ಸಾರಾಂಶ
18 ವರ್ಷ ರಸ್ತೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದ ಗ್ರಾಮದ ಜನಕನ್ನಡಪ್ರಭ ವಾರ್ತೆ ನುಗ್ಗೇಹಳ್ಳಿ
ಗ್ರಾಮದ ರೈತರು ತಮ್ಮ ತೋಟ ಹೊಲಗಳಿಗೆ ಹೋಗಲು ರಸ್ತೆ ಇಲ್ಲದೆ ಅನೇಕ ವರ್ಷಗಳಿಂದ ಸಮಸ್ಯೆ ಎದುರಿಸುತ್ತಿದ್ದರು. ಕಂದಾಯ ಇಲಾಖೆ ರೈತ ಸಂಘ, ಗ್ರಾಮಸ್ಥರು ಜಮೀನಿನ ರೈತರ ಮನವೊಲಿಸುವ ಮೂಲಕ ಕಳೆದ 18 ವರ್ಷಗಳಿಂದ ರಸ್ತೆ ಇಲ್ಲದೆ ಸಮಸ್ಯೆ ಎದುರಿಸುತ್ತಿದ್ದ ರೈತರಿಗೆ ಕಂದಾಯ ಇಲಾಖೆಯ ಅಧಿಕಾರಿಗಳು ರಸ್ತೆ ಬಿಡಿಸಿಕೊಟ್ಟಿದ್ದಾರೆ. ಈ ಮೂಲಕ ಅನೇಕ ವರ್ಷಗಳ ಸಮಸ್ಯೆ ಬಗೆಹರಿದಂತಾಗಿದೆ.ಹೋಬಳಿಯ ಹೊನ್ನ ಮಾರನಹಳ್ಳಿ ಗ್ರಾಮದ ರೈತರು ತಮ್ಮ ಜಮೀನುಗಳಿಗೆ ಹೋಗಲು ರಸ್ತೆ ಇಲ್ಲದೆ ಕಳೆದ 18 ವರ್ಷಗಳಿಂದ ಸಮಸ್ಯೆಯಾಗಿತ್ತು. ಹೊನ್ನ ಮಾರನಹಳ್ಳಿ ಮತ್ತು ನುಗ್ಗೇಹಳ್ಳಿ ಸರ್ವೆ ನಂಬರ್ ವ್ಯಾಪ್ತಿಯ ನಿವಾಜಿ ಬಾರೆಯಲ್ಲಿ ಹೊನ್ನಮಾರನಹಳ್ಳಿ ಗ್ರಾಮದ 100ಕ್ಕೂ ಹೆಚ್ಚು ರೈತರ ತೆಂಗಿನ ತೋಟ ಕೃಷಿ ಜಮೀನು ಇತ್ತು. ರಸ್ತೆ ಇಲ್ಲದೆ ರೈತರು ಕೃಷಿ ಚಟುವಟಿಕೆ ನಡೆಸಲು ತುಂಬಾ ತೊಂದರೆ ಆಗುತ್ತಿತ್ತು. ರೈತರಿಗೆ ಸರ್ಕಾರದ ಹೊಸ ಆದೇಶ ರೈತರ ಕೈ ಹಿಡಿದಿದೆ. ಕಳೆದ 2023ರ ಅಕ್ಟೋಬರ್ 21ರಂದು ರಾಜ್ಯ ಸರ್ಕಾರ ಹೊಸ ಆದೇಶ ಮಾಡಿದ್ದು ಇದರಲ್ಲಿ ರೈತರ ವ್ಯವಸಾಯದ ಉದ್ದೇಶಕ್ಕಾಗಿ ಖಾಸಗಿ ಜಮೀನುಗಳಲ್ಲಿ ಕಾವಲು ದಾರಿ ಬಡಿದಾರಿ ಅವಕಾಶ ಮಾಡಿಕೊಡುವಂತೆ ತನ್ನ ಸುತ್ತೋಲೆಯಲ್ಲಿ ಆದೇಶ ಮಾಡಿತ್ತು
ಈ ಹಿನ್ನೆಲೆಯಲ್ಲಿ ಹೋಬಳಿ ಉಪ ತಹಸೀಲ್ದಾರ್ ಗಿರೀಶ್ ಬಾಬು ಮತ್ತು ಕಂದಾಯ ಅಧಿಕಾರಿ ಲೋಕೇಶ್ ನೇತೃತ್ವದಲ್ಲಿ ರಸ್ತೆ ವಿವಾದದ ಹಿನ್ನೆಲೆಯಲ್ಲಿ ರೈತರೊಂದಿಗೆ ಮತ್ತು ಮುಖ್ಯರಸ್ತೆಯ ಮುಂಭಾಗದ ಜಮೀನಿನ ಮಾಲೀಕರೊಂದಿಗೆ ಮಾತುಕತೆ ನಡೆಸಿ ಸರ್ಕಾರದ ಸುತ್ತೋಲೆಯ ಬಗ್ಗೆ ಸಂಕ್ಷಿಪ್ತವಾಗಿ ತಿಳಿಸಿ ರಸ್ತೆ ಬಿಟ್ಟು ಕೊಡುವಂತೆ ತಿಳಿಸಿದರು. ಇದಕ್ಕೆ ಸ್ಪಂದಿಸಿದ ಜಮೀನಿನ ಮಾಲೀಕರು ಸರ್ಕಾರದ ಆದೇಶಕ್ಕೆ ಗೌರವ ನೀಡಿ ಸಮ್ಮತಿಸಿದರು. ಕಳೆದ ಅನೇಕ ವರ್ಷಗಳಿಂದ ಕಗ್ಗಂಟಾಗಿದ್ದ ರಸ್ತೆ ವಿವಾದ ಸದ್ಯ ರಾಜ್ಯ ಸರ್ಕಾರದ ಆದೇಶದಿಂದ ಬಗೆಹರಿದಂತಾಗಿದೆ.ಹೋಬಳಿ ಕಂದಾಯ ಅಧಿಕಾರಿ ಲೋಕೇಶ್ ಮಾತನಾಡಿ, ಸರ್ಕಾರದ ಹೊಸ ಆದೇಶದಿಂದ ರೈತರಿಗೆ ಕೃಷಿ ಚಟುವಟಿಕೆಗೆ ಅನುಕೂಲವಾಗುವ ದೃಷ್ಟಿಯಿಂದ ಅವಶ್ಯಕತೆ ಇರುವ ಕಡೆಗಳಲ್ಲಿ ರೈತರಿಗೆ ರಸ್ತೆ ಬಿಡಿಸಿಕೊಡುವ ಕೆಲಸವನ್ನು ಮಾಡಲಾಗುತ್ತದೆ ಗ್ರಾಮದ ರೈತರಿಗೆ ತಕ್ಷಣ ರಸ್ತೆ ಬಿಡಿಸಿಕೊಡುವ ಸಲುವಾಗಿ ಜೆಸಿಬಿ ಯಂತ್ರದ ಮೂಲಕ ಗಿಡಗಂಟೆಗಳನ್ನು ತೆರವು ಗೊಳಿಸಲಾಗಿದೆ ಎಂದರು.
ರಸ್ತೆ ಸಮಸ್ಯೆ ಹಿನ್ನೆಲೆಯಲ್ಲಿ ಶಾಸಕ ಸಿಎನ್ ಬಾಲಕೃಷ್ಣ ಸ್ಥಳಕ್ಕೆ ಭೇಟಿ ನೀಡಿ ತಮ್ಮ ಜಮೀನಿನಲ್ಲಿ ರಸ್ತೆ ಮಾಡಲು ಒಪ್ಪಿಗೆ ಸೂಚಿಸಿದ್ದ ರಾಜಪ್ಪ ಮತ್ತು ಲೋಕೇಶ್ ಮತ್ತು ಗ್ರಾಮಸ್ಥರೊಂದಿಗೆ ಮಾತುಕತೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿ, ಮುಂಬರುವ ದಿನಗಳಲ್ಲಿ ಶಾಶ್ವತ ರಸ್ತೆ ನಿರ್ಮಾಣಕ್ಕೆ ಅನುದಾನ ನೀಡುವುದಾಗಿ ಭರವಸೆ ನೀಡಿದರು. ರಸ್ತೆ ಸಮಸ್ಯೆ ಹಿನ್ನೆಲೆಯಲ್ಲಿ ಮುಂಜಾಗ್ರತೆ ಕ್ರಮವಾಗಿ ಸ್ಥಳದಲ್ಲಿ ಬಿಗಿ ಪೊಲೀಸ್ ಭದ್ರತೆ ನಿಯೋಜಿಸಲಾಗಿತ್ತು.ಹೋಬಳಿ ಉಪ ತಹಸಿಲ್ದಾರ್ ಗಿರೀಶ್ ಬಾಬು, ನುಗ್ಗೇಹಳ್ಳಿ ಪೊಲೀಸ್ ಠಾಣೆ ಪಿಎಸ್ಐ ನವೀನ್ ಕುಮಾರ್, ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಮಹಿಳಾ ಅಧ್ಯಕ್ಷ ಚಿನ್ನೇನಹಳ್ಳಿ ನಾಗರತ್ನಮ್ಮ, ರಾಜ್ಯ ಪ್ರಧಾನ ಕಾರ್ಯದರ್ಶಿ ವಿನೋದ್ , ಹೊಳೆನರಸೀಪುರ ತಾಲೂಕು ರೈತ ಸಂಘದ ಅಧ್ಯಕ್ಷ ಸ್ವಾಮಿಗೌಡ ಹುಲಿವಾಲ, ಚನ್ನರಾಯಪಟ್ಟಣ ತಾಲೂಕು ಅಧ್ಯಕ್ಷ ಮರಗೂರು ಶಿವರಾಮು, ಹೊನ್ನ ಮಾರನಹಳ್ಳಿ ರೈತ ಮುಖಂಡರಾದ ಬಸವರಾಜ್, ತಾಯಮ್ಮ, ಚನ್ನರಾಯಪಟ್ಟಣ ಹಾಗೂ ಹೊಳೆನರಸೀಪುರ ತಾಲೂಕು ರೈತ ಸಂಘದ ಮುಖಂಡರು, ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆ ಹಾಗೂ ಪೊಲೀಸ್ ಇಲಾಖೆ ಸಿಬ್ಬಂದಿ ವರ್ಗ ಮತ್ತು ಗ್ರಾಮಸ್ಥರು ಹಾಜರಿದ್ದರು.ನುಗ್ಗೇಹಳ್ಳಿ ಹೋಬಳಿಯ ಹೊನ್ನಮಾರನಹಳ್ಳಿ ಗ್ರಾಮದ ಹಲವು ವರ್ಷಗಳ ರಸ್ತೆ ಸಮಸ್ಯೆ ಹಿನ್ನೆಲೆಯಲ್ಲಿ ರೈತರೊಂದಿಗೆ ಮತ್ತು ಜಮೀನಿನ ಭೂ ಮಾಲೀಕರೊಂದಿಗೆ ಕಂದಾಯ ಇಲಾಖೆ ಹಾಗೂ ಪೊಲೀಸ್ ಇಲಾಖೆ ರೈತ ಸಂಘದ ಮುಖಂಡರು ಶಾಂತಿಯುತವಾಗಿ ಮಾತುಕತೆ ನಡೆಸುವ ಮೂಲಕ ಸಮಸ್ಯೆ ಬಗೆಹರಿಸಲಾಯಿತು.