ಸಾರಾಂಶ
ಕನ್ನಡಪ್ರಭ ವಾರ್ತೆ ಶಿರಾ ಶಿರಾ ನಗರದ ಕಸ್ತೂರಿ ರಂಗಪ್ಪನಾಯಕನ ಕೋಟೆ ಹಾಗೂ ಕಂದಕಕ್ಕೆ ಹೊಂದಿಕೊಂಡಂತೆ ಇರುವ ಎಚ್.ಎಂ.ಎಸ್ ಮೈದಾನಕ್ಕೆ ನಗರಸಭೆ ವತಿಯಿಂದ ಸಿಸಿ ರಸ್ತೆ ಮತ್ತು ಚರಂಡಿ ನಿರ್ಮಾಣ ಕಾಮಗಾರಿ ಮಾಡುತ್ತಿದ್ದು ಕೂಡಲೇ ಕಾಮಗಾರಿ ನಿಲ್ಲಿಸಬೇಕೆಂದು ಪ್ರಾಚ್ಯವಸ್ತು ಮತ್ತು ಸ್ಮಾರಕಗಳ ಸಂರಕ್ಷಣಾ ಸಂಸ್ಥೆ ಸಂಚಾಲಕ ಡಾ.ಎಸ್.ಆರ್.ರಮೇಶ್ ಒತ್ತಾಯಿಸಿದ್ದಾರೆ. ಅವರು ನಗರದ ಪ್ರವಾಸಿ ಮಂದಿರದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದರು. ಮುಖ್ಯಮಂತ್ರಿಗಳ ಅಮೃತ ನಗರೋತ್ಥಾನ ಯೋಜನೆಯ ನಾಲ್ಕನೇ ಹಂತದಲ್ಲಿ ಶಿರಾ ನಗರಸಭೆಯ ಬದಲಿ ಕಾಮಗಾರಿಗಳ ಕ್ರಿಯಾ ಯೋಜನೆಗೆ ಅನುಮೋದನೆ ಪಡೆದು 2024-25ನೇ ಸಾಲಿನ 15ನೇ ಹಣಕಾಸು ಆಯೋಗ ಮೂಲ ಅನುದಾನದಲ್ಲಿ ಹಂಚಿಕೆಯಾಗಿರುವ ಮೊತ್ತಕ್ಕೆ ನಗರಸಭೆ ವತಿಯಿಂದ ಕ್ರಿಯಾ ಯೋಜನೆ ರೂಪಿಸಿ 15ನೇ ವಾರ್ಡಿ ನಗರಸಭಾ ಸದಸ್ಯರ ಪತಿಯವರು ಚಂದ್ರಣ್ಣ ಎಂಬ ಗುತ್ತಿಗೆದಾರನ ಹೆಸರಿನಲ್ಲಿ ನಗರಸಭೆಯ ಕಾರ್ಯಾದೇಶ ಪಡೆಯದೆ ಶ್ರೀ ಕಸ್ತೂರಿ ರಂಗಪ್ಪನಾಯಕನ ಕೋಟೆಯ ಹಾಗೂ ಕಂದಕದ ಸಂರಕ್ಷಿಸಲ್ಪಟ್ಟ ನಿಷೇಧಿತ ಪ್ರದೇಶದಲ್ಲಿ ಅತಿಕ್ರಮ ಪ್ರವೇಶ ಮಾಡಿ ನೆಲ ಹಗೆದು ಕಾಮಗಾರಿ ಮಾಡುತ್ತಿದ್ದು, ಕೂಡಲೇ ಇವರ ಮೇಲೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು ಎಂದು ಪೊಲೀಸ್ ಇಲಾಖೆಗೆ ಮನವಿ ಸಲ್ಲಿಸಿರುವುದಾಗಿ ತಿಳಿಸಿದರು. ಕಸ್ತೂರಿ ರಂಗಪ್ಪನಾಯಕನ ಕೋಟೆಯನ್ನು ಜನಪ್ರತಿನಿಧಿಗಳು, ಮುಖಂಡರು, ನಗರಸಭಾ ಸದಸ್ಯರು ಕೇವಲ ವಾಲ್ಮೀಕಿ ಜಯಂತಿಗೆ ಸೀಮಿತಗೊಳಿಸದೆ ಕೋಟೆಯನ್ನು ಸಂರಕ್ಷಣೆ ಮಾಡಲು ಕೈಜೋಡಿಸಿ ಸಹಕರಿಸಬೇಕೆಂದು ಮನವಿ ಮಾಡಿದರು.