ಕೊಡ್ಲಗದ್ದೆಯ ಬಳಿ ಏಕಾಏಕಿ ಉರುಳಿ ಬಿದ್ದ ಬಂಡೆಗಳು

| Published : Feb 13 2025, 12:50 AM IST

ಸಾರಾಂಶ

ಯಲ್ಲಾಪುರ ತಾಲೂಕಿನ ಕೊಡ್ಲಗದ್ದೆಯಲ್ಲಿ ಭಾರಿ ಪ್ರಮಾಣದ ಕಲ್ಲುಬಂಡೆಗಳು ಬುಧವಾರ ಉರುಳಿ ಬಿದ್ದಿವೆ. ಈ ಪೈಕಿ ಐದಾರು ಬಂಡೆಗಳು ೫೦ ಅಡಿ ಎತ್ತರದಿಂದ ತೋಟದತ್ತ ಉರುಳಿದವು. ಅದರಿಂದ ತೋಟದ ಬಳಿ ಸರಾಗವಾಗಿ ಹರಿಯುತ್ತಿದ್ದ ನೀರಿನ ಕಾಲುವೆ ಮುಚ್ಚಿ ಹೋಗಿದೆ.

ಯಲ್ಲಾಪುರ: ಒಂದಕ್ಕೊಂದು ಅಂಟಿಕೊಂಡಿದ್ದ ಭಾರೀ ಪ್ರಮಾಣದ ಕಲ್ಲುಬಂಡೆಗಳು ಏಕಾಏಕಿ ಬುಧವಾರ ಬೆಳಗ್ಗೆ ಸಮೀಪದ ತೋಟಕ್ಕೆ ಉರುಳಿದ ಘಟನೆ ತಾಲೂಕಿನ ಗಡಿಭಾಗದ ಕೊಡ್ಲಗದ್ದೆಯಲ್ಲಿ ನಡೆದಿದೆ.

ಕೊಡ್ಲಗದ್ದೆಯ ಸಾಮೂಹಿಕ ಸೊಪ್ಪಿನ ಬೆಟ್ಟ ಪ್ರದೇಶದಲ್ಲಿ ಹಿಂದಿನಿಂದಲೂ ಕಲ್ಲು ಬಂಡೆಗಳಿದ್ದವು. ಈ ಪೈಕಿ ಐದಾರು ಬಂಡೆಗಳು ೫೦ ಅಡಿ ಎತ್ತರದಿಂದ ತೋಟದತ್ತ ಉರುಳಿದವು. ಇನ್ನೂ ಒಂದು ಎಕರೆ ಪ್ರದೇಶದಲ್ಲಿ ದೊಡ್ಡ ಪ್ರಮಾಣದ ಒಂಟಿ ಬಂಡೆಯಿದ್ದು, ಅದು ಸಹ ಉರುಳಿ ಬೀಳುವ ಆತಂಕ ಎದುರಾಗಿದೆ ಎಂದು ಸ್ಥಳೀಯ ವಿಶ್ವನಾಥ ಹೆಬ್ಬಾರ ತಿಳಿಸಿದ್ದಾರೆ.

ಬಂಡೆಗಳು ಉರುಳಿ ಬಿದ್ದಿದ್ದರಿಂದ ತೋಟದ ಬಳಿ ಸರಾಗವಾಗಿ ಹರಿಯುತ್ತಿದ್ದ ನೀರಿನ ಕಾಲುವೆ ಮುಚ್ಚಿ ಹೋಗಿದೆ. ಹೀಗಾಗಿ ವಿಶ್ವನಾಥ ಹೆಬ್ಬಾರ್ ಅವರ ತೋಟಕ್ಕೆ ನೀರು ಹೋಗದಂತಾಗಿದೆ. ಬಂಡೆ ಬಿದ್ದ ಪ್ರದೇಶದಲ್ಲಿಯೇ ಕಾಲುವೆ ನೀರು ಉಕ್ಕಿ ಹರಿಯುತ್ತಿದ್ದು, ವಿಶ್ವೇಶ್ವರ ಸುಬ್ರಾಯ ಗಾಂವ್ಕರ್ ಜೋಗಿಮನೆ ಅವರ ತೋಟ ಜಲಾವೃತವಾಗುತ್ತಿದೆ. ಭಾರೀ ಪ್ರಮಾಣದ ಕಲ್ಲಿನ ಬಂಡೆಗಳು ವಿಶ್ವೇಶ್ವರ ಸುಬ್ರಾಯ ಗಾಂವ್ಕರ್ ಅವರ ಮಾಲ್ಕಿ ಭೂಮಿಯಲ್ಲಿ ಬಿದ್ದಿದ್ದರಿಂದ ಅಡಕೆ-ತೆಂಗಿನ ಮರಗಳಿಗೂ ಅಲ್ಪ ಪ್ರಮಾಣದ ಹಾನಿಯಾಗಿದೆ.

ಮೊದಲ ಬಾರಿ ಬಂಡೆ ನೆಲಕ್ಕೆ ಉರುಳಿದ ಮುಕ್ಕಾಲು ತಾಸಿನ ನಂತರ ಮತ್ತೊಂದು ಬೃಹತ್ ಬಂಡೆ ತೋಟದ ಕಡೆ ಬಂದು ಬಿದ್ದಿದೆ. ಹಂತ ಹಂತವಾಗಿ ಬಂಡೆಗಳು ನೆಲಕ್ಕೆ ಉರುಳುತ್ತಿರುವುದರಿಂದ ಆತಂಕ ಹೆಚ್ಚಾಗಿದೆ. ಅಲ್ಲಿ ಎಲ್ಲಿಯೂ ದೊಡ್ಡ ಯಂತ್ರಗಳು ಕೆಲಸ ಮಾಡುತ್ತಿಲ್ಲ. ಭೂ ಕಂಪನದ ಅನುಭವ ಸಹ ಆಗಿಲ್ಲ. ಏಕಾಏಕಿ ಬಂಡೆಗಳು ಉರುಳಿ ಬಿದ್ದಿರುವುದು ಅಚ್ಚರಿಗೆ ಕಾರಣವಾಗಿದೆ. ಈ ಕುರಿತು ಭೂಗರ್ಭ ಇಲಾಖಾ ತಜ್ಞರು ಸ್ಥಳ ಪರಿಶೀಲಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.