗು-ಸಿಡಿಲಿನ ಆರ್ಭಟ ಜೋರಾಗಿತ್ತಾದರೂ ಯಾವುದೇ ಪ್ರಾಣಹಾನಿಯ ವರದಿಯಾಗಿಲ್ಲ.ಸಂಡೂರು ತಾಲೂಕಿನ ವಿವಿಧೆಡೆ ಮಳೆ:ಸಂಡೂರು ಸೇರಿದಂತೆ ತಾಲೂಕಿನ ವಿವಿದೆಡೆ ಮಂಗಳವಾರ ಉತ್ತಮ ಮಳೆಯಾಗಿದೆ.ಯಶವಂತನಗರದ ರೈಲ್ವೆ ಅಂಡರ್ ಪಾಸ್ ಬಳಿಯಲ್ಲಿ ಮಳೆ ನೀರು ನಿಂತುಕೊಂಡ ಕಾರಣ, ವಾಹನ ಸವಾರರು ಸಂಚಾರಕ್ಕೆ ಪರದಾಡಬೇಕಾಯಿತು. ಕೆಲ ಸಮಯ ಅಲ್ಲಿ ಟ್ರಾಫಿಕ್ ಜಾಮ್ ಉಂಟಾಗಿತ್ತು. ಅಲ್ಲಿ ಮೊಣಕಾಲುದ್ದ ನೀರು ನಿಂತುಕೊಂಡು ಸಂಚಾರಕ್ಕೆ ಅಡಚಣೆ ಉಂಟಾಗಿತ್ತು.ಸಂಡೂರು ಹಾಗೂ ಚೋರುನೂರು ಮಳೆ ಮಾಪನ ಕೇಂದ್ರದಲ್ಲಿ ಮಂಗಳವಾರ ಕ್ರಮವಾಗಿ ೨.೬ ಮಿಮೀ ಹಾಗೂ ೧೬ ಮಿಮೀ ಮಳೆ ದಾಖಲಾಗಿದೆ. ಆಗಾಗ್ಗೆ ಮಳೆ ಸುರಿಯುತ್ತಿರುವುದರಿಂದ ಇಳೆ ತಂಪಾಗಿದೆ.