ಶಿವಾನಂದ ಮಲ್ಲನಗೌಡ್ರ
ಕನ್ನಡಪ್ರಭ ವಾರ್ತೆ ಬ್ಯಾಡಗಿಸಮರ್ಪಕ ನಿರ್ವಹಣೆ ಇಲ್ಲದೇ ಬ್ಯಾಡಗಿ ತಾಲೂಕಿನಾದ್ಯಂತ ರಸ್ತೆ ಬದಿಯಲ್ಲಿನ ಮರಗಿಡಗಳು ವಾಹನ ಸವಾರರಿಗೆ ಕಂಟಕಪ್ರಾಯವಾಗಿವೆ. ರಸ್ತೆಗಳ ನಿರ್ವಹಣೆ ವಿಷಯದಲ್ಲಿ ನಿರ್ಲಕ್ಷ್ಯ ತೋರುತ್ತಿರುವ ಅಧಿಕಾರಿಗಳಿಗೆ ರೈತರು ಮತ್ತು ಸಾರ್ವಜನಿಕರು ಮಾತ್ರ ಹಿಡಿಶಾಪ ಹಾಕುತ್ತಿದ್ದಾರೆ.
ಗ್ರಾಮೀಣ ರಸ್ತೆ, ಜಿಲ್ಲಾ ಮುಖ್ಯರಸ್ತೆ, ರಾಜ್ಯ ಹೆದ್ದಾರಿ ಹಾಗೂ ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸವಾರರು ಮತ್ತು ಪ್ರಯಾಣಿಕರ ಸುರಕ್ಷಿತ ಸಂಚಾರಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹರಸಾಹಸಪಡುತ್ತಿವೆ, ಇದಕ್ಕಾಗಿ ಇನ್ನಿಲ್ಲದ ಸುರಕ್ಷತಾ ಕ್ರಮಗಳಿಗೂ ಸಹ ಮುಂದಾಗಿವೆ. ಇವುಗಳ ಮಧ್ಯೆ ಅಧಿಕಾರಿಗಳ ನಿರ್ಲಕ್ಷ್ಯದಿಂದ ರಸ್ತೆ ಅಕ್ಕಪಕ್ಕದ ಮರಗಿಡ ಅಪಾಯವನ್ನು ಆಹ್ವಾನಿಸುತ್ತಿರುವುದು ದುರಂತದ ಸಂಗತಿ.ರಸ್ತೆಯನ್ನೇ ನುಂಗುತ್ತಿವೆ: ವರ್ಷದ 12 ತಿಂಗಳುಗಳ ಕಾಲವೂ ಸಹ ರಸ್ತೆಗಳ ಎರಡೂ ಬದಿಯಲ್ಲಿ ಮರಗಿಡಗಳು ಮಾತ್ರ ಬೆಳೆಯವುದು ಸಹಜ ಪ್ರಕ್ರಿಯೆ. ಆದರೆ ಇವುಗಳನ್ನು ತೆರವುಗೊಳಿಸುವುದು ಲೋಕೋಪಯೋಗಿ ಹಾಗೂ ಜಿಲ್ಲಾ ಪಂಚಾಯತಗಳ ಎಂಜಿನಿಯರಿಂಗ್ ವಿಭಾಗದ ಜವಾಬ್ದಾರಿ ಹೀಗಿರುವಾಗ ತಾಲೂಕಿನಲ್ಲಿ ಇಂತಹ ಮರಗಿಡಗಳು ರಸ್ತೆಯನ್ನೇ ನುಂಗುತ್ತಿವೆ, ಆದರೆ ಅಧಿಕಾರಿಗಳ ನಿರ್ಲಕ್ಷ್ಯ ಮುಂದುವರೆದಿದ್ದು ಸಾರ್ವಜನಿಕರ ಕೆಂಗಣ್ಣಿಗೆ ಗುರಿಯಾಗುತ್ತಿದ್ದಾರೆ.
ತೀವ್ರ ಅಪಘಾತ:
ಗಿಡಮರಗಳು ರಸ್ತೆಗಳಿಗೆ ತುಂಬಾ ಹತ್ತಿರದಲ್ಲಿ ಬೆಳೆದಾಗ, ಮುಂದಿನ ರಸ್ತೆ ಸ್ಪಷ್ಟವಾಗಿ ಕಾಣದಂತಾಗಿ ನಿಯಂತ್ರಣ ತಪ್ಪಿದ ವಾಹನಗಳು ಅಪಘಾತಕ್ಕೆ ಒಳಗಾಗುತ್ತಿವೆ, ಗೊತ್ತುಪಡಿಸಿದ ರಸ್ತೆಯಲ್ಲಿ ಸ್ಪಷ್ಟತೆ ಕಾಣದೇ ಎದುರಿನಿಂದ ಬರುವಂತಹ ವಾಹನಗಳು, ಪ್ರಾಣಿಗಳ ರಸ್ತೆ ದಾಟುವಿಕೆ ಹಠಾತ್ ಅಪಘಾತಗಳಿಗೆ ಕಾರಣವಾಗುತ್ತಿವೆ. ಅದರಲ್ಲೂ ರಾತ್ರಿ ವೇಳೆಯಂತೂ ಸದರಿ ಗಿಡಮರಗಳು ಅಪಘಾತಗಳನ್ನು ಪ್ರಚೋದಿಸಲಿವೆ ಎಂದರೆ ತಪ್ಪಾಗಲಾರದು.
ಬೇರುಗಳಿಂದ ರಸ್ತೆಗಳಲ್ಲಿ ಉಬ್ಬು: ರಸ್ತೆ ಬದಿಯಲ್ಲಿನ ಗಿಡಗಂಟೆಗಳನ್ನು ಇನ್ನಷ್ಟು ಬೆಳೆಯಲು ಬಿಟ್ಟಲ್ಲಿ ಅವುಗಳಿಂದ ಹೊರ ಬರುವ ಬೇರುಗಳು ರಸ್ತೆಗಳ ಮೂಲ ಸ್ವರೂಪವನ್ನೇ ಬದಲಿಸಲಿವೆ, ಇದರಿಂದ ಸೃಷ್ಟಿಯಾಗುವ ಉಬ್ಬುದಿನ್ನೆಗಳು ಕೂಡ ವಾಹನ ಸವಾರರಿಗೆ ಕಂಟಕಪ್ರಾಯವಾಗಲಿದ್ದು ಡಾಂಬರನ ಮಧ್ಯೆ ಬಿರುಕು ಬಿಡುವ ಮೂಲಕ ಆದಷ್ಟು ಬೇಗನೆ ರಸ್ತೆ ಹಾಳಾಗಲು ಕಾರಣವಾಗಲಿವೆ.ಕಾಣದಂತಾಗುತ್ತಿವೆ ಚಿಹ್ನೆಗಳು: ಕೆಳಮಟ್ಟದಲ್ಲಿ ನೇತಾಡುವ ಕೊಂಬೆಗಳು ಹಾಗೂ ರಸ್ತೆಯ ಕಡೆಗೆ ಅಶಿಸ್ತಿನಿಂದ ಬೆಳೆದಾಗ, ರಸ್ತೆಯಲ್ಲಿನ ನಿರ್ಣಾಯಕ ಸಂಚಾರ ಚಿಹ್ನೆಗಳನ್ನು ಮುಚ್ಚುತ್ತಿವೆ, ಮರಗಳ ದೊಡ್ಡ ಕೊಂಬೆಗಳು ನೇರವಾಗಿ ರಸ್ತೆಗಳ ಮಧ್ಯೆ ಬರುವುದರಿಂದ ರಸ್ತೆ ಎರಡೂ ಬದಿಯಲ್ಲಿ ಹಾಕಿದಂತಹ ವಿದ್ಯುತ್ ದೀಪಗಳನ್ನು ಮುಚ್ಚುತ್ತಿದ್ದು ಬೆಳಕಿನ ಪ್ರಸರಣ ಕೂಡ ಕಡಿಮೆಯಾಗಲಿವೆ, ಇದರಿಂದ ಪ್ರಯಾಣದ ವಾಹನ ಸವಾರರು, ವಾಣಿಜ್ಯ ಟ್ರಕ್‌ಗಳು ರಸ್ತೆಗಳನ್ನು ದಾಟುವಲ್ಲಿ ಹರಸಾಹಸಪಡಬೇಕಾಗಿದೆ.ರಸ್ತೆ ನಿರ್ವಹಣೆಗೆ ಮೀಸಲಿರಿಸಿ ಜಂಗಲ್ ಕಟಾವು ಬ್ಯಾಡಗಿ ಮತಕ್ಷೇತ್ರದಾದ್ಯಂತ ನಡೆಸಲು ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡುತ್ತೇನೆ. ಇದೇ ಕಾರಣಕ್ಕೆ ವಾಹನಗಳ ಅಪಘಾತ ಸಂಭವಿಸಿದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಹೊಣೆಗಾರರನ್ನಾಗಿಸಲು ಹಿಂದುಮುಂದು ನೋಡುವುದಿಲ್ಲ ಎಂದು ಶಾಸಕ ಬಸವರಾಜ ಶಿವಣ್ಣನವರ ಹೇಳಿದರು.ರಸ್ತೆಗಳ ಅಕ್ಕಪಕ್ಕದಲ್ಲಿ ಗಿಡಮರಗಳನ್ನು ಕಟಾವು (ಜಂಗಲ್ ಕಟಾವು) ಹಾಗೂ ರಸ್ತೆಗಳ ಅಕ್ಕಪಕ್ಕದಲ್ಲಿ ನೀರು ಹರಿಯಲು ಅವಕಾಶ ಮಾಡಿಕೊಟ್ಟಿಲ್ಲ, ಇದರಿಂದ ಟ್ರ್ಯಾಕ್ಟರ್ ಹಾಗೂ ಚಕ್ಕಡಿಗಳ ಓಡಾಟಕ್ಕೆ ತೊಂದರೆಯಾಗುತ್ತಿದ್ದು ಅಧಿಕಾರಿಗಳ ನಿರ್ಲಕ್ಷ್ಯದ ವಿರುದ್ದ ರೈತ ಸಂಘ ಹೋರಾಟಕ್ಕಿಳಿಯಬೇಕಾಗುತ್ತದೆ ಎಂದು ರೈತಸಂಘ, ಹಸಿರುಸೇನೆ ತಾಲೂಕು ಉಪಾಧ್ಯಕ್ಷ ಡಾ.ಕೆ.ವಿ. ದೊಡ್ಡಗೌಡ್ರ ಹೇಳಿದರು.