೨೦೨೬ರ ನೂತನ ವರ್ಷದ ಮೊದಲ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲಾ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹಾಗಾಗಿ ಸೊರಬ-ಶಿರಾಳಕೊಪ್ಪ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.

ಸೊರಬ: ೨೦೨೬ರ ನೂತನ ವರ್ಷದ ಮೊದಲ ತಿಂಗಳ ಅಂತ್ಯದೊಳಗೆ ರಾಜ್ಯದ ಎಲ್ಲಾ ರಸ್ತೆಗಳನ್ನು ಗುಂಡಿಮುಕ್ತಗೊಳಿಸುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ. ಹಾಗಾಗಿ ಸೊರಬ-ಶಿರಾಳಕೊಪ್ಪ ರಸ್ತೆ ಕಾಮಗಾರಿಯನ್ನು ಶೀಘ್ರದಲ್ಲಿಯೇ ಪೂರ್ಣಗೊಳಿಸಲಾಗುವುದು ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದರು.ಪಟ್ಟಣದ ಬಂಗಾರಧಾಮದ ಆವರಣದಲ್ಲಿ ಸೊರಬ ತಾಲೂಕಿನ ಕರಡಿಗೆರೆ, ಜಂಬೆಹಳ್ಳಿ, ಕಂತನಹಳ್ಳಿ, ಗುಡವಿ, ಬಳ್ಳಿಬೈಲು, ದುಗ್ಲಿಹೊಸೂರು, ಸಂಪಗೋಡು, ನೆರೂರು ಮಾರ್ಗದ ಗ್ರಾಮೀಣ ಕೆಎಸ್‌ಆರ್‌ಟಿಸಿ ಬಸ್ ಸಂಚಾರಕ್ಕೆ ಚಾಲನೆ ನೀಡಿ ಮಾತನಾಡಿದರು.ಸೊರಬ ಕ್ಷೇತ್ರದ ಅಭಿವೃದ್ಧಿ ಕಾರ್ಯಕ್ಕೆ ಸರ್ಕಾರದಿಂದ ೫೦ ಕೋಟಿ ರು.ಗಳು ಬಿಡುಗಡೆಯಾಗಿದ್ದು, ೪೫ ಕೋಟಿ ರು.ಗಳನ್ನು ರಸ್ತೆ ಅಭಿವೃದ್ಧಿ ಕಾಮಗಾರಿಗೆ ಬಳಸಲಾಗುವುದು. ಈಗಾಗಲೇ ಕಾಮಗಾರಿ ಆರಂಭಿಸಲಾಗಿದೆ. ಅಧಿಕಾರಿಗಳು ಮತ್ತು ಗುತ್ತಿಗೆದಾರರು ಕಾಮಗಾರಿಯಲ್ಲಿ ಗುಣಮಟ್ಟ ಕಾಯ್ದುಕೊಳ್ಳದೇ ಕಳಪೆ ಕಾಮಗಾರಿಗೆ ಕಾರಣವಾದರೆ ನಿರ್ಧಾಕ್ಷಿಣ್ಯ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಗ್ರಾಮೀಣ ಭಾಗದ ಬೇಡಿಕೆಯ ಹಿನ್ನೆಲೆಯಲ್ಲಿ ಮುಂದಿನ ದಿನಗಳಲ್ಲಿ ಕ್ಷೇತ್ರದಾದ್ಯಂತ ೧೫ ಸರ್ಕಾರಿ ಸಾರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗುವುದು ಎಂದು ತಿಳಿಸಿದರು.ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಪಂಚ ಗ್ಯಾರಂಟಿ ಯೋಜನೆಗಳಿಂದ ಬಡವರು ಮತ್ತು ಮಧ್ಯಮ ವರ್ಗದವರಿಗೆ ಹೆಚ್ಚಿನ ಅನುಕೂಲವಾಗಿದ್ದು, ಶಕ್ತಿ ಯೋಜನೆಯಿಂದಾಗಿ ಮಹಿಳೆಯರ ಪ್ರಯಾಣವು ಹೆಚ್ಚಾಗಿದೆ. ಇದರಿಂದ ಸಾರಿಗೆ ನಿಗಮಗಳ ಆದಾಯದಲ್ಲಿ ಹೆಚ್ಚಳವಾಗಿದೆ ಎಂದು ಹೇಳಿದರು.ಈ ಸಂದರ್ಭದಲ್ಲಿ ಕೆಎಸ್‌ಆರ್‌ಟಿಸಿ ವಿಭಾಗೀಯ ಸಂಚಲನಾಧಿಕಾರಿ ದಿನೇಶ್‌ಕುಮಾರ್ ಚನ್ನಗಿರಿ, ಸಾಗರ ಘಟಕ ವ್ಯವಸ್ಥಾಪಕ ಶ್ರೀಶೈಲ ಬಿರದಾರ, ಸಂಚಾರ ನಿಯಂತ್ರಕ ರುದ್ರೇಶ್ ನಂದೂರು, ಶಿರಸಿ ಶಾಸಕ ಭೀಮಣ್ಣ ನಾಯ್ಕ, ಬ್ಲಾಕ್ ಕಾಂಗ್ರಸ್ ಅಧ್ಯಕ್ಷ ಅಣ್ಣಪ್ಪ ಹಾಲಘಟ್ಟ, ಮುಖಂಡರಾದ ಎಚ್.ಗಣಪತಿ, ತಬಲಿ ಬಂಗಾರಪ್ಪ, ಪಂಚ ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಜಿಲ್ಲಾಧ್ಯಕ್ಷ ಚಂದ್ರಭೂಪಾಲ್, ತಾಲೂಕು ಅಧ್ಯಕ್ಷ ಜಯಶೀಲಗೌಡ ಅಂಕರವಳ್ಳಿ, ಸದಾನಂದಗೌಡ, ಕೆ.ಮಂಜುನಾಥ, ಎಂ.ಡಿ.ಶೇಖರ್, ಕೆ.ವಿ.ಗೌಡ, ಶಿವಲಿಂಗೇಗೌಡ, ಕಲ್ಲಂಬಿ ಹಿರಿಯಣ್ಣ, ನಾಗಪ್ಪ ಮಾಸ್ತರ್, ರತ್ನಮ್ಮ ನಾಗಪ್ಪ ಮಾಸ್ತರ್, ಚಿಕ್ಕಸವಿ ನಾಗರಾಜ್, ಶ್ರೀಕಾಂತ್ ಚಿಕ್ಕಶಕುನ, ಎಸ್.ಆರ್.ಕುಮಾರಸ್ವಾಮಿ, ಫಯಾಜ್ ಅಹ್ಮದ್ ಮೊದಲಾದವರು ಹಾಜರಿದ್ದರು.