ರಿಂಗ್‌ ರೋಡ್‌ನಲ್ಲಿ ದರೋಡೆ: ಏಳು ಜನ ದರೋಡೆಕೋರರ ಬಂಧನ

| Published : Oct 01 2024, 01:40 AM IST

ಸಾರಾಂಶ

ಹುಬ್ಬಳ್ಳಿ ಹೊರವಲಯದ ರಿಂಗ್ ರೋಡ್‌ನಲ್ಲಿ ವಾಹನ ಸವಾರರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಇಲ್ಲಿನ ಬೆಂಡಿಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಹುಬ್ಬಳ್ಳಿ: ನಗರ ಹೊರವಲಯದ ರಿಂಗ್ ರೋಡ್‌ನಲ್ಲಿ ವಾಹನ ಸವಾರರನ್ನು ಗುರಿಯಾಗಿಸಿಕೊಂಡು ದರೋಡೆ ಮಾಡುತ್ತಿದ್ದ ತಂಡವನ್ನು ಬಂಧಿಸುವಲ್ಲಿ ಇಲ್ಲಿನ ಬೆಂಡಿಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ. 7 ಜನ ಆರೋಪಿಗಳನ್ನು ಬಂಧಿಸಿ ₹4100 ನಗದು ಸೇರಿದಂತೆ 3 ಮೊಬೈಲ್, 2 ಬೈಕ್‌, ಒಂದು ಆಟೋ, ಒಂದು ಚಾಕು, ಖಾರದ ಪುಡಿ ವಶಪಡಿಸಿಕೊಳ್ಳಲಾಗಿದೆ.ಈ ಕುರಿತು ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ ಮಾಹಿತಿ ನೀಡಿ, ಹುಬ್ಬಳ್ಳಿಯ ಗಂಗಾಧರ ನಗರದ ಭೀಮರಾವ್ ತಾವರಗೊಪ್ಪ, ರವಿ ಗೋಕಾಕ, ಕೆ.ಬಿ. ನಗರದ ದೀಪಕ್ ನರಗುಂದ, ಶ್ರೀನಿವಾಸ ವೀರಾಪುರ, ಸೋನಿಯಾಗಾಂಧಿ ನಗರದ ಶಶಿಕುಮಾರ ಸಾತಪತಿ, ಗೋಪನಕೊಪ್ಪದ ನಾಗರಾಜ ಬಳ್ಳಾರಿ ಬಂಧಿತರು. ಇವರ ಮೇಲೆ ಹಲವು ಪೊಲೀಸ್‌ ಠಾಣೆಗಳಲ್ಲಿ ಪ್ರಕರಣಗಳು ದಾಖಲಾಗಿವೆ. ಅಲ್ಲದೇ ರೌಡಿಶೀಟರ್‌, ಎಂಒಬಿ ಚಟುವಟಿಕೆಯಲ್ಲಿ ನಿರತರಾದವರೊಂದಿಗೆ ಗುರುತಿಸಿಕೊಂಡಿದ್ದರು. ಆರೋಪಿಗಳೆಲ್ಲ ಕೂಡಿಕೊಂಡು ನಗರದ ಹೊರವಲದಲ್ಲಿರುವ ರಿಂಗ್ ರಸ್ತೆಯಲ್ಲಿ ಬೈಕ್ ಹಾಗೂ ಲಾರಿಗಳನ್ನು ಅಡ್ಡಗಟ್ಟಿ ಖಾರದಪುಡಿ ಎರಚಿ, ಚಾಕುವಿನಿಂದ ಹಲ್ಲೆ ನಡೆಸಿ ಬೆಲೆ ಬಾಳುವ ವಸ್ತುಗಳನ್ನು ದೋಚಿ ಪರಾರಿಯಾಗುತ್ತಿದ್ದರು. ಇಂತಹ ಘಟನೆಗಳಿಂದಾಗಿ ರಿಂಗ್ ರೋಡ್ ರಸ್ತೆಯಲ್ಲಿ ಓಡಾಡುವ ವಾಹನ ಸವಾರರು ಭಯಪಡುವಂತಾಗಿತ್ತು.

ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಪೊಲೀಸ್ ಠಾಣೆಯ ಪಿಐ ಎಸ್.ಆರ್. ನಾಯಕ ನೇತೃತ್ವದ ತಂಡ ಪಿಎಸ್ಐ ರವಿ ವಡ್ಡರ, ಎಎಸ್ಐ ಟಿ.ಎನ್. ಸವದತ್ತಿ, ಸಿಬ್ಬಂದಿ ಪಿ.ಜಿ. ಪುರಾಣಿಕಮಠ, ಎನ್.ಐ. ನೀಲಗಾರ್, ಪಿ.ಎಫ್. ಅಂಬಿಗೇರ, ಆರ್.ಎಸ್. ಹರ್ಕಿ, ರಮೇಶ ಹಿತ್ತಲಮನಿ, ಹನುಮಂತ ಕರಗಾವಿ, ಸೋಮು ಮೇಟಿ, ಬಸವರಾಜ ಗಳಗಿ, ಗುಡ್ಡಪ್ಪ ಒಗ್ಗಣ್ಣವರ, ಬಸು ಗೌಡರ, ಹನುಮಂತ ಆಲೂರ ತಂಡ ವಿಶೇಷ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಇದೇ ಮಾದರಿಯಲ್ಲಿ ಹಲವು ಕಡೆಗಳಲ್ಲಿ ದರೋಡೆ ಮಾಡಿರುವ ಪ್ರಕರಣಗಳು ನಡೆದಿವೆ. ಈಗ ಏಳು ಜನರನ್ನು ಬಂಧಿಸಲಾಗಿದೆ. ಅಲ್ಲದೇ ಇದೇ ರೀತಿ 4-5 ತಂಡಗಳು ದರೋಡೆ, ಸುಲಿಗೆ ನಡೆಸುತ್ತಿರುವುದು ಗಮನಕ್ಕೆ ಬಂದಿದೆ. ಆದಷ್ಟು ಬೇಗನೆ ಈ ಎಲ್ಲ ದರೋಡೆಕೋರರನ್ನು ಬಂಧಿಸುವುದಾಗಿ ಮಾಹಿತಿ ನೀಡಿದರು.

ಈ ವೇಳೆ ಡಿಸಿಪಿ ರವೀಶ. ಸಿ.ಆರ್‌, ಎಸಿಪಿ ಶಿವಪ್ರಕಾಶ ನಾಯಕ, ಯು.ಬಿ. ಚಿಕ್ಕಮಠ ಸೇರಿದಂತೆ ಹಲವರಿದ್ದರು. ಇಬ್ಬರು ಮೊಬೈಲ್‌ ಕಳ್ಳರ ಬಂಧನ

ಹುಬ್ಬಳ್ಳಿ:

ಗಣೇಶ ವಿಸರ್ಜನೆಯ ವೇಳೆ ಮೊಬೈಲ್ ದೋಚಿದ್ದ ಕಳ್ಳರನ್ನು ಬಂಧಿಸುವಲ್ಲಿ ಇಲ್ಲಿನ ಬೆಂಡಿಗೇರಿ ಪೊಲೀಸರು ಯಶಸ್ವಿಯಾಗಿದ್ದಾರೆ.

ಈ ಕುರಿತು ಮಾತನಾಡಿದ ಹು-ಧಾ ಮಹಾನಗರ ಪೊಲೀಸ್‌ ಆಯುಕ್ತ ಎನ್‌. ಶಶಿಕುಮಾರ, ಗಂಗಾಧರ ನಗರದ ವೆಂಕಟೇಶ ಕೊರವರ್, ಮಂಟೂರ ರಸ್ತೆಯ ಸಿದ್ಧಾರೂಢ ದೊಡ್ಡಮನಿ ಬಂಧಿತ ಆರೋಪಿಗಳು. ಇವರು ಈಚೆಗೆ ನಗರದಲ್ಲಿ ನಡೆದ ಗಣೇಶ ವಿಸರ್ಜನೆ ವೇಳೆ ಹಚ್ಚುತ್ತಿದ್ದ ಡಿಜೆಗೆ ನೃತ್ಯ ಮಾಡುವವರ ಗಮನ ಬೇರೆಡೆ ಸೆಳೆದು ಮೊಬೈಲ್ ಕದ್ದು ಪರಾರಿಯಾಗಿದ್ದರು. ಈ ಕುರಿತು ಬೆಂಡಿಗೇರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡಾ ದಾಖಲಾಗಿತ್ತು. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಬೆಂಡಿಗೇರಿ ಠಾಣೆಯ ಪಿಐ ಎಸ್.ಆರ್. ನಾಯಕ್ ನೇತೃತ್ವದ ತಂಡ ವಿಶೇಷ ಕಾರ್ಯಾಚರಣೆ ನಡೆಸಿ, ಮೊಬೈಲ್ ಕಳ್ಳರನ್ನು ಬಂಧಿಸಿದ್ದಾರೆ.

ಬಂಧಿತರಿಂದ ವಿವಿಧ ಕಂಪನಿಯ 22 ಮೊಬೈಲ್, ಒಂದು ಬೈಕ್ ವಶಕ್ಕೆ ಪಡೆದಿದ್ದು, ಒಟ್ಟು ಮೌಲ್ಯ ₹3.20 ಲಕ್ಷ ಎಂದು ಅಂದಾಜಿಸಲಾಗಿದೆ. ಇನ್ನು ವಿಚಾರಣೆ ವೇಳೆ ಆರೋಪಿತರು ಮರಾಠ ಗಲ್ಲಿ ಹಾಗೂ ಶಿಗ್ಗಾಂವ್ ಗಣೇಶ ವಿಸರ್ಜನೆ ಮೆರವಣಿಗೆ ವೇಳೆಯಲ್ಲಿ ಮೊಬೈಲ್‌ ಕದ್ದಿರುವುದಾಗಿ ಬಾಯಿ ಬಿಟ್ಟಿದ್ದಾರೆ. ಇದೇ ಮಾದರಿಯಲ್ಲಿ ಕಳ್ಳತನ ಮಾಡುವ ತಂಡವೇ ಮಹಾನಗರದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಇವರ ಮೇಲೆಯೂ ಹದ್ದಿನ ಕಣ್ಣಿಡುವ ಮೂಲಕ ಇಂತಹ ಕೃತ್ಯ ನಡೆಸುವ ಎಲ್ಲರನ್ನು ಬಂಧಿಸಲು ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.ಅಶೋಕ ನಗರ ಪೊಲೀಸರಿಂದ ಮನೆಗಳ್ಳಿ ಬಂಧನ

ಹುಬ್ಬಳ್ಳಿ: ನಗರದ ಬೀಗ ಹಾಕಿದ ಮನೆಗಳನ್ನು ಟಾರ್ಗೆಟ್ ಮಾಡಿ ಮನೆ ಕಳ್ಳತನ ಮಾಡುತ್ತಿದ್ದ ಮನೆಗಳ್ಳಿ ಹಾಗೂ ಕೃತ್ಯಕ್ಕೆ ಸಹಕರಿಸಿದ ವ್ಯಕ್ತಿಯನ್ನು ಬಂಧಿಸುವಲ್ಲಿ ಇಲ್ಲಿನ ಅಶೋಕ ನಗರ ಠಾಣೆಯ ಪೊಲೀಸರು ಯಶಸ್ವಿಯಾಗಿದ್ದಾರೆ.ಗಂಗಾಧರ ನಗರದ ನಿವಾಸಿ ರತ್ನವ್ವ ಬಾಳಿಮೇಡ್(45), ಕುಸುಗಲ್ ನಿವಾಸಿ ಮುಕ್ತುಂಸಾಬ್ ಕುಂಬಿ (27) ಬಂಧಿತರು. ಇವರಿಂದ ₹2.50 ಲಕ್ಷ ಮೌಲ್ಯದ 50 ಗ್ರಾಂ ತೂಕದ 4 ಬಂಗಾರದ ಬಳೆಗಳು, ₹50 ಸಾವಿರ ಮೌಲ್ಯದ 10 ಗ್ರಾಂ ತೂಕದ ಬಂಗಾರದ ಚೈನು, ₹50 ಸಾವಿರ ಮೌಲ್ಯದ 6 ಜತೆ ಕಿವಿಯೋಲೆ, ₹1.50 ಲಕ್ಷ ಮೌಲ್ಯದ ಬಂಗಾರದ ಪದಕ ಮತ್ತು ಎರಡು ತೋಡೆಗಳು, ಇತರೆ 10 ಗ್ರಾಂ ಬೆಳ್ಳಿ ಆಭರಣ, ಬಳೆಗಳನ್ನು ಸೇರಿದಂತೆ ಒಟ್ಟು ₹5.33 ಲಕ್ಷ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.ಬಂಧಿತ ಮಹಿಳೆಯು ಸೆ. 16 ರಂದು ಅಶೋಕನಗರ ಪೊಲೀಸ್ ಠಾಣೆ ವ್ಯಾಪ್ತಿಯ ವಿಜಯನಗರದ ಮನೆಯೊಂದರಲ್ಲಿ ಯಾರು ಇಲ್ಲದಿರುವುದನ್ನು ಗಮನಿಸಿ ಕಳ್ಳತನ ಮಾಡಿದ್ದಳು. ಈ ಕುರಿತು ಮನೆ ಮಾಲಕಿ ಸುಜಾತಾ ದೂರು ದಾಖಲಿಸಿದ್ದರು. ಈ ದೂರಿನ ಅನ್ವಯ ಅಶೋಕ ನಗರ ಠಾಣೆಯ ಪಿಐ ಮಂಜುನಾಥ ಟಿ.ಎಂ. ನೇತೃತ್ವದ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಈ‌ ಕಾರ್ಯಾಚರಣೆಯಲ್ಲಿ ಪಿಎಸ್ಐ ಎನ್.ಎಂ. ಮನಿಯಾರ್, ಸಿಬ್ಬಂದಿ ಎಸ್.ಎಚ್. ಪಾಟೀಲ, ವೈ.ಬಿ. ಮೊರಬ, ರಾಜೇಂದ್ರ ಸಕ್ರಪಗೋಳ, ವೀರೇಶ ಮಹಾಜನಶೆಟ್ಟರ್ ಸೇರಿದಂತೆ ಹಲವರಿದ್ದರು.