ಬಾಗಲಕೋಟೆ ಜಿಲ್ಲೆಯಾದ್ಯಂತ ಜನವರಿ 1 ರಿಂದ 31ರವರೆಗೆ ರಸ್ತೆ ಸುರಕ್ಷತಾ ಮಾಸಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಎನ್.ವಿ. ವಿಜಯ್ ಹೇಳಿದರು.
ಕನ್ನಡಪ್ರಭ ವಾರ್ತೆ ಬಾಗಲಕೋಟೆ
ಜಿಲ್ಲೆಯಾದ್ಯಂತ ಜನವರಿ 1 ರಿಂದ 31ರವರೆಗೆ ರಸ್ತೆ ಸುರಕ್ಷತಾ ಮಾಸಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಅಧ್ಯಕ್ಷ ಎನ್.ವಿ. ವಿಜಯ್ ಹೇಳಿದರು.ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಕಚೇರಿಯಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ರಸ್ತೆ ಸುರಕ್ಷತಾ ಕಾರ್ಯಕ್ರಮದ ನಿಮಿತ್ತ ಸರ್ವೋಚ್ಚ ನ್ಯಾಯಾಲಯದ ರಸ್ತೆ ಸುರಕ್ಷತಾ ಸಮಿತಿ ನಿರ್ದೇಶನದಂತೆ ಜಿಲ್ಲಾಡಳಿತ, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಜಿಲ್ಲಾ ಪ್ರಾದೇಶಿಕ ಸಾರಿಗೆ ಇಲಾಖೆ, ಲೋಕೋಪಯೋಗಿ, ಪೊಲೀಸ್ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲಾ, ತಾಲೂಕು ಹಾಗೂ ಗ್ರಾಮ ಮಟ್ಟದಲ್ಲಿ ರಸ್ತೆ ಸುರಕ್ಷತಾ ಮಾಸಾಚರಣೆ ಅಭಿಯಾನ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಸ್ತೆ ಅಪಘಾತದಲ್ಲಿ ರಾಜ್ಯದ ಅಂಕಿ-ಸಂಖ್ಯೆ ಅವಲೋಕನ ಮಾಡಿದಾಗ ರಾಜ್ಯದಲ್ಲಿ ಪ್ರಸಕ್ತ ವರ್ಷ ಮೊದಲ 6 ತಿಂಗಳಲ್ಲಿ 21937 ರಸ್ತೆ ಅಪಘಾತಗಳು ನಡೆದು, 5975 ಸಾವು ಸಂಭವಿಸಿವೆ. 27,456 ಹೆಚ್ಚಿನ ಪ್ರಮಾಣದಲ್ಲಿ ಗಾಯಗಳಾಗಿವೆ. ಅಪಘಾತ ಸಂಖ್ಯೆ ಕಡಿಮೆ ಮಾಡುವ ನಿಟ್ಟಿನಲ್ಲಿ ರಾಜ್ಯಾದ್ಯಂತ ಅರಿವು ಮೂಡಿಸುವ ನಿಟ್ಟಿನಲ್ಲಿ ಒಂದು ತಿಂಗಳ ಕಾಲ ಅಭಿಯಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.ಅಪಘಾತಗಳು ವೇಗವಾಗಿ ಹೋಗುವುದು, ಕುಡಿದು ವಾಹನ ಚಲಾಯಿಸುವುದು, ರಸ್ತೆ ನಿಯಮ ಪಾಲನೆ, ಹೆಲ್ಮೆಟ್ ಧರಿಸದೇ ಇರುವುದು ಸೇರಿ ಇತರೆ ಕಾರಣಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಅಪಘಾತಗಳು ಸಂಭವಿಸುತ್ತಿವೆ. ಅಪಘಾತ ತಡೆಯುವ ನಿಟ್ಟಿನಲ್ಲಿ ಜನರಲ್ಲಿ ಅರಿವು ಮೂಡಿಸಲು ಅಭಿಯಾನ ರೂಪದಲ್ಲಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ಈ ಅಭಿಯಾನದಲ್ಲಿ ರಸ್ತೆ ಸುರಕ್ಷತೆಗೆ ಸಂಬಂಧಿಸಿದಂತೆ ವಾಹನ ಅಪಘಾತವಾದ ಸಂದರ್ಭಗಳಲ್ಲಿ ನಗದು ರಹಿತ ಚಿಕಿತ್ಸೆ, ವಿಮಾ ಮೊತ್ತ ಪಾವತಿಗೆ ಸಂಬಂಧಿಸಿದಂತೆ ನಮೂನೆಗಳ ಭರ್ತಿ ಇನ್ನಿತರ ಅಂಶಗಳ ಕುರಿತು ತರಬೇತಿ, ಕಾರ್ಯಾಗಾರ, ಸೆಮಿನಾರ್, ಪ್ಯಾನಲ್ ಡಿಸ್ಕಷನ್, ರಹ್ವೀರ್, ಗುಡ್ಸ್‌ಮರಿಟನ್ ಅವಾರ್ಡ್, ಗೋಲ್ಡನ್ ಅವರ ಬಗ್ಗೆ ಅರಿವು ಮತ್ತು ಮಾಸ್ಟರ್ ಟ್ರೈನರ್‌ಗಳಿಗೆ ಉನ್ನತಮಟ್ಟದ ತರಬೇತಿ ಕಾರ್ಯಕ್ರಮ ಪಾಲಿದಾರ ಇಲಾಖೆಗಳಾದ ಸಾರಿಗೆ, ಪೊಲೀಸ್, ಆರೋಗ್ಯ (ರೋಡ್ ಓನಿಂಗ್ ಏಜೆನ್ಸಿ)ಯ ಅಧಿಕಾರಿ ಮತ್ತು ಸಿಬ್ಬಂದಿಗೆ ನೀಡಲಾಗುತ್ತದೆ ಎಂದರು.ಮಾಸಾಚರಣೆ ಅವಧಿಯಲ್ಲಿ ಪರಿಣಾಮಕಾರಿ ಪ್ರವರ್ತನ ಚಟುವಟಿಕೆ ಕೈಗೊಳ್ಳಲಾಗುತ್ತದೆ. ರಸ್ತೆ ಸುರಕ್ಷತೆ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರ ಮತ್ತು ಉಚಿತ ಆರೋಗ್ಯ ತಪಾಸಣೆ ಶಿಬಿರ, ರಕ್ತದಾನ ಶಿಬಿರ, ಸೇಫ್ಟಿ ಹಾರ್ನ್ ಬಗ್ಗೆ ಅರಿವು ಮೂಡಿಸಲಾಗುತ್ತದೆ. ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ ರಸಪ್ರಶ್ನೆ, ಪ್ರಬಂಧ ರಚನೆ, ಕಿರು ನಾಟಕ, ಚಿತ್ರಕಲಾ ಸ್ಪರ್ಧೆ, ಸಾಮಾಜಿಕ ಜಾಲತಾಣದಲ್ಲಿ ರಸ್ತೆ ಸುರಕ್ಷತೆಯ ಸ್ಲೋಗನ್‌ಗಳ ಪ್ರದರ್ಶನ ಮೂಲಕ ಅರಿವು ಮೂಡಿಸುವ ಕಾರ್ಯಕ್ರಮ ಆಯೋಜಿಸಲಾಗುತ್ತಿದೆ ಎಂದು ತಿಳಿಸಿದರು. ಸುದ್ದಿಗೊಷ್ಠಿಯಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಚಂದ್ರಶೇಖರ ದಿಡ್ಡಿ ಇದ್ದರು.