ಸಾರಾಂಶ
ಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಾದು ಹೋಗಿರುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಗಳು ಈಗ ರೈತರ ಒಕ್ಕಲು ಮಾಡುವ ರಾಶಿ ಕಣಗಳಾಗಿ ಮಾರ್ಪಟ್ಟಿವೆ.
ವಾಹನ ಸವಾರರಿಗೆ ಸಂಕಷ್ಟ । ಅಪಘಾತಕ್ಕೀಡಾಗುವ ಭೀತಿ
ಪರಶಿವಮೂರ್ತಿ ದೋಟಿಹಾಳಕನ್ನಡಪ್ರಭವಾರ್ತೆ ಕುಷ್ಟಗಿಪಟ್ಟಣ ಸೇರಿದಂತೆ ತಾಲೂಕಿನ ಅನೇಕ ಗ್ರಾಮಗಳಲ್ಲಿ ಹಾದು ಹೋಗಿರುವ ರಾಜ್ಯ ಮತ್ತು ರಾಷ್ಟ್ರೀಯ ಹೆದ್ದಾರಿ ಪಕ್ಕದ ಸರ್ವೀಸ್ ರಸ್ತೆಗಳು ಈಗ ರೈತರ ಒಕ್ಕಲು ಮಾಡುವ ರಾಶಿ ಕಣಗಳಾಗಿ ಮಾರ್ಪಟ್ಟಿವೆ.
ಕಾರ್ಮಿಕರ ಕೊರತೆಯಿಂದ ರೈತರು ರಸ್ತೆಯಲ್ಲಿ ರಾಶಿ ಹಾಕುತ್ತಿದ್ದರೆ, ಮತ್ತೊಂದೆಡೆ ಈ ಕಾರ್ಯವು ವಾಹನ ಸವಾರರಿಗೆ ಸಂಕಷ್ಟ ತಂದೊಡ್ಡಿದೆ. ಸುಗಮವಾಗಿ ಸಂಚರಿಸಲಾಗದ ಪರಿಸ್ಥಿತಿ ಉಂಟಾಗಿದ್ದು, ಅಪಘಾತಕ್ಕೀಡಾಗುವ ಭೀತಿ ಎದುರಾಗಿದೆ.ಪಟ್ಟಣ ಸೇರಿದಂತೆ ದೋಟಿಹಾಳ, ಹನುಮಸಾಗರ, ತಾವರಗೇರಾ, ಮುದೇನೂರು, ಗಜೇಂದ್ರಗಡ ರಸ್ತೆ ಸೇರಿದಂತೆ ಅನೇಕ ಗ್ರಾಮೀಣ ಭಾಗದಲ್ಲಿ ಮುಖ್ಯ ರಸ್ತೆಯಲ್ಲಿ ರಾಶಿ ಮಾಡುತ್ತಿರುವುದು ಕಂಡು ಬರುತ್ತಿದ್ದು ಸಂಬಂಧಪಟ್ಟಂತಹ ಅಧಿಕಾರಿಗಳು ರೈತಾಪಿ ಜನರಿಗೆ ಜಾಗೃತಿ ಮೂಡಿಸುವ ಮೂಲಕ ಈ ವ್ಯವಸ್ಥೆಯನ್ನು ತಡೆಯಬೇಕಿದೆ.
ರೈತರು ತಾವು ಬೆಳೆದ ಬೆಳೆಗಳಾದ ಮೆಕ್ಕೆಜೋಳ, ತೊಗರಿ ಸೇರಿದಂತೆ ಇತ್ಯಾದಿ ಬೆಳೆಗಳನ್ನು ರಾಶಿ ಮಾಡಲು ಈ ರಸ್ತೆಗಳನ್ನು ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಜನರ ಸುರಕ್ಷಿತ ಸಂಚಾರಕ್ಕೆ ಅಡ್ಡಿಯಾಗುತ್ತಿದೆ. ವಾಹನಗಳಿಗೆ ಅಪಾಯಕಾರಿ ರಸ್ತೆಗಳಾಗಿ ಪರಿಣಮಿಸುತ್ತಿವೆ.ಸಂಚಾರ ಅಪಾಯ:
ರೈತರು ತಮ್ಮ ಅನುಕೂಲಕ್ಕಾಗಿ ಬೆಳೆಗಳನ್ನು ತಂದು ಹೆದ್ದಾರಿಯ ಮೇಲೆ ಹಾಕುತ್ತಿದ್ದಾರೆ. ಈ ಹೆದ್ದಾರಿಯಲ್ಲಿ ಭಾರಿ ವಾಹನಗಳ ಜೊತೆಗೆ ಬೈಕು ಸವಾರರು, ಆಟೋಗಳು ಸಂಚಾರ ಮಾಡುತ್ತಿದ್ದು, ನಿಯಂತ್ರಣ ತಪ್ಪಿ ಕೆಳಗೆ ಬಿದ್ದ ಉದಾಹರಣೆಗಳಿವೆ. ಹೀಗಾಗಿ ಸಂಚಾರ ಅಪಾಯಕಾರಿಯಾಗಿದೆ.ಕಣ ನಿರ್ಮಿಸಿ:
ರೈತಾಪಿ ಜನರು ಬೆಳೆದ ಬೆಳೆಗಳನ್ನು ರಾಶಿ ಮಾಡಿಕೊಳ್ಳಲು ಕಣಗಳ ಅವಶ್ಯಕತೆಯಿದ್ದು ತಾಲೂಕು ಪಂಚಾಯಿತಿಯವರು ಹಾಗೂ ಕೃಷಿ ಇಲಾಖೆಯವರು ತಾಲೂಕಿನ ರೈತರಿಗೆ ಅನುಗುಣವಾಗಿ ಅವಶ್ಯಕತೆಯಿದ್ದಲ್ಲಿ ಕಣಗಳ ನಿರ್ಮಿಸಿಕೊಡುವಲ್ಲಿ ಮುಂದಾಗಬೇಕಿದೆ. ಕಣಗಳನ್ನು ನಿರ್ಮಿಸಿಕೊಟ್ಟು ರಸ್ತೆಯಲ್ಲಿ ಆಗುವಂತಹ ಅನಾಹುತ ತಡೆಯುವ ಕಾರ್ಯ ಮಾಡಬೇಕಿದೆ ಎನ್ನುತ್ತಾರೆ ಪ್ರಜ್ಞಾವಂತರು.ರಸ್ತೆಯ ಪೂರ್ತಿ ರಾಶಿ:
ಬೆಳೆಯನ್ನು ರಸ್ತೆಯ ಅರ್ಧ ಭಾಗ ಹಾಕಿದರೆ ಸಂಚಾರ ಮಾಡಲು ಅನುಕೂಲವಾಗಬಹುದು. ಆದರೆ ಕೆಲ ರೈತರು ರಸ್ತೆಯಲ್ಲಿ ಪೂರ್ತಿಯಾಗಿ ಬೆಳೆ ಹಾಕುವ ಪರಿಣಾಮ ವಾಹನ ಸವಾರರಿಗೆ ಬಹಳಷ್ಟು ತೊಂದರೆ ಉಂಟಾಗುತ್ತಿದೆ.