ಸಾರಾಂಶ
ಕನ್ನಡಪ್ರಭ ವಾರ್ತೆ ಶ್ರೀರಂಗಪಟ್ಟಣ
ಕೆಆರ್‌ಎಸ್ ಅಣೆಕಟ್ಟೆ ವ್ಯಾಪ್ತಿ ಟ್ರಯಲ್ ಬ್ಲಾಸ್ಟ್ ನಡೆಸುವುದನ್ನು ವಿರೋಧಿಸಿ ಭೂಮಿತಾಯಿ ಹೋರಾಟ ಸಮಿತಿ ಕಾರ್ಯಕರ್ತರು ಹಾಗೂ ರೈತರು ಪಟ್ಟಣದಲ್ಲಿ ಪ್ರತಿಭಟನೆ ನಡೆಸಿದರು.ಪಟ್ಟಣದ ಕುವೆಂಪು ವೃತ್ತದ ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಭೂಮಿತಾಯಿ ಹೋರಾಟ ಸಮಿತಿ ಅಧ್ಯಕ್ಷ ಬಿ.ಸಿ ಕೃಷ್ಣೇಗೌಡ ನೇತೃತ್ವದಲ್ಲಿ ನೂರಾರು ಕಾರ್ಯಕರ್ತರು ಹಾಗೂ ರೈತರು ಮಾನವ ಸರಪಣಿ ನಿರ್ಮಿಸಿ ಕೆಲ ಕಾಲ ರಸ್ತೆ ತಡೆ ನಡೆಸಿ, ರಾಜ್ಯ ಸರ್ಕಾರ, ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಹಾಗೂ ಜಿಲ್ಲೆಯ ಶಾಸಕರುಗಳ ವಿರುದ್ಧ ಘೋಷಣೆ ಕೂಗಿದರು.
ಈ ವೇಳೆ ಮಾತನಾಡಿದ ರೈತ ಮುಖಂಡ ಕೆ.ಎಸ್ ನಂಜುಂಡೇಗೌಡ, ಕೆಆರ್‌ಎಸ್ ಅಣೆಕಟ್ಟೆ ಶಿಥಿಲಗೊಳ್ಳುವ ಆಂತಕದಿಂದ ಭದ್ರತೆಗೆ ಮುಂದಾಗುವಂತೆ ವಿಶ್ವಮಟ್ಟದ ಸಮೀಕ್ಷೆ ನಡೆಸಿ ಸೂಚನೆ ಕೊಟ್ಟಿದೆ. ರಾಜ್ಯ ಸರ್ಕಾರ ಹಾಗೂ ಜಿಲ್ಲಾಡಳಿತ ಅಕ್ರಮ ಗಣಿಗಾರಿಕೆ ಜೊತೆ ಶಾಮೀಲಾಗಿದೆ ಟ್ರಯಲ್ ಬ್ಲಾಸ್ಟ್ ಮುಂದಾಗಿದೆ ಎಂದು ಆರೋಪಿಸಿದರು.ರಾಜ್ಯದ ಕೋಲಾರದಲ್ಲಿ ನುರಿತ ತಜ್ಞರಿದ್ದರೂ ಸಹ ದೂರದ ಜಾರ್ಖಾಂಡ್‌ನಿಂದ ತಜ್ಞರ ಕರೆಸಿ ಟ್ರಯಲ್ ಬ್ಲಾಸ್ಟ್ ನಡೆಸುವ ಮೂಲಕ ಇವರುಗಳಿಗೆ ಪೂರಕವಾದ ವರದಿ ಪಡೆಯಲು ಈ ಹುನ್ನಾರ ನಡೆಸುತ್ತಿದ್ದಾರೆ ಎಂದು ದೂರಿದರು.
ಕನ್ನಂಬಾಡಿಗೆ ಅಣೆಕಟ್ಟೆ ಜಿಲ್ಲೆ ಜೀವನಾಡಿಯಾಗಿದೆ. ವಿಶ್ವಮಟ್ಟದ ಕೆಆರ್‌ಎಸ್ ಅಣೆಕಟ್ಟೆ ಸಮೀಕ್ಷೆ ನಡೆಸಿ ಅಣೆಕಟ್ಟೆ ಶಿಥಿಲಗೊಂಡಿರುವ ವರದಿ ನೀಡಿದ್ದರೂ ಸಹ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್. ಚಲುವರಾಯಸ್ವಾಮಿ ಹಾಗೂ ರಾಜ್ಯದ ರಾಜ್ಯ ಸರ್ಕಾರ ಅಣೆಕಟ್ಟೆ ವಿಷಯದಲ್ಲಿ ಜಲ್ಲಾಟವಾಡುತ್ತಿದ್ದಾರೆ ಎಂದು ಕಿಡಿಕಾರಿದರು.ಜಿಲ್ಲಾಡಳಿತ ಹಾಗೂ ರಾಜ್ಯ ಸರ್ಕಾರ ಅಕ್ರಮ ಗಣಿಗಾರಿಕೆ ಶಾಮೀಲಾಗಿ ಟ್ರಯಲ್ ಬ್ಲಾಸ್ಟ್ ಮಾಡುವ ಮೂಲಕ ಅಣೆಕಟ್ಟೆಗೆ ತೊಂದರೆಯಾಗಬಹುದೇ ಎಂದು ನೋಡಲು ಹೊರಟಿದ್ದಾರೆ. ಟ್ರಯಲ್ ಬ್ಲಾಸ್ಟ್‌ನಿಂದ ಅಣೆಕಟ್ಟೆ ಗಟ್ಟಿಗೊಳ್ಳುವುದಿದ್ದರೆ ಮಾಡಲಿ, ನಮ್ಮಗಳ ಅಭ್ಯಂತರವೇನು ಇಲ್ಲ. ಆದರೆ, ಅಣೆಕಟ್ಟೆ ವಿಷಯದಲ್ಲಿ ಚೆಲ್ಲಾಟವಾಡಿದರೆ ಜಿಲ್ಲೆಯ ರೈತರು ಜನಸಾಮಾನ್ಯರು ಸ್ವಯಂ ಪ್ರೇರಿತರಾಗಿ ದಂಗೆ ಎದ್ದು ಬೀದಿಗೆ ಬಂದರೆ ನಿಮ್ಮನ್ನ ರಸ್ತೆಯಲ್ಲಿ ಓಡಾಡಲು ಬಿಡುವುದಿಲ್ಲ ಎಂದು ಎಚ್ಚರಿಕೆ ನೀಡಿದರು.
ಈ ವೇಳೆ ಕಾರ್ಯದರ್ಶಿಗಳಾದ ಎಂ.ವಿ ಕೃಷ್ಣ, ದರ್ಶನ್, ಉಪಾಧ್ಯಕ್ಷ ಜಯರಾಮೇಗೌಡ, ಜಗದೀಶ್, ಗಂಜಾಂ ಮರಿಯಪ್ಪ, ಸಂಚಾಲಕರಾದ ಹಳುವಾಡಿ ನಾಗೇಂದ್ರ, ಕೆ.ಪಿ ಬಾಬು, ಸಂಘಟಕಾ ಕಾರ್ಯದರ್ಶಿಗಳಾದ ಶಿವರಾಜು, ಮಾಲಿಂಗು, ಪಾಲಹಳ್ಳಿ ರಾಮಚಂದ್ರು, ಗ್ರಾಪಂ ಮಾಜಿ ಅಧ್ಯಕ್ಷ ರವಿ, ಲಕ್ಷ್ಮಣ, ಮಾರಸಿಂಗಹಳ್ಳಿ ತಿಮ್ಮೇಗೌಡ, ಡಿ.ಎಂ.ಮಹೇಶ್, ಬಿ.ಟಿ ಮಹೇಶ್ ಸೇರಿದಂತೆ ಇತರರು ಇದ್ದರು.