ರಸ್ತೆ ಬದಿಯಲ್ಲಿ ವ್ಯಾಪಾರ: ಅಪಘಾತಕ್ಕೆ ಆಹ್ವಾನ

| Published : May 27 2024, 01:04 AM IST / Updated: May 27 2024, 01:05 AM IST

ರಸ್ತೆ ಬದಿಯಲ್ಲಿ ವ್ಯಾಪಾರ: ಅಪಘಾತಕ್ಕೆ ಆಹ್ವಾನ
Share this Article
  • FB
  • TW
  • Linkdin
  • Email

ಸಾರಾಂಶ

ಪಟ್ಟಣದ ಅಂಚೆ ಕಚೇರಿ ಮುಂದೆ ಬೀದಿ ವ್ಯಾಪಾರ ಮತ್ತೆ ಆರಂಭವಾಗಿದೆ. ಹಾಗೂ ಹೆದ್ದಾರಿಯಲ್ಲಿಯೇ ವಾಹನಗಳ ನಿಲುಗಡೆಯಿಂದ ಪಾದಚಾರಿಗಳು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪಟ್ಟಣದ ಸೌಂದರ್ಯ, ಸುಗಮ ಸಂಚಾರಕ್ಕೆ ಒತ್ತು ನೀಡಬೇಕಾದ ಪುರಸಭೆ ಹಾಗೂ ಪೊಲೀಸರು ಈ ವಿಚಾರದಲ್ಲಿ ಅರಿವಿಲ್ಲದಂತೆ ನಡೆದುಕೊಳ್ಳುತ್ತಿರುವ ಬಗ್ಗೆ ಜನರ ಆಕ್ರೋಶ ವ್ಯಕ್ತವಾಗಿದೆ.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪಟ್ಟಣದ ಅಂಚೆ ಕಚೇರಿ ಮುಂದೆ ಬೀದಿ ವ್ಯಾಪಾರ ಮತ್ತೆ ಆರಂಭವಾಗಿದೆ. ಹಾಗೂ ಹೆದ್ದಾರಿಯಲ್ಲಿಯೇ ವಾಹನಗಳ ನಿಲುಗಡೆಯಿಂದ ಪಾದಚಾರಿಗಳು, ವಾಹನಗಳ ಸಂಚಾರಕ್ಕೆ ತೊಂದರೆಯಾಗುತ್ತಿದೆ. ಪಟ್ಟಣದ ಸೌಂದರ್ಯ, ಸುಗಮ ಸಂಚಾರಕ್ಕೆ ಒತ್ತು ನೀಡಬೇಕಾದ ಪುರಸಭೆ ಹಾಗೂ ಪೊಲೀಸರು ಈ ವಿಚಾರದಲ್ಲಿ ಅರಿವಿಲ್ಲದಂತೆ ನಡೆದುಕೊಳ್ಳುತ್ತಿರುವ ಬಗ್ಗೆ ಜನರ ಆಕ್ರೋಶ ವ್ಯಕ್ತವಾಗಿದೆ.

ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಪುರಸಭೆಯಲ್ಲಿ ಸಭೆ ನಡೆಸಿ ಹೆದ್ದಾರಿಯ ಬೀದಿ ವ್ಯಾಪಾರಕ್ಕೆ ಕಡಿವಾಣ ಹಾಕಬೇಕು ಎಂದು ಸೂಚನೆ ನೀಡಿದ ಬಳಿಕ ಕೆಲ ತಿಂಗಳ ಕಾಲ ಬೀದಿ ವ್ಯಾಪಾರ ನಿಂತಿತ್ತು. ಈಗ ಮತ್ತೆ ಪಟ್ಟಣದ ಅಂಬೇಡ್ಕರ್‌ ಹಾಸ್ಟೆಲ್‌, ಅಂಚೆ ಕಚೇರಿ ಮುಂದೆ ಬಟ್ಟೆ, ಈರುಳ್ಳಿ, ತರಕಾರಿಯನ್ನು ಹೆದ್ದಾರಿಯ ಬದಿಯ ಚರಂಡಿ ಮೇಲೆ ಇಟ್ಟುಕೊಂಡು ವ್ಯಾಪಾರ ನಡೆಸುತ್ತಿದ್ದಾರೆ. ಹೇಳಿ ಕೇಳಿ ಪಟ್ಟಣದಲ್ಲಿ ಜೋಡಿ ರಸ್ತೆಯಿದ್ದರೂ ಸರ್ವೀಸ್‌ ಇಲ್ಲದ ಕಾರಣ ಹೆದ್ದಾರಿ ಬದಿಯೇ ಪಾದಚಾರಿಗಳು, ಬೈಕ್‌, ಸೈಕಲ್‌ಗಳು ಸಂಚರಿಸುತ್ತಿದ್ದರೂ ಪುರಸಭೆ ಈ ವಿಚಾರದಲ್ಲಿ ಜಾಣಮೌನ ವಹಿಸಿದೆ.

ಫುಟ್‌ ಪಾತ್‌ ಮೇಲೆ ತರಕಾರಿ ಇನ್ನಿತರ ವಸ್ತು ಇಟ್ಟುಕೊಂಡು ವ್ಯಾಪಾರ ಮಾಡುವಾಗ ಹೆದ್ದಾರಿಯಲ್ಲೇ ವಾಹನಗಳು ನಿಲ್ಲುತ್ತಿವೆ. ಅಲ್ಲದೆ ಹೆದ್ದಾರಿ ಬದಿ ನಿಂತು ಜನರು ಸಹ ತರಕಾರಿ ಖರೀದಿಸುತ್ತಿದ್ದಾರೆ. ಮೈಸೂರು-ಊಟಿ ಹೆದ್ದಾರಿಯಲ್ಲಿ ದೊಡ್ಡ ದೊಡ್ಡ ವಾಹನಗಳು ಸಂಚರಿಸುತ್ತಿವೆ. ಅಲ್ಲದೆ ಟಿಪ್ಪರ್‌ಗಳು ಕೂಡ ಅತಿ ವೇಗವಾಗಿ ಹೋಗುತ್ತಿವೆ ಪಾದಚಾರಿಗಳು ಹಾಗೂ ಜನರು ಸ್ವಲ್ಪ ಯಾಮಾರಿದರೂ ಅಪಘಾತ ಸಂಭವಿಸಲಿದೆ. ಶಾಸಕ ಎಚ್.ಎಂ. ಗಣೇಶ್‌ ಪ್ರಸಾದ್‌ ಕಳೆದ ಎಂಟು ತಿಂಗಳ ಹಿಂದೆ ನಡೆಸಿದ ಸಭೆಯಂತೆ ಹೆದ್ದಾರಿ ಬದಿ ವ್ಯಾಪಾರ ಬೇಡ, ವಾಹನಗಳ ನಿಲುಗಡೆ ಬೇಡ ಎಂದು ಸೂಚನೆ ನೀಡಿದ್ದರು. ಆದರೆ ಕೆಲ ತಿಂಗಳ ವ್ಯಾಪಾರಕ್ಕೆ ಬ್ರೇಕ್‌ ಬಿದ್ದಿತ್ತು. ಸ್ಥಳೀಯ ಪೊಲೀಸರು ಸುಗಮ ಸಂಚಾರಕ್ಕೆ ಕ್ರಮ ವಹಿಸದ ಕಾರಣ ಹೆದ್ದಾರಿ ಬದಿ ತರಕಾರಿ, ಎಳೆನೀರು ವ್ಯಾಪಾರ, ಆಟೋಗಳಲ್ಲಿ ಹಣ್ಣುಗಳ ಮಾರಾಟ ಮತ್ತೆ ರಾಜಾರೋಷವಾಗಿ ಆರಂಭವಾಗಿವೆ.

ಹೆದ್ದಾರಿಯಲ್ಲೇ ಬೈಕ್‌ ನಿಲುಗಡೆ:

ಪಟ್ಟಣದ ದೇವರಾಜ ಅರಸು ಕ್ರೀಡಾಂಗಣದ ಮುಂದೆ ಇರುವ ಬ್ಯಾಂಕ್‌ಗಳ ಮುಂದೆ ಬೈಕ್‌ಗಳ ನಿಲುಗಡೆಯಿಂದ ಸಂಚಾರಕ್ಕೆ ಅಡಚಣೆ ಆಗುತ್ತಿದೆ ಎಂದು ಪಾದಚಾರಿಗಳು ಹೇಳಿದ್ದಾರೆ. ಪಟ್ಟಣದ ಜೋಡಿ ರಸ್ತೆ ಪರಿಮಿತಿಯ ಹೆದ್ದಾರಿಗಳಲ್ಲಿಯೇ ಆಟೋ, ಕಾರು, ಬೈಕ್‌ಗಳು ನಿಲ್ಲುತ್ತಿರುವುದಕ್ಕೆ ಕಡಿವಾಣ ಹಾಕಲು ಪೊಲೀಸರು ವಿಫಲವಾಗಿದ್ದಾರೆ ಎಂದು ಪಟ್ಟಣದ ನಿವಾಸಿ ಮಂಜು ಆರೋಪಿಸಿದ್ದಾರೆ.

ಪಟ್ಟಣದಲ್ಲಿ ಸುಗಮ ಸಂಚಾರಕ್ಕೆ ಆದ್ಯತೆ ನೀಡಲಾಗುವುದು. ಬ್ಯಾಂಕ್‌ ಮುಂದೆ ಹೆದ್ದಾರಿಯಲ್ಲಿ ಬೈಕ್‌ ನಿಲುಗಡೆ ಮಾಡಿಸದಂತೆ ಪತ್ರ ಬರೆಯಲಾಗಿದೆ. ಮತ್ತೆ ಪತ್ರ ಬರೆಯುತ್ತೇನೆ. ಹೆದ್ದಾರಿ ಬದಿ ವ್ಯಾಪಾರಕ್ಕೆ ಕಡಿವಾಣ ಹಾಕಲಾಗುವುದು.-ಎಸ್. ಪರಶಿವಮೂರ್ತಿ, ಇನ್ಸ್‌ಪೆಕ್ಟರ್‌