- 7000ಕ್ಕೂ ಹೆಚ್ಚು ಕೀಲು ಮರುಜೋಡಣೆ, 1000ಕ್ಕೂ ಹೆಚ್ಚು ರೋಬೋಟಿಕ್ ಶಸ್ತ್ರಚಿಕಿತ್ಸೆ ಅನುಭವ
- - -- ಪ್ರಸ್ತುತ ಬೆಂಗಳೂರಿನ ಅಪೋಲೋ ಆಸ್ಪತ್ರೆಯ ರೋಬೋಟಿಕ್ ಕೀಲು ಮರುಜೋಡಣೆ ವಿಭಾಗದ ಪ್ರಮುಖ ಕನ್ಸಲ್ಟೆಂಟ್.
- ಪ್ರತಿ ತಿಂಗಳ ಎರಡನೇ ವಾರದಲ್ಲಿ ದಾವಣಗೆರೆಯ ಅನುಗ್ರಹ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ತಪಾಸಣೆ- ರೋಬೋಟ್ ವೈದ್ಯರ ನಿಖರತೆಗೆ ಸಹಾಯ ಮಾಡುತ್ತದೆ, ಶಸ್ತ್ರಚಿಕಿತ್ಸೆ ಸಂಪೂರ್ಣ ವೈದ್ಯರ ನಿಯಂತ್ರಣ ಇರುತ್ತದೆ.
- - -
ಕನ್ನಡಪ್ರಭ ವಾರ್ತೆ ದಾವಣಗೆರೆ ದಾವಣಗೆರೆ ಸೇರಿದಂತೆ ಸುತ್ತಮುತ್ತಲಿನ ಜಿಲ್ಲೆಗಳ ಜನರಿಗೆ ಅತ್ಯಾಧುನಿಕ ವೈದ್ಯಕೀಯ ಸೌಲಭ್ಯವನ್ನು ಸ್ಥಳೀಯವಾಗಿಯೇ ಒದಗಿಸುವ ನಿಟ್ಟಿನಲ್ಲಿ ವಿನೂತನ ರೋಬೋಟಿಕ್ ಶಸ್ತ್ರಚಿಕಿತ್ಸೆ ಮೂಲಕ ಸೊಂಟ ಮತ್ತು ಮೊಣಕಾಲು ಕೀಲು ಮರುಜೋಡಣೆ ತಂತ್ರಜ್ಞಾನವನ್ನು ಪರಿಚಯಿಸಲಾಗಿದೆ ಎಂದು ಮೂಳೆ ಚಿಕಿತ್ಸಾ ತಜ್ಞ ಡಾ.ಕೆ.ಟಿ.ರಾಜಶೇಖರ ತಿಳಿಸಿದರು.
ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಮೀಪದ ಕತ್ತಲಗೆರೆ ಗ್ರಾಮದವನಾದ ನಾನು ಹುಟ್ಟೂರಿನ ಜನರಿಗೆ ಅತ್ಯುತ್ತಮ ಚಿಕಿತ್ಸೆ ನೀಡುವ ಉದ್ದೇಶದಿಂದ ಈ ಸೇವೆ ಆರಂಭಿಸಿದ್ದೇನೆ. ಜಂಟಿ ಕೀಲುಮೂಳೆ ಶಸ್ತ್ರಚಿಕಿತ್ಸೆಯಲ್ಲಿ ಪ್ರತಿಷ್ಠಿತ ರಾಣಾವತ್ ಫೆಲೋಶಿಪ್ ಪಡೆದಿದ್ದು, ಪ್ರಸ್ತುತ ಬೆಂಗಳೂರಿನ ಅಪೋಲೋ ಆಸ್ಪತ್ರೆಯ ರೋಬೋಟಿಕ್ ಕೀಲು ಮರುಜೋಡಣೆ ವಿಭಾಗದ ಪ್ರಮುಖ ಕನ್ಸಲ್ಟೆಂಟ್ ಆಗಿದ್ದೇನೆ ಎಂದರು.24 ವರ್ಷಗಳಿಂದ 7,000ಕ್ಕೂ ಹೆಚ್ಚು ಯಶಸ್ವಿ ಕೀಲು ಮರುಜೋಡಣೆ, 1,000ಕ್ಕೂ ಹೆಚ್ಚು ರೋಬೋಟಿಕ್ ಶಸ್ತ್ರಚಿಕಿತ್ಸೆ ನಡೆಸಿದ್ದೇನೆ. ಪ್ರತಿ ತಿಂಗಳ ಎರಡನೇ ವಾರದಲ್ಲಿ ದಾವಣಗೆರೆಯ ಅನುಗ್ರಹ ಆಸ್ಪತ್ರೆಯಲ್ಲಿ ಹೊರರೋಗಿಗಳಿಗೆ ತಪಾಸಣೆ ನಡೆಸಲಿದ್ದೇವೆ. ಶಸ್ತçಚಿಕಿತ್ಸೆಯ ಅಗತ್ಯವಿರುವ ರೋಗಿಗಳನ್ನು ಮುಂದಿನ ಸುಧಾರಿತ ರೋಬೋಟಿಕ್ ಚಿಕಿತ್ಸೆಗಾಗಿ ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯಲ್ಲಿರುವ ಅಪೋಲೋ ಆಸ್ಪತ್ರೆಗೆ ಶಿಫಾರಸು ಮಾಡಲಾಗುವುದು. ಇದರಿಂದಾಗಿ ಜನರು ಆರಂಭಿಕ ತಪಾಸಣೆಗಾಗಿ ಬೆಂಗಳೂರಿಗೆ ಅಲೆಯುವ ತಾಪತ್ರಯ ತಪ್ಪಲಿದೆ ಎಂದರು.
ಆಧುನಿಕ ಚಿಕಿತ್ಸೆಯಲ್ಲಿ ಕಂಪ್ಯೂಟರ್ ನಿರ್ದೇಶಿತ ಯೋಜನೆ ರೋಬೋಟಿಕ್ ಉಪಕರಣದೊಂದಿಗೆ ಸಂಯೋಜಿಸಲಾಗುತ್ತದೆ. ಇದು ಮೂಳೆಯನ್ನು ಅತ್ಯಂತ ನಿಖರವಾಗಿ ಕತ್ತರಿಸಲು, ಕಡಿಮೆ ರಕ್ತಸ್ರಾವವಾಗಲು ಹಾಗೂ ರೋಗಿಯು ಶೀಘ್ರವಾಗಿ ಚೇತರಿಸಿಕೊಳ್ಳಲು ನೆರವಾಗುತ್ತದೆ. ರೋಬೋಟ್ ಕೇವಲ ವೈದ್ಯರ ನಿಖರತೆಗೆ ಸಹಾಯ ಮಾಡುತ್ತದೆಯೇ ಹೊರತು, ಶಸ್ತ್ರಚಿಕಿತ್ಸೆಯ ಪ್ರತಿ ಹಂತವೂ ಸಂಪೂರ್ಣವಾಗಿ ವೈದ್ಯರ ನಿಯಂತ್ರಣದಲ್ಲೇ ಇರುತ್ತದೆ. ತೀವ್ರವಾದ ಕೀಲುವಾತ ಇರುವ ವೃದ್ಧರು, ದೀರ್ಘಕಾಲದ ಕೀಲು ನೋವಿನಿಂದ ಬಳಲುತ್ತಿರುವ ಉದ್ಯೋಗಸ್ಥರು ಹಾಗೂ ಸಂಕೀರ್ಣವಾದ ಮರು-ಕೀಲು ಮರುಜೋಡಣೆ (ರಿವಿಷನ್) ಅಗತ್ಯವಿರುವ ರೋಗಿಗಳಿಗೆ ಇದು ಅತ್ಯಂತ ಉಪಯುಕ್ತವಾಗಿದೆ ಎಂದು ಅವರು ವಿವರಿಸಿದರು.ಸುದ್ದಿಗೋಷ್ಠಿಯಲ್ಲಿ ಮಧುಕುಮಾರಿ, ಸಂಕಮ್ಮ ಸಂಕಣ್ಣವರ್ ಇದ್ದರು.
- - --2ಕೆಡಿವಿಜಿ31: ದಾವಣಗೆರೆಯಲ್ಲಿಯೇ ರೋಬೋಟಿಕ್ ಶಸ್ತ್ರಚಿಕಿತ್ಸೆ ಮೂಲಕ ಸೊಂಟ, ಮೊಣಕಾಲು ಕೀಲು ಮರುಜೋಡಣೆ ಮಾಡುವ ಕುರಿತು ಡಾ. ಕೆ.ಟಿ.ರಾಜಶೇಖರ್ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದರು.