ಸಾರಾಂಶ
ಹದಗೆಟ್ಟು ಹೋಗಿರುವ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ಆಡಳಿತ ವ್ಯವಸ್ಥೆ ಕಣ್ಣು ತೆರೆಯದಾಗ ರೊಚ್ಚಿಗೆದ್ದ ಕಿನ್ನಾಳ ಗ್ರಾಮಸ್ಥರು, ಗ್ರಾಮದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಗಾಗಿ ಸಂಗ್ರಹಿಸಿದ ದುಡ್ಡಿನಲ್ಲಿಯೇ ರಸ್ತೆ ದುರಸ್ತಿ ಮಾಡುತ್ತಿದ್ದಾರೆ.
ಡಿಜೆ, ಮೆರವಣಿಗೆಗೆ ಬ್ರೇಕ್ ಹಾಕಿ, ಅದೇ ಹಣದಿಂದ ರಸ್ತೆ ದುರಸ್ತಿ
ಕಿನ್ನಾಳ ಗ್ರಾಮಸ್ಥರಿಂದ ಮಾದರಿ ಕಾರ್ಯಸೋಮರಡ್ಡಿ ಅಳವಂಡಿಕನ್ನಡಪ್ರಭ ವಾರ್ತೆ ಕೊಪ್ಪಳ
ಹದಗೆಟ್ಟು ಹೋಗಿರುವ ರಸ್ತೆಯಲ್ಲಿ ಸಂಚಾರ ದುಸ್ತರವಾಗಿದೆ. ಆಡಳಿತ ವ್ಯವಸ್ಥೆ ಕಣ್ಣು ತೆರೆಯದಾಗ ರೊಚ್ಚಿಗೆದ್ದ ಕಿನ್ನಾಳ ಗ್ರಾಮಸ್ಥರು, ಗ್ರಾಮದ ಹಿಂದೂ ಮಹಾ ಗಣಪತಿ ಪ್ರತಿಷ್ಠಾಪನೆಗಾಗಿ ಸಂಗ್ರಹಿಸಿದ ದುಡ್ಡಿನಲ್ಲಿಯೇ ರಸ್ತೆ ದುರಸ್ತಿ ಮಾಡುತ್ತಿದ್ದಾರೆ.ಕಾಮನಕಟ್ಟಿ ಬಳಗದ ವತಿಯಿಂದ ಪ್ರತಿ ವರ್ಷ ಕಿನ್ನಾಳ ಗ್ರಾಮದಲ್ಲಿ ಹಿಂದೂ ಮಹಾಗಣಪತಿಯನ್ನು ಸ್ಥಾಪಿಸಲಾಗುತ್ತದೆ. ಡಿಜೆ ಸೇರಿದಂತೆ ಬೃಹತ್ ಮೆರವಣಿಗೆ ಮಾಡಿ, ಪ್ರಸಾದ ವ್ಯವಸ್ಥೆ ಮಾಡಲಾಗುತ್ತದೆ.
ಆದರೆ, ಈ ವರ್ಷ ತಮ್ಮೂರಿನ ಹದಗೆಟ್ಟ ರಸ್ತೆಯನ್ನು ದುರಸ್ತಿ ಮಾಡುವುದಕ್ಕಾಗಿ ಗಣಪತಿ ಸ್ಥಾಪಿಸಲು ಸಂಗ್ರಹಿಸಿದ್ದ ಪಟ್ಟಿಯನ್ನೇ ಬಳಕೆ ಮಾಡಿದ್ದಾರೆ. ಮೆರವಣಿಗೆ, ಡಿಜೆ ಬಳಕೆ ಕೈಬಿಟ್ಟು, ಅದರಿಂದ ಉಳಿಯುವ ಹಣದಲ್ಲಿಯೇ ತಮ್ಮೂರಿನ ರಸ್ತೆ ನಿರ್ಮಾಣ ಮಾಡುತ್ತಿದ್ದಾರೆ.8 ಕಿಮೀ ರಸ್ತೆ:
ಕಿನ್ನಾಳ ಗ್ರಾಮದಿಂದ ಚೀಲವಾಡಗಿ ಗ್ರಾಮದವರೆಗೂ ಹದಗೆಟ್ಟು ಹಳ್ಳದಂತಾಗಿರುವ 8 ಕಿಮೀ ರಸ್ತೆಯನ್ನು ದುರಸ್ತಿ ಮಾಡಲು ತೀರ್ಮಾನಿಸಿ ಕಾಮಗಾರಿ ಪ್ರಾರಂಭಿಸಿದ್ದಾರೆ. ರಸ್ತೆಯನ್ನು ಲೇವಲ್ ಮಾಡಿ, ಮರ್ರಂ ಹಾಕಲಾಗುತ್ತಿದೆ. ಇದಕ್ಕಾಗಿ ಸುಮಾರು ₹2-3 ಲಕ್ಷ ರುಪಾಯಿ ವ್ಯಯ ಮಾಡುತ್ತಿದ್ದಾರೆ. ಅಷ್ಟೇ ಅಲ್ಲ ಗ್ರಾಮದಲ್ಲಿರುವ ಟ್ರ್ಯಾಕ್ಟರ್, ಟಿಪ್ಪರ್, ರೋಲರ್ ಹಾಗೂ ಜೆಸಿಬಿಗಳನ್ನು ಉಚಿತವಾಗಿ ಪಡೆದು ರಸ್ತೆ ನಿರ್ಮಾಣ ಮಾಡುವ ಕಾಮಗಾರಿ ಪ್ರಾರಂಭಿಸಿದ್ದು, ಇದಕ್ಕೆ ಜಿಲ್ಲಾದ್ಯಂತ ಭಾರಿ ಶ್ಲಾಘನೆ ವ್ಯಕ್ತವಾಗಿದೆ.ಯಾಕೆ ನಿರ್ಧಾರ:
ಪ್ರತಿವರ್ಷದಂತೆ ಈ ಬಾರಿಯೂ ಗ್ರಾಮಸ್ಥರು ಗಣಪತಿ ಹಬ್ಬವನ್ನು ಭರ್ಜರಿಯಾಗಿಯೇ ಆಚರಣೆ ಮಾಡುತ್ತಿದ್ದಾರೆ. ಆದರೆ, ತಮ್ಮೂರಿಗೆ ಬರುವ ರಸ್ತೆ ಹದಗೆಟ್ಟಿದೆ. ಯಾರೂ ಸಹ ದುರಸ್ತಿ ಮಾಡುತ್ತಿಲ್ಲ. ಸರ್ಕಾರ ಕಣ್ಣುತೆರೆದು ನೋಡುತ್ತಿಲ್ಲ. ಮನವಿ ಮಾಡಿದರೂ ಯಾರು ಸ್ಪಂದನೆ ಮಾಡುತ್ತಿಲ್ಲ. ಡಿಜೆ ಬಳಕೆಯಿಂದ ಸಮಸ್ಯೆಯೇ ಹೆಚ್ಚಾಗುತ್ತದೆ. ಹುಚ್ಚಾಟ ಮಾಡಿ, ಕುಣಿದು ಕುಪ್ಪಳಿಸುವ ಬದಲು ಗ್ರಾಮದ ರಸ್ತೆಯನ್ನಾದರೂ ನಿರ್ಮಾಣ ಮಾಡೋಣ ಎನ್ನುವ ಸಲಹೆ ಬಂದಾಗ ಎಲ್ಲರೂ ಸೇರಿ ಈ ತೀರ್ಮಾನ ತೆಗೆದುಕೊಂಡಿದ್ದಾರೆ. ಹೀಗಾಗಿ, ಈ ವರ್ಷ ಡಿಜೆ ಸೇರಿದಂತೆ ಮತ್ತಿತರ ಖರ್ಚು ಮಾಡದೆ ರಸ್ತೆ ದುರಸ್ತಿಗೆ ಖರ್ಚು ಮಾಡುತ್ತಿದ್ದಾರೆ. ಹಾಗಂತ ಸಂಪ್ರದಾಯ, ಸಂಸ್ಕೃತಿಯಂತೆ ಗಣೇಶೋತ್ಸವ ಆಚರಣೆಯೂ ನಡೆಯುತ್ತಿದೆ.ಗಂಗಾವತಿ ಶಾಸಕರಿಗೂ ಹೇಳಿದೆವು, ಕೊಪ್ಪಳ ಶಾಸಕರಿಗೂ ಹೇಳಿ ಹೇಳಿ ಸಾಕಾಗಿ ಹೋಯಿತು. ಆದರೂ ನಮ್ಮೂರಿನ ರಸ್ತೆ ಯಾರೂ ಮಾಡಿಸಲೇ ಇಲ್ಲ. ರಸ್ತೆ ದುರಸ್ತಿಯನ್ನು ನಾವೇ ಮಾಡಲು ನಿರ್ಧರಸಿ, ಪ್ರಾರಂಭಿಸಿದ್ದೇವೆ. ಗಣಪತಿ ಮೆರವಣಿಗಾಗಿ ಮಾಡುತ್ತಿದ್ದ ಖರ್ಚನ್ನೇ ಇದಕ್ಕೆ ಈ ಬಾರಿ ಬಳಕೆ ಮಾಡಿಕೊಂಡಿದ್ದೇವೆ ಎನ್ನುತ್ತಾರೆ ಹಿಂದೂ ಮಹಾಮಂಡಳದ ಸದಸ್ಯ ವೀರೇಶ ನಾಯಕ.