ರಸ್ತೆ ಬದಿಯ ರಕ್ಷಣಾ ಕಂಬಿ ಕಳ್ಳರ ಪಾಲು

| Published : May 18 2024, 12:42 AM IST

ಸಾರಾಂಶ

ರಾತ್ರೋ ರಾತ್ರಿ ಕಳ್ಳರು ಕಂಬಿಗಳಿಗೆ ಹಾಕಿರುವ ನಟ್ಟುಗಳನ್ನು ಕಿತ್ತು ಕಳ್ಳತನ ಮಾಡಿದ್ದಾರೆ.

ಚಂದ್ರು ಕೊಂಚಿಗೇರಿ

ಹೂವಿನಹಡಗಲಿ: ರಾಜ್ಯ ಹೆದ್ದಾರಿ ಹಾಗೂ ಜಿಲ್ಲಾ ಮುಖ್ಯ ರಸ್ತೆಯ ಇಕ್ಕೆಲಗಳಲ್ಲಿ, ಅತಿಹೆಚ್ಚು ಆಳವಿರುವ ಕಡೆಗಳಲ್ಲಿ ಅಪ್ಪಿತಪ್ಪಿ ಅಪಘಾತ ಆಗದಂತೆ, ಮುನ್ನಚ್ಚರಿಕೆ ಕ್ರಮವಾಗಿ ರಸ್ತೆ ಬದಿಯಲ್ಲಿ ಅಳವಡಿಸಿರುವ ರಕ್ಷಣಾ ಕಬ್ಬಿಣದ ಕಂಬಿಗಳು ಕಳ್ಳರ ಪಾಲಾಗುತ್ತಿವೆ.

ಹೌದು, ತಾಲೂಕಿನ ಹೂವಿನಹಡಗಲಿ-ಹೊಳಲು ಜಿಲ್ಲಾ ಮುಖ್ಯ ರಸ್ತೆಯ ಮಾರ್ಗ ಮಧ್ಯದಲ್ಲಿರುವ ಅಲ್ಲಿಪುರ, ಮಾಗಳ, ಹೊಸಹಳ್ಳಿ, ಅಂಗೂರು ಗ್ರಾಮದ ವರೆಗೂ ಸಿಂಗಟಾಲೂರು ಏತ ನೀರಾವರಿ ಯೋಜನೆಯ ಹಿನ್ನೀರಿನಲ್ಲಿ ರಸ್ತೆ ಮುಳುಗಡೆಯಾಗುತ್ತಿತ್ತು. ಇದರಿಂದ ಕರ್ನಾಟಕ ರಾಜ್ಯ ನೀರಾವರಿ ನಿಗಮದಿಂದ, ಈ ಹಿಂದೆ ಯೋಜನೆಯ ಹಿನ್ನೀರಿಗೆ ರಸ್ತೆ ಮುಳುಗಡೆಯಾಗದಂತೆ ₹47 ಕೋಟಿ ವೆಚ್ಚದಲ್ಲಿ ರಸ್ತೆಯನ್ನು ಎತ್ತರಿಸಿ ಕೆಲವು ಕಡೆಗಳಲ್ಲಿ ಸೇತುವೆಗಳನ್ನು ನಿರ್ಮಾಣ ಮಾಡಲಾಗಿದೆ. ಹಳ್ಳ ಹಾಗೂ ನದಿ ನೀರು ಬರುವ ಕಡೆಗಳಲ್ಲಿ ಸೇತುವೆ ಬಳಿ ರಕ್ಷಣಾ ಕಂಬಿಗಳನ್ನು ಹಾಕಿದ್ದಾರೆ. ರಾತ್ರೋ ರಾತ್ರಿ ಕಳ್ಳರು ಕಂಬಿಗಳಿಗೆ ಹಾಕಿರುವ ನಟ್ಟುಗಳನ್ನು ಕಿತ್ತು ಕಳ್ಳತನ ಮಾಡಿದ್ದಾರೆ.

ಈ ಕಬ್ಬಿಣದ ಕಂಬಿಗಳಿಂದ ಕೆಲವರು ಕೃಷಿ ಉಪಕರಣ ಹಾಗೂ ಭತ್ತ ಕೊಯ್ಲು ಮಾಡುವ ಯಂತ್ರಕ್ಕೆ ಅಗತ್ಯವಿರುವ ಸಲಕರಣೆಗಳನ್ನು ಮಾಡಿದ್ದಾರೆ. ಈ ಕುರಿತು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದರೂ ಯಾರೂ ಕ್ರಮಕ್ಕೆ ಮುಂದಾಗುತ್ತಿಲ್ಲ. ರಸ್ತೆ ಅಪಘಾತವಾದರೆ ಯಾರು ಹೊಣೆ ಎಂಬ ಆರೋಪಗಳು ಕೇಳಿ ಬರುತ್ತಿವೆ.

ತಾಲೂಕಿನ ಅಲ್ಲಿಪುರ, ಮಾಗಳ, ಹೊಸಹಳ್ಳಿ ಮತ್ತು ಅಂಗೂರು ಬಳಿಯಲ್ಲಿರುವ ರಕ್ಷಣಾ ಕಂಬಿಗಳು ಬಹುತೇಕ ಕಳ್ಳತನವಾಗಿವೆ. ಇದಕ್ಕೆ ಹೊಸದಾಗಿ ಕಂಬಿಗಳನ್ನು ಅಳವಡಿಸದಿದ್ದರೆ ಅಪಘಾತವಾಗುವ ಸಂಭವವೇ ಹೆಚ್ಚು.

ತಾಲೂಕಿನ ವ್ಯಾಪ್ತಿಯ ಮೈಲಾರ-ತೋರಣಗಲ್ಲು, ಅರಭಾವಿ-ಚಳ್ಳಕೆರೆ, ಹೂವಿನಹಡಗಲಿ-ಮಂಡ್ಯ ಈ ರಾಜ್ಯ ಹೆದ್ದಾರಿಗಳು ಸೇರಿದಂತೆ ವಿವಿಧ ಜಿಲ್ಲಾ ಮುಖ್ಯ ರಸ್ತೆಗಳಲ್ಲಿಯೂ ವಾಹನ ಸವಾರರ ಸುರಕ್ಷತೆಗಾಗಿ ರಕ್ಷಣಾ ಕಂಬಿಗಳನ್ನು ಹಾಕಲಾಗಿದೆ. ಕೆಲವು ಕಡೆಗಳಲ್ಲಿ ಕಿತ್ತು ಹೋದ ಕಂಬಿಗಳು ದುರಸ್ತಿಗೆ ಬಂದಿವೆ. ಕೆಲವು ಕಡೆಗಳಲ್ಲಿ ವಾಹನಗಳ ಅಪಘಾತವಾಗಿ ಮುರಿದು ಬಿದ್ದಿವೆ. ಅವುಗಳ ಸಣ್ಣ ದುರಸ್ತಿ ಮಾಡುವಷ್ಟು ಕನಿಷ್ಠ ಕಾಳಜಿ ಲೋಕೋಪಯೋಗಿ ಇಲಾಖೆಗೆ ಇಲ್ಲವೇ ಎಂದು ಜನ ಹಿಡಿ ಶಾಪ ಹಾಕುತ್ತಿದ್ದಾರೆ.

ರಸ್ತೆಯ ಬದಿಯಲ್ಲಿ ರಕ್ಷಣಾ ಕಂಬಿಗಳನ್ನು ವಾಹನ ಸವಾರರ ಸುರಕ್ಷತೆಗಾಗಿ ಅಳವಡಿಸಲಾಗಿದೆ. ಆದರೆ, ರಾತ್ರಿ ವೇಳೆ ಇವುಗಳನ್ನು ಕಳ್ಳತನ ಮಾಡುತ್ತಿದ್ದಾರೆ. ತಾಲೂಕಿನ ಎಲ್ಲ ಪೊಲೀಸ್‌ ಠಾಣೆಗಳಿಗೆ ದೂರುಗಳನ್ನು ಇಲಾಖೆಯಿಂದ ಕೊಡಲು ಸಿದ್ಧತೆ ನಡೆದಿದೆ ಎನ್ನುತ್ತಾರೆ ಲೋಕೋಪಯೋಗಿ ಇಲಾಖೆ ಎಇಇ ಹೊನ್ನಪ್ಪ.