ಸಾರಾಂಶ
ಕನ್ನಡಪ್ರಭ ವಾರ್ತೆ ಹಿರಿಯೂರು
ನಗರದ ಟಿಬಿ ಸರ್ಕಲ್‌ನಿಂದ ತಾಲೂಕು ಕಚೇರಿ ಬಳಿಯಿರುವ ವೇದಾವತಿ ನದಿ ಸೇತುವೆವರೆಗೂ ರಸ್ತೆ ಅಗಲೀಕರಣದ ಪ್ರಯುಕ್ತ ಮರಗಳ ಕಟಾವು ಕಾರ್ಯ ಶನಿವಾರ ಬೆಳಗ್ಗೆಯಿಂದಲೇ ಭರದಿಂದ ಸಾಗಿತು.ಮರ ಕಟಾವು ಕಾಮಗಾರಿ ಆರಂಭಿಸಿದ ನಗರಸಭೆ ಅಧಿಕಾರಿಗಳು ರಸ್ತೆ ಎರಡೂ ಬದಿಗಳಲ್ಲಿದ್ದ ವಿವಿಧ ಅಂಗಡಿಗಳ ಬೋರ್ಡ್, ತರಕಾರಿ, ಪೆಟ್ಟಿಗೆ ಅಂಗಡಿ ತೆರವು ಗೊಳಿಸಿದರು. ಶನಿವಾರದಿಂದ ಮರಗಳ ಕಟಾವು ಮಾಡಲಾಗುವುದು ಎಂಬ ಸೂಚನೆ ಕೊಟ್ಟಿದ್ದರು ಸಹ ಕೆಲವು ತರಕಾರಿ ಅಂಗಡಿಗಳವರು ಶನಿವಾರವೂ ವ್ಯಾಪಾರಕ್ಕೆ ಕುಳಿತಿದ್ದರಿಂದ ನಗರಸಭೆ ಸಿಬ್ಬಂದಿ ಯಾವುದೇ ಮುಲಾಜಿಲ್ಲದೆ ತೆರವುಗೊಳಿಸಿದರು.
ತಾಲೂಕು ಕಚೇರಿ ಮುಂಭಾಗದಿಂದ ಮರಗಳನ್ನು ಜೆಸಿಬಿ ಹಾಗೂ ಕಟಾವು ಮಿಷನ್ ಬಳಸಿ ಕಟಾವು ಕಾರ್ಯ ಆರಂಭಿಸಿದರು. ಬೃಹತ್ ಗಾತ್ರದ ಮರಗಳು ನೇರವಾಗಿ ರಸ್ತೆಗೇ ಉರುಳುತ್ತಿರುವುದರಿಂದ ವಾಹನ ಸವಾರರು ನಗರಕ್ಕೂ ಟಿಬಿ ವೃತ್ತಕ್ಕೂ ಸಂಚರಿಸಲು ಅನ್ಯ ಮಾರ್ಗ ಹಾಗೂ ರಸ್ತೆ ಬಂದ್ ಮಾಡಲಾಯಿತು. ಚಿತ್ರದುರ್ಗ, ಹೊಸದುರ್ಗ, ಚಳ್ಳಕೆರೆ ಕಡೆಯಿಂದ ಬಂದ ವಾಹನಗಳನ್ನು ಬೈಪಾಸ್ ರಸ್ತೆ ಮೂಲಕ ರಂಜಿತಾ ಹೋಟೆಲ್ ಮೂಲಕ ನಗರಕ್ಕೆ ಬರಲು ಸಂಪರ್ಕ ಕಲ್ಪಿಸಲಾಯಿತು. ಇನ್ನು ಹುಳಿಯಾರು, ಶಿರಾ, ತುಮಕೂರು ಕಡೆಯಿಂದ ಬಂದಂತಹ ವಾಹನಗಳು ಸರ್ಕಾರಿ ಬಸ್ ನಿಲ್ದಾಣ ತಲುಪಿ ಮರಳಿ ಬೈಪಾಸ್ ರಸ್ತೆ ಮೂಲಕ ಚಿತ್ರದುರ್ಗ, ಚಳ್ಳಕೆರೆ ಕಡೆಗೆ ತಲುಪಿದವು. ನಗರದೊಳಗೆ ಆಟೋ, ಕಾರು, ಬೈಕ್ ಸವಾರರು ಪರದಾಡುವ ಸ್ಥಿತಿ ನಿರ್ಮಾಣವಾಯಿತು. ಕೆಲವು ಸಾರ್ವಜನಿಕರು ನಡೆದೇ ನಗರ ಪ್ರವೇಶಿಸುವಂತಾಯಿತು. ರಸ್ತೆ ಅಗಲೀಕರಣದ ಬಗ್ಗೆ ಇತ್ತೀಚೆಗಷ್ಟೇ ರೋಟರಿ ಭವನದಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್, ಜಿಲ್ಲಾಧಿಕಾರಿ ಟಿ.ವೆಂಕಟೇಶ್, ನಗರಸಭೆ ಅಧಿಕಾರಿಗಳು, ವರ್ತಕರು ಹಾಗೂ ಸಾರ್ವಜನಿಕರೊಂದಿಗೆ ಸಭೆ ನಡೆಸಲಾಗಿತ್ತು. ಎಲ್ಲರೂ ಮುಕ್ತವಾಗಿ ರಸ್ತೆ ಅಗಲೀಕರಣಕ್ಕೆ ಸಮ್ಮತಿ ಸೂಚಿಸಿದ್ದರು.ರಸ್ತೆ ಅಗಲೀಕರಣಕ್ಕಾಗಿ ಅಂಗಡಿ, ಮರ ತೆರವು ಮಾಡುವ ಕಾರ್ಯಾಚರಣೆ ಶುರುವಾಗಿದ್ದು 3-4 ದಿನಗಳಲ್ಲಿ ಮುಗಿಯಲಿದೆ. ಕೆಲವರು ನಾವು ಸೂಚನೆ ನೀಡಿದ್ದರಿಂದ ಸ್ವಯಂ ಅಂಗಡಿ ತೆರವು ಮಾಡಿಕೊಂಡಿದ್ದರು. ಕೆಲವನ್ನು ನಾವೇ ತೆರವು ಮಾಡಬೇಕಾಯಿತು. ಅರಣ್ಯ, ಬೆಸ್ಕಾಂ, ಪೊಲೀಸ್ ಇಲಾಖೆ ಸಹಕಾರದಿಂದ ಮರಗಳ ಕಟಾವು ಕಾರ್ಯ ಸುಸೂತ್ರವಾಗಿ ನಡೆಯುತ್ತಿದ್ದು ಸಾರ್ವಜನಿಕರೂ ಸಹ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ.
ಎಚ್.ಮಹಂತೇಶ್, ಪೌರಾಯುಕ್ತಟ್ರಾಫಿಕ್ ಕಿರಿಕಿರಿಗೆ ದಶಕಗಳ ಕಾಲ ಬೇಸತ್ತಿದ್ದ ಜನಕ್ಕೆ ರಸ್ತೆ ಅಗಲೀಕರಣ ಕಾರ್ಯ ಶುರು ಮಾಡಿರುವುದು ಸಂತಸ ತಂದಿದೆ. ಶಾಲಾ ಮಕ್ಕಳು, ವೃದ್ಧರು, ದಿನಂಪ್ರತಿ ನಗರಕ್ಕೆ ಬರುವ ನೌಕರರು, ಕಾರ್ಮಿಕರು ಕಿರಿದಾದ ರಸ್ತೆಯಿಂದ ದಿನನಿತ್ಯ ಕಿರಿಕಿರಿ ಅನುಭವಿಸುತ್ತಿದ್ದರು. ಇದೇ ರಸ್ತೆಯಲ್ಲಿ 5-6 ಶಾಲೆಗಳು, ಸರ್ಕಾರಿ ಕಚೇರಿಗಳು, ಹೋಟೆಲ್, ಪೆಟ್ರೋಲ್ ಬಂಕ್ ಗಳಿದ್ದು ಬೆಳಗ್ಗೆ ಮತ್ತು ಸಂಜೆ ರಸ್ತೆ ದಾಟುವುದೇ ದುಸ್ತರ ಎಂಬಂತಾಗಿತ್ತು. ಆಟೋ, ಬೈಕ್ ಕಾರುಗಳವರು ಇಕ್ಕಟ್ಟಾದ ರಸ್ತೆ ದಾಟಲು ಹರಸಾಹಸ ಪಡುತ್ತಿದ್ದರು. ಸದ್ಯ ಈಗಲಾದರೂ ರಸ್ತೆ ಅಗಲೀಕರಣ ಕಾಮಗಾರಿ ಶುರುವಾಗಿದ್ದು ನಗರದ ನಾಗರಿಕರಿಗೆ ನೆಮ್ಮದಿ ತಂದಿದೆ
ಕನಕರಾಜ್ ಆಲೂರು, ಅಡಿಕೆ ವ್ಯಾಪಾರಿ.