ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ರಸ್ತೆ ತಡೆ

| Published : Aug 02 2025, 12:00 AM IST

ಸಾರಾಂಶ

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದಲ್ಲದೇ ಈ ಕೂಡಲೇ ಯೋಜನೆ ಅನುಷ್ಠಾನಕ್ಕೆ ಸರ್ಕಾರಗಳು ಕ್ರಮವಹಿಸಬೇಕು

ಹುಬ್ಬಳ್ಳಿ: ಮಹದಾಯಿ ಮತ್ತು ಕಳಸಾ-ಬಂಡೂರಿ ಯೋಜನೆ ಜಾರಿಗಾಗಿ ಕರ್ನಾಟಕ ಕಳಸಾ ಬಂಡೂರಿ ರೈತ ಹೋರಾಟ ಸಮಿತಿ ಪದಾಧಿಕಾರಿಗಳು ಶುಕ್ರವಾರ ರಸ್ತೆ ತಡೆ ನಡೆಸಿದರು.

ಯೋಜನೆ ಅನುಷ್ಠಾನಕ್ಕೆ ಆಗ್ರಹಿಸಿ ಸರ್.ಸಿದ್ದಪ್ಪ ಕಂಬಳಿ ಪ್ರತಿಮೆ ಬಳಿ ರೈತರು ನಡೆಸುತ್ತಿರುವ ಧರಣಿ ಸತ್ಯಾಗ್ರಹ 2ನೇ ದಿನಕ್ಕೆ ಕಾಲಿಟ್ಟಿದ್ದು, ಶುಕ್ರವಾರ ನವಲಗುಂದದಿಂದ ಆಗಮಿಸಿದ್ದ ರೈತ ಹೋರಾಟಗಾರರು ರಸ್ತೆ ತಡೆದು ಪ್ರತಿಭಟನೆ ನಡೆಸಿದರು.

ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದಲ್ಲದೇ ಈ ಕೂಡಲೇ ಯೋಜನೆ ಅನುಷ್ಠಾನಕ್ಕೆ ಸರ್ಕಾರಗಳು ಕ್ರಮವಹಿಸಬೇಕು ಎಂದು ಆಗ್ರಹಿಸಿದರು.

ರಸ್ತೆ ತಡೆದಿದ್ದರಿಂದ ಕೆಲ ಕಾಲ ಪಾಲಿಕೆ ಎದುರು ವಾಹನದಟ್ಟನೆ ಉಂಟಾಗಿತ್ತು. ಈ ವೇಳೆ ಪೊಲೀಸರು ಮನವೊಲಿಸಿದ ಬಳಿಕ ಹೋರಾಟಗಾರರು ರಸ್ತೆ ತಡೆ ಹಿಂಪಡೆದು ಧರಣಿ ಮುಂದುವರಿಸಿದರು.

ಮಹದಾಯಿ ಯೋಜನೆಗೆ ಗೋವಾ ತಕರಾರು ಮಾಡುವ ಮೂಲಕ ಅನುಷ್ಠಾನದಲ್ಲಿ ವಿನಾಕಾರಣ ಕಾಲಹರಣ ಮಾಡಲಾಗುತ್ತಿದೆ. ಇದರಿಂದ ಈ ಭಾಗದ ಜನರಿಗೆ ಕುಡಿಯುವ ನೀರಿನ ಯೋಜನೆ ಕುಂಠಿತವಾಗುತ್ತಿದೆ. ಗೋವಾ ಜನಪ್ರತಿನಿಧಿಗಳು ಪದೇ ಪದೆ ಕ್ಯಾತೆ ತೆಗೆಯುತ್ತಿದ್ದಾರೆ. ನ್ಯಾಯಾಧೀಕರಣ ತೀರ್ಪು ಎತ್ತಿ ಹಿಡಿದು ರಾಜ್ಯಕ್ಕೆ ಬರಬೇಕಾದ ೧೩.೦೭ಟಿಎಂಸಿ ನೀರನ್ನು ಬಿಡುಗಡೆಗೊಳಿಸಬೇಕು ಎಂದು ಆಗ್ರಹಿಸಿದರು.

ಕಳಸಾ -ಬಂಡೂರಿ ರೈತ ಹೋರಾಟ ಸಮಿತಿ ಅಧ್ಯಕ್ಷ ಸಿದ್ದಣ್ಣ ತೇಜಿ, ರೈತ ಹೋರಾಟಗಾರರಾದ ಲೋಕನಾಥ ಹೆಬಸೂರು, ಬಾಬಾಜಾನ ಮುಧೋಳ, ಬಿ.ಎಂ. ಹನಸಿ, ಬಿ.ಎಸ್. ಸೊಪ್ಪಿನ, ರವಿರಾಜ ಕಂಬಳಿ, ಕಿಶೋರ ಮಿಠಾರಿ, ಶೋಭಾ ಕಮತರ, ಬಿ.ಎ. ಮುಧೋಳ, ಯೂಸೂಫ್ ಬಳ್ಳಾರಿ, ಎಸ್.ಬಿ.ಪಾಟೀಲ ಸೇರಿದಂತೆ ಇತರರು ಇದ್ದರು.