ಸಾರಾಂಶ
ಕನ್ನಡಪ್ರಭ ವಾರ್ತೆ ಮಧುಗಿರಿ
ಪಟ್ಟಣದಲ್ಲಿ ಅಲ್ಪಸಂಖ್ಯಾತರು ವಾಸಿಸುವ ಕಾಲೋನಿಗಳಲ್ಲಿ ಗುಣಮಟ್ಟದ ರಸ್ತೆ ,ಚರಂಡಿ ನಿರ್ಮಾಣಕ್ಕೆ 5 ಕೋಟಿ ರು. ಸರ್ಕಾರದಿಂದ ಬಿಡುಗಡೆಯಾಗಿದ್ದು ಈ ಪೈಕಿ ಗ್ರಾಮೀಣ ಪ್ರದೇಶಕ್ಕೆ 1.50 ಕೋಟಿ, ಪಟ್ಟಣದ ನಿವಾಸಿಗಳಿಗೆ 3.50 ಕೋಟಿ ರು.ವೆಚ್ಚದಲ್ಲಿ ಕಾಮಗಾರಿ ಮಾಡಲಾಗುವುದು. ರಸ್ತೆ, ಚರಂಡಿ ಮಾಡುವಾಗ ಸಾರ್ವಜನಿಕರು ಸಹಕರಿಸಬೇಕು ಎಂದು ಎಂಎಲ್‌ಸಿ ಆರ್. ರಾಜೇಂದ್ರ ತಿಳಿಸಿದರು.ಶುಕ್ರವಾರ ಪಟ್ಟಣದ ಪಾವಗಡ ವೃತ್ತದಲ್ಲಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಡಿ ಕೈಗೊಳ್ಳುತ್ತಿರುವ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಗುದ್ದಲಿ ಪೂಜೆ ನೆರವೇರಿಸಿ ಮಾತನಾಡಿದರು.
ಸಹಕಾರ ಸಚಿವ ಕೆ.ನ್.ರಾಜಣ್ಣ ಮತ್ತು ಸಚಿವ ಜಮೀರ್ ಅಹಮದ್ ಅವರ ಸಹಕಾರದಿಂದ ಹಣ ಬಿಡುಗಡೆಯಾಗಿದ್ದು, ನಗರದಲ್ಲಿ ಹೆಚ್ಚು ಮುಸಲ್ಮಾನರು ವಾಸಿಸುವ ಪ್ರದೇಶಗಳಲ್ಲಿ ರಸ್ತೆ, ಚರಂಡಿ ಗುಣಮಟ್ಟದಲ್ಲಿ ನಿರ್ಮಾಣ ಮಾಡಬೇಕು. ವಾರ್ಡಗಳಲ್ಲಿ ಕಾಮಗಾರಿ ಮಾಡುವಾಗ ಸಾರ್ವಜನಿಕರು ಸಹಕರಿಸಬೇಕು. ಈ ಸಂದರ್ಭದಲ್ಲಿ ವಾರ್ಡನ ಸದಸ್ಯರು ಸ್ಥಳದಲ್ಲಿದ್ದು ಗುಣ ಮಟ್ಟದ ಕಾಮಗಾರಿ ಮಾಡಲು ಮುತುವರ್ಜಿ ವಹಿಸಬೇಕು. ನೀರಿನ ಪೈಪ್ ಲೈನ್‌ಗಳು ಭೂಮಿಯಲ್ಲಿದ್ದು ಅವುಗಳಿಗೆ ಹಾನಿಯಾಗದಂತೆ ಮತ್ತು ನಾಗರಿಕರಿಗೆ ತೊಂದರೆ ಆಗದಂತೆ ಗುತ್ತಿಗೆದಾರರು ಮತ್ತು ಅಧಿಕಾರಿಗಳು ನೋಡಿಕೊಂಡು ಕೆಲಸ ಮಾಡುವಂತೆ ಸೂಚಿಸಿದರು.ಪ್ರತಿ ವರ್ಷ ಗಣಪತಿ ಕೂರಿಸಲು 25 ಲಕ್ಷ ರು. ವೆಚ್ಚದಲ್ಲಿ ಶಾಶ್ವತ ಗಣಪತಿ ಪೆಂಡಾಲ್ ನಿರ್ಮಿಸಿ ಗಣಪತಿ ಪ್ರತಿಷ್ಠಾಪಿಸಲು ಶೆಡ್ ನಿರ್ಮಾಣದ ಸಿದ್ಧತೆ ನಡೆದಿದೆ. ಅತೀ ಶೀಘ್ರದ್ಲಲೇ ಕಾಮಗಾರಿ ಪ್ರಾರಂಭವಾಗಿ ಗಣಪತಿಯನ್ನು ಈ ಸಲದಿಂದ ಇಲ್ಲೇ ಕೂರಿಸಲು ಸಿದ್ಧತೆ ನಡೆಸುವಂತೆ ಸೂಚಿಸಿದ ಅವರು, ಗಣಪತಿ ಹಬ್ಬವನ್ನು ಜನರು ಅದ್ಧೂರಿಯಾಗಿ ಆಚರಿಸಲು ಉತ್ಸುಕತೆ ತೋರುತ್ತಿದ್ದು, ಜನತೆ ಪಟ್ಟಣದ ಹೃದಯ ಭಾಗದಲ್ಲಿರುವ ಶ್ರೀ ಮಲ್ಲೇಶ್ವರಸ್ವಾಮಿ ಮತ್ತು ಶ್ರೀವೆಂಕಟರಮಣಸ್ವಾಮಿ ಈ ದೇಗುಲಗಳ ನಡುವೆ ಇರುವ ಜಾಗದಲ್ಲಿ ಶಾಶ್ವತ ಶಡ್ ನಿರ್ಮಾಣ ಮಾಡಲು ಸಂಬಂಧಪಟ್ಟವರಿಗೆ ಸೂಚಿಸಿದರು.
ಜನಾಕರ್ಷಣೆ ಮತ್ತು ಭಕ್ತಿಭಾವ ಪ್ರದರ್ಶನ ,ಉತ್ಸಾಹ ಧಾರ್ಮಿಕ ಆಚರಣೆ ಮಾಡಲು ಇದು ಉಪಯುಕ್ತ ಸ್ಥಳವಾಗಿದ್ದು, ಇದರಿಂದ ಶಾಶ್ವತ ಪೆಂಡಾಲ್ ನಿರ್ಮಾಣದಿಂದ ಪ್ರತಿ ವರ್ಷ ರೂಪಿಸಬೇಕಾದ ಗಣಪತಿ ಪೆಂಡ್‌ಲನ ವೆಚ್ಚ ಕಡಿಮೆಯಾಗಲಿದೆ. ಗಣೇಶೋತ್ಸವದ ದಿನ ಇದೇ ಜಾಗದಲ್ಲಿ ಗಣಪತಿ ಪ್ರತಿಷ್ಠಾಪಿಸಲು ಶೆಡ್ ನಿರ್ಮಿಸುವಂತೆ ಸೂಚಿಸಿದರು.ಕಾರ್ಯಕ್ರಮದಲ್ಲಿ ಪುರಸಭೆ ಅಧ್ಯಕ್ಷ ಲಾಲಪೇಟೆ ಮಂಜುನಾಥ್,ಮಾಜಿ ಅಧ್ಯಕ್ಷ ಎಂ.ಕೆ.ನಂಜುಂಡರಾಜು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗೋಪಾಲಯ್ಯ, ಪುರಸಭಾ ಮುಖ್ಯಾಧಿಕಾರಿ ಸುರೇಶ್, ತಾಪಂ ಅಭಿವೃದ್ಧಿ ಅಧಿಕಾರಿ ಮಧುಸೂದನ್, ಪುರಸಬೆ ಸದಸ್ಯರಾದ ಮಂಜುನಾಥ್ ಆಚಾರ್, ಎಂ.ವಿ.ಗೋವಿಂದರಾಜು, ಎಂ.ಶ್ರೀಧರ್, ಮುಖಂಡರಾದ ಬಾಬಣ್ಣ, ಆಲೀಮ್,ಸಾಧಿಕ್,ಉಮೇಶ್ ಸೇರಿದಂತೆ ಅನೇಕರು ಇದ್ದರು.