ಕೆರೆ ದಡ ಆಟದಂತಾದ ರಸ್ತೆ ಅಗಲೀಕರಣ ಕಾಮಗಾರಿ

| Published : Sep 17 2025, 01:05 AM IST

ಸಾರಾಂಶ

ಹಿರಿಯೂರು ನಗರದ ಟಿ.ಬಿ.ವೃತ್ತದಿಂದ ತಾಲೂಕು ಕಚೇರಿವರೆಗಿನ ರಸ್ತೆ ಅಗಲೀಕರಣ ಕಾಮಗಾರಿ ನಡೆಯುತ್ತಿರುವುದು.

ರಮೇಶ್ ಬಿದರಕೆರೆ

ಕನ್ನಡಪ್ರಭ ವಾರ್ತೆ ಹಿರಿಯೂರು

ನಗರದಲ್ಲಿ ಆರಂಭಗೊಂಡಿರುವ ರಸ್ತೆ ಅಗಲೀಕರಣ ಕಾಮಗಾರಿ ಕೆರೆ ದಡ ಆಟದಂತಾಗಿದೆ. ಜಲ್ಲಿ ಹರಡಿ ರೋಲರ್ ಹೊಡೆದು ಟಾರ್ ಹಾಕಲು ರಸ್ತೆ ಸಿದ್ಧಪಡಿಸುತ್ತಾರೆ. ಆಮೇಲೆ ಎರಡೇ ದಿನಕ್ಕೆ ವಾಹನಗಳ ಸಂಚಾರದಿಂದಲೋ, ಮಳೆಯಿಂದಲೋ ಅಲ್ಲಲ್ಲಿ ಗುಂಡಿ ಬೀಳುತ್ತವೆ. ಆಗ ಮತ್ತೆ ಮತ್ತಷ್ಟು ಜಲ್ಲಿ ತಂದು ಗುಂಡಿ ಮುಚ್ಚಿ ರೋಲರ್ ಹರಿಸುತ್ತಾರೆ. ಹೀಗೆಯೇ ಈಗಾಗಲೇ ಸುಮಾರು 4-5 ಬಾರಿ ಗುಂಡಿ ಮುಚ್ಚಿದ್ದು ಕೆಲಸ ಮುಂದಕ್ಕೆ ಸಾಗುತ್ತಲೇ ಇಲ್ಲ. ಒಮ್ಮೆ ಕೆರೆ ಒಮ್ಮೆ ದಡದ ಆಟಕ್ಕೂ ನಗರದ ಮುಖ್ಯ ರಸ್ತೆಗೆ ಟಾರ್‌ ಹಾಕುವುದಕ್ಕೂ ಸರಿ ಹೋಗಿದೆ. ಆಮೆಗತಿಯಲ್ಲಿ ಕಾಮಗಾರಿ ಸಾಗುತ್ತಿದ್ದು ವಾಹನ ಸವಾರರ ಗೋಳು ಕೇಳುವವರೇ ಇಲ್ಲದಂತಾಗಿದೆ.

ರಸ್ತೆ ವಿಸ್ತರಣೆಗೆ ಹರಡಿದ ಜಲ್ಲಿಯ ಧೂಳು ವಾಹನ ಸವಾರರ ಕಣ್ಣಿಗೆ ರಾಚುತ್ತಿರುವ ಜೊತೆಗೆ ಅವಧಾನಿ ನಗರದ ಮನೆಗಳಿಗೆ ರಸ್ತೆ ಧೂಳು ಮೆತ್ತಿಕೊಳ್ಳುತ್ತಲೇ ಇದೆ. ಇನ್ನೆಷ್ಟು ದಿನಕ್ಕೆ ಈ ಕಾಮಗಾರಿ ಮುಗಿಯುತ್ತದೆ ಎಂದು ಸಾರ್ವಜನಿಕರು ಪ್ರಶ್ನಿಸುತ್ತಿದ್ದಾರೆ.

ನಗರದ ಟಿಬಿ ವೃತ್ತದಿಂದ ತಾಲೂಕು ಕಚೇರಿ ಬಳಿಯಿರುವ ವೇದಾವತಿ ನದಿ ಸೇತುವೆವರೆಗೆ ರಸ್ತೆಯ ಮದ್ಯಭಾಗದಿಂದ ಎರಡೂ ಬದಿಗಳಲ್ಲಿ 70 ಅಡಿಗಳವರೆಗೆ ರಸ್ತೆ ಅಗಲೀಕರಣ ಕಾಮಗಾರಿ ಆರಂಭಿಸಿ ಸುಮಾರು 9 ತಿಂಗಳು ಕಳೆದರೂ ಕಾಮಗಾರಿ ಮುಗಿಯುತ್ತಿಲ್ಲ.

ನಗರೋತ್ಥಾನ ಹಂತ 4ರ ಯೋಜನೆಯಲ್ಲಿ 12 ಕೋಟಿ 37 ಲಕ್ಷದ 30 ಸಾವಿರ ರು. ಅನುದಾನದ ಕಾಮಗಾರಿ ಪ್ರಗತಿಯಲ್ಲಿದ್ದು ಜೂನ್‌ 29-2024 ರಂದು ರಸ್ತೆಯ ಎರಡೂ ಬದಿಯಲ್ಲಿದ್ದ ಮರಗಳನ್ನು ಕಟಾವು ಮಾಡಲಾಗಿತ್ತು. ಅಕ್ಟೋಬರ್‌ 14-2024 ರಂದು ಜಿಲ್ಲಾ ಉಸ್ತುವಾರಿ ಸಚಿವ ಡಿ.ಸುಧಾಕರ್ ಅವರು ರಸ್ತೆ ವಿಸ್ತರಣೆ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿದ್ದರು. ಆದರೆ ಇನ್ನೂ ತೆವಳುತ್ತ ಸಾಗಿರುವ ಕಾಮಗಾರಿಯಿಂದಾಗಿ ಸಂಚಾರ ದುಸ್ತರ ಎಂಬಂತಾಗಿದೆ.

ಟಿಬಿ ಸರ್ಕಲ್‌ನಿಂದ ವೇದಾವತಿ ನದಿ ಸೇತುವೆವರೆಗೆ ಎರಡು ಬದಿಗಳಲ್ಲಿ ಚರಂಡಿ ನಿರ್ಮಾಣ ಮಾಡುತ್ತಿದ್ದು ಅದು ಸಹ ನಾನಾ ಕಾರಣಗಳಿಗೆ ಕುಂಟುತ್ತಾ ಸಾಗಿದೆ.

ಗ್ರಾಮೀಣ ಬ್ಯಾಂಕ್ ಮುಂಭಾಗದಲ್ಲಿ ಸುಮಾರು 93,60,867 ರು. ವೆಚ್ಚದಲ್ಲಿ ನಿರ್ಮಾಣವಾಗಬೇಕಿರುವ ಬ್ರಿಡ್ಜ್ ಕಾಮಗಾರಿ, ಉದಯ್ ಹೋಟೆಲ್ ಮುಂಭಾಗದಲ್ಲಿ ಚಳ್ಳಕೆರೆ ಹಾಗೂ ಡಿಆರ್‌ಡಿಒಗೆ ಹೋಗುವ ನೀರಿನ ಪೈಪ್‌ಲೈನ್ ತೆರವುಗೊಳಿಸಬೇಕಿದೆ. ವಾಣಿ ಕಾಲೇಜಿನ ಮುಂಭಾಗದಲ್ಲಿ ಆಂಜನೇಯ ಸ್ವಾಮಿ ದೇವಸ್ಥಾನವಿದ್ದು ದೇವಾಲಯ ತೆರವು ಮಾಡುವ ಬಗ್ಗೆ ಯಾವುದೇ ಸೂಚನೆ ಇಲ್ಲ. ರಸ್ತೆ ವಿಸ್ತರಣೆಯ ಕಾರಣಕ್ಕೆ ಮಣ್ಣು, ಜಲ್ಲಿ ಹರಡಿ ಕಾಮಗಾರಿಯನ್ನು ಬೇಗ ಮುಗಿಸದೆ ದಿನನಿತ್ಯ ಸಂಚರಿಸುವ ಬಸ್, ಕಾರು, ಆಟೋ, ದ್ವಿಚಕ್ರ ವಾಹನ ಸವಾರರಿಗೆ ಧೂಳು ಮತ್ತು ಇಕ್ಕಟ್ಟಾದ ರಸ್ತೆಯಿಂದ ಮುಕ್ತಿ ಯಾವಾಗ ಎಂಬಂತಾಗಿದೆ.

ನೀರಿನ ಪೈಪ್‌ಲೈನ್ ಬದಲಾವಣೆ ಮತ್ತು ಬೆಸ್ಕಾo ಕಂಬ ಬದಲಾವಣೆ ಕಾಮಗಾರಿಗಳಿಂದಾಗಿ ರಸ್ತೆ ವಿಸ್ತರಣೆ ಅವಧಿ ಹಿರಿದಾಗುತ್ತಾ ಸಾಗುತ್ತಿತ್ತು. ಇದೀಗ ಜಲ್ಲಿ ಹರಡಿ ರಸ್ತೆ ಸಮತಟ್ಟು ಮಾಡಿಕೊಂಡು ಟಾರ್ ಹಾಕುವ ಭಾಗದ ಪೈಪ್ ಲೈನ್ ಅಳವಡಿಕೆ ಕಾರ್ಯ ಮುಗಿದಿದೆ.

ಆದರೆ ಜಲ್ಲಿ ಹರಡಿ ರಸ್ತೆ ಸಮತಟ್ಟು ಮಾಡಿಕೊಂಡು ಟಾರ್ ಹಾಕುವ ಹೊತ್ತಿಗೆ ಮತ್ತೆ ವಾಹನ ಸಂಚಾರದಿಂದ ಗುಂಡಿ ಬೀಳುತ್ತವೆ. ಮತ್ತೆ ಆ ಗುಂಡಿಗಳನ್ನು ಮುಚ್ಚಿ ಸಮತಟ್ಟು ಮಾಡಿಕೊಳ್ಳಲು ಮತ್ತಷ್ಟು ದಿನ ಹೀಗೆಯೇ ತಿಂಗಳುಗಳು ಉರುಳಿ ಹೋದರು ಮುಖ್ಯ ರಸ್ತೆ ಟಾರ್ ಭಾಗ್ಯ ಕಂಡಿಲ್ಲ. ಈಗಾಗಲೇ ನೀಡಿದ ಅವಧಿಯೊಳಗೆ ಕಾಮಗಾರಿ ಮುಗಿಸಿಲ್ಲ ಎಂದು ರಸ್ತೆ ವಿಸ್ತರಣೆ ಕಾಮಗಾರಿಯ ಗುತ್ತಿಗೆದಾರರಿಗೆ ಸರ್ಕಾರದಿಂದ ದಂಡ ವಿಧಿಸಲಾಗಿದೆ.

ಟಿಬಿ ವೃತ್ತದಿಂದ ತಾಲೂಕು ಕಚೇರಿ ಬಳಿಯ ಸೇತುವೆವರೆಗೆ 950 ಮೀಟರ್ ಉದ್ದದ ರಸ್ತೆ ನಿರ್ಮಾಣಕ್ಕೆ ಇನ್ನೆಷ್ಟು ದಿನ ಬೇಕಾಗುತ್ತದೆ ಮತ್ತು ಈ ಟ್ರಾಫಿಕ್ ಮತ್ತು ಜಲ್ಲಿ ಧೂಳಿನಿಂದ ಪ್ರಯಾಣಿಕರಿಗೆ ಮುಕ್ತಿ ಎಂದು ಸಿಗುತ್ತದೆ ಎಂಬ ಸಾರ್ವಜನಿಕರ ಪ್ರಶ್ನೆಗೆ ಸಂಬಂಧಪಟ್ಟವರು ಉತ್ತರಿಸಬೇಕಿದೆ.

ಸಾರ್ವಜನಿಕರ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ

ಪೌರಾಯುಕ್ತ ಎ ವಾಸಿಂ ಪ್ರತಿಕ್ರಿಯೆ ನೀಡಿ, ಈಗಾಗಲೇ ರಸ್ತೆ ಅಗಲೀಕರಣ ಕಾಮಗಾರಿ ಶುರುವಾಗಿದ್ದು ಟಿಬಿ ವೃತ್ತದಿಂದ ತಾಲೂಕು ಕಚೇರಿವರೆಗೆ ಚರಂಡಿ ಕಾಮಗಾರಿ ಮುಗಿದಿದೆ. ನೀರಿನ ಪೈಪ್‌ಲೈನ್ ಸ್ಥಳಾಂತರ ಮಾಡುವ ಕೆಲಸವೂ ಆಗಿದ್ದು ಉದಯ್ ಹೋಟೆಲ್ ಮುಂಭಾಗವಿರುವ ಚಳ್ಳಕೆರೆ ಮತ್ತು ಡಿಆರ್‌ಡಿಒ ಗೆ ಹೋಗುವ ಪೈಪ್‌ಲೈನ್ ಬದಲಾಯಿಸಬೇಕಿದೆ. ವಿದ್ಯುತ್ ಕಂಬ ಸ್ಥಳಾಂತರ ಕೆಲಸ ಮುಗಿದಿದೆ. ಶೀಘ್ರ ಟಾರ್ ಎಳೆಯಲಾಗುವುದು. ಮಾನ್ಯ ಸಚಿವರು ಪೈಪ್‌ಲೈನ್ ಸ್ಥಳಾಂತರ ಬಗ್ಗೆ ಕೆಯುಡಬ್ಲ್ಯೂಎಸ್‌ಡಿಬಿ ಗೆ ಕಟ್ಟುನಿಟ್ಟಿನ ಸೂಚನೆ ನೀಡಿ ತುರ್ತಾಗಿ ಕ್ರಮ ಕೈಗೊಳ್ಳಲು ಸೂಚಿಸಿದ್ದಾರೆ. ಸಾರ್ವಜನಿಕರ ಸುಗಮ ಸಂಚಾರಕ್ಕೆ ಸೂಕ್ತ ವ್ಯವಸ್ಥೆ ಮಾಡಲಾಗುವುದು ಎಂದರು.