ಸಾರಾಂಶ
ಕನ್ನಡಪ್ರಭ ವಾರ್ತೆ ಚಾಮರಾಜನಗರ ರೈತ ವಿರೋಧಿ ಕಾನೂನುಗಳನ್ನು ವಾಪಸ್ ಪಡೆಯುವಂತೆ ಹಾಗೂ ಜಿಲ್ಲೆಯ ವಿವಿಧ ಸಮಸ್ಯೆಗಳನ್ನು ಈಡೇರಿಸುವಂತೆ ಆಗ್ರಹಿಸಿ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಜಿಲ್ಲಾ ಘಟಕದ ವತಿಯಿಂದ ನಗರದಲ್ಲಿ ಹೆದ್ದಾರಿ ತಡೆದು ಪ್ರತಿಭಟನೆ ನಡೆಸಲಾಯಿತು.
ರಾಷ್ಟ್ರೀಯ ಹೆದ್ದಾರಿ ೨೦೯ ನಗರದ ಸಂತೆಮರಹಳ್ಳಿ ರಸ್ತೆಯಲ್ಲಿರುವ ಜಾಲಹಳ್ಳಿಹುಂಡಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು. ಕೇಂದ್ರ, ರಾಜ್ಯ ಸರ್ಕಾರಗಳ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.ಪ್ರಾರಂಭದಲ್ಲಿ ಹುತಾತ್ಮ ರೈತರಿಗೆ ಮೌನಾಚರಣೆ ಮಾಡಿ, ನಂತರ ಸಂವಿಧಾನ ಪೀಠಿಕೆಯನ್ನು ಓದಿ, ಆನಂತರ ರಸ್ತೆ ತಡೆ ನಡೆಸಿದರು.
ಈ ವೇಳೆ ರೈತ ಸಂಘದ ಜಿಲ್ಲಾಧ್ಯಕ್ಷ ಹೊನ್ನೂರು ಪ್ರಕಾಶ್ ಮಾತನಾಡಿ, ಕೇಂದ್ರ ಸರ್ಕಾರ ಈ ಹಿಂದೆ ರೈತ ಹೋರಾಟದ ಸಮಯದಲ್ಲಿ ಮೂರು ಕೃಷಿ ಕಾಯ್ದೆಗಳನ್ನು ವಾಪಸ್ ಪಡೆಯುತ್ತೇವೆಂದು ಭರವಸೆ ನೀಡಿತ್ತು. ಆದರೆ, ಇಲ್ಲಿಯ ತನಕ ವಾಪಸ್ ಪಡೆದಿಲ್ಲ ತಕ್ಷಣ ವಾಪಸ್ ಪಡೆಯಬೇಕು ಎಂದು ಒತ್ತಾಯಿಸಿದರು.ಎಂಎಸ್‌ಪಿಯನ್ನು ಜಾರಿಗೊಳಿಸಿ ಕಾನೂನು ವ್ಯಾಪ್ತಿಗೆ ಒಳಪಡಿಬೇಕು. ಎಂ.ಎಸ್.ಸ್ವಾಮಿನಾಥನ್ ವರದಿಯನ್ನು ಜಾರಿಗೊಳಿಸಬೇಕು, ವಿದ್ಯುತ್ ಖಾಸಗೀಕರಣಗೊಳಿಸಬಾರದು, ಡಬ್ಲೂಟಿಒ ವ್ಯಾಪ್ತಿಗೆ ಕೃಷಿಯನ್ನು ತರಬಾರದು, ಇದನ್ನು ತಂದರೆ ರೈತರು ಗುಲಾಮಗಿರಿಗೆ ಹೋಗಬೇಕಾಗುತ್ತದೆ ಎಂದು ಎಚ್ಚರಿಸಿದರು.
ಜಿಲ್ಲೆಯ ಹಲವು ಗ್ರಾಮಗಳಿಗೆ ಜೀವ ಸಂಪರ್ಕವಿಲ್ಲ. ಇದರಿಂದ ಜನರು ಒಂದು ಕಡೆಯಿಂದ ಮತ್ತೊಂದು ಕಡೆಗೆ ಹೋಗಲು ತೊಂದರೆಯಾಗುತ್ತಿದೆ. ಕೊಳ್ಳೇಗಾಲದಿಂದ ಮುಳ್ಳೂರು ಮಾರ್ಗವಾಗಿ ಮೈಸೂರಿಗೆ ಬಸ್‌ಗಳನ್ನು. ಓಡಿಸಬೇಕು. ಎಲ್ಲೇಮಾಳದಿಂದ ಡಿ.ಎಂ.ಸಮುದ್ರದ ಮಾರ್ಗವಾಗಿ ತೋಮಿಯಾರ್‌ಪಾಳ್ಯಕ್ಕೆ, ವಡಕೆಹಳ್ಳದಿಂದ ಮಾರ್ಟಳ್ಳಿಗೆ, ಗುಂಡ್ಲುಪೇಟೆಯ ಬೇಗೂರಿನಿಂದ ಬೆಟ್ಟದ ಮಾದಹಳ್ಳಿಗೆ, ಬೇಗೂರಿನಿಂದ ಯಡವನಹಳ್ಳಿ ಹೊಸಪುರ ಸೇರಿದಂತೆ ಇತರೆ ಕಡೆ ಸಾರಿಗೆ ಬಸ್‌ಗಳನ್ನು ಬಿಡಬೇಕು ಎಂದು ಒತ್ತಾಯಿಸಿದರು.ಹನೂರು ತಾಲೂಕಿನ ಮಾರ್ಟಳ್ಳಿ ಗ್ರಾಪಂ ಕಡಬೂರು ಗ್ರಾಮ, ಕೆಂಚಯ್ಯನದೊಡ್ಡಿ, ಕೆವಿಎನ್ ದೊಡ್ಡಿ, ಬೂದುಗುಪ್ಪೆ, ಗಾಂಧಿನಗರ ಗ್ರಾಮಗಳಲ್ಲಿ ನ್ಯಾಯಬೆಲೆ ಅಂಗಡಿ ಸ್ಥಾಪನೆ ಮಾಡಬೇಕು. ಸಮರ್ಪಕವಾಗಿ ಪಡಿತರ ವಿತರಣೆಯಾಗುವಂತೆ ಕ್ರಮವಹಿಸಬೇಕು ಎಂದು ಆಗ್ರಹಿಸಿದರು.
ಸ್ಥಳೀಯ ಸಮಸೈಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಥಳಕ್ಕೆ ಬಂದು ಉತ್ತರಿಸಬೇಕು, ಸಮಸ್ಯೆ ನೀಗಿಸುವ ನಿಟ್ಟಿನಲ್ಲಿ ಕ್ರಮವಹಿಸಬೇಕು ಎಂದು ಒತ್ತಾಯಿಸಿದರು.ರಸ್ತೆ ತಡೆಯಿಂದ ಕೆಲಕಾಲ ಸಂಚಾರದಲ್ಲಿ ಅಸ್ತವ್ಯಸ್ತವಾಯಿತು, ನಂತರ ಪೊಲೀಸರು ಮಾತುಕತೆ ನಡೆಸಿ ಸುಗಮ ಸಂಚಾರಕ್ಕೆ ವ್ಯವಸ್ಥೆ ಮಾಡಿತ್ತು, ಕೆಲ ಅಧಿಕಾರಿಗಳು ಬಂದು ಸಮಸ್ಯೆಗಳನ್ನು ಆಲಿಸಿದರು.
ಪ್ರತಿಭಟನೆಯಲ್ಲಿ, ಕರಿಯಪ್ಪ, ಶಿವಣ್ಣ, ನಟರಾಜು, ಮೂರ್ತಿ, ಜಗದೀಶ್, ನಾರಾಯಣ, ಶ್ರೀನಿವಾಸ, ಚಂದ್ರಶೇಖರ್, ನಾಗರಾಜು, ಶಂಕರ್, ಮುನಿಯಪ್ಪ, ಮಲ್ಲಯ್ಯ, ನಿರಂಜನಮೂರ್ತಿ, ಇತರರು ಭಾಗವಹಿಸಿದ್ದರು.