ಇಳೆಗೆ ಇಳಿದ ರೋಹಿಣಿ ಮಳೆ: ರೈತ ಸಂತಸ

| Published : Jun 04 2024, 12:30 AM IST

ಸಾರಾಂಶ

ಸಿರಿಗೆರೆ ಸುತ್ತಲಿನ ಗ್ರಾಮಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ವರ್ಷಧಾರೆ. ಹಲವು ಹಳ್ಳಕೊಳ್ಳಗಳು, ಚೆಕ್‌ಡ್ಯಾಂಗಳು ತುಂಬಿ ಹರಿಯುತ್ತಿವೆ. ಅದೃಷ್ಠವಶಾತ್‌ ಹಾನಿಯಾದ ವರದಿಗಳು ಲಭ್ಯವಾಗಿಲ್ಲ.

ಕನ್ನಡಪ್ರಭ ವಾರ್ತೆ ಸಿರಿಗೆರೆ

ಭಾನುವಾರ ತಡರಾತ್ರಿ ಸಿರಿಗೆರೆ ಮತ್ತು ಸುತ್ತಲಿನ ಹತ್ತಾರು ಗ್ರಾಮಗಳಲ್ಲಿ ಸುರಿದ ರೋಹಿಣಿ ಮಳೆಯು ಕೃಷಿಕರನ್ನು ಮಂದಸ್ಮಿತರನ್ನಾಗಿ ಮಾಡಿದೆ. ಕೆಲವು ದಿನಗಳ ಹಿಂದಷ್ಟೇ ಕೃತ್ತಿಕಾ ಮಳೆ ಸುರಿದು ರೈತರಲ್ಲಿ ಮುಂಗಾರು ಮಳೆ ಭರವಸೆ ಹುಟ್ಟಿಸಿತ್ತು. ಬಳಿಕ ಮತ್ತೆ ಭಾನುವಾರ ಮಳೆಯಾಗಿದೆ.

ಗುಡುಗು ಸಿಡಿಲುಗಳ ಆರ್ಭಟದಿಂದ ಆರಂಭವಾದ ಮಳೆ ಒಂದು ಗಂಟೆಗೂ ಹೆಚ್ಚು ಕಾಲ ಸುರಿದಿದೆ. ಹಲವು ಹಳ್ಳಕೊಳ್ಳಗಳು, ಚೆಕ್‌ಡ್ಯಾಂಗಳು ತುಂಬಿ ಹರಿಯುತ್ತಿವೆ. ಅದೃಷ್ಠವಶಾತ್‌ ಹಾನಿಯಾದ ವರದಿಗಳು ಲಭ್ಯವಾಗಿಲ್ಲ.

ಮಳೆಯ ರಭಸಕ್ಕೆ ಸಿರಿಗೆರೆ-ಬೆನ್ನೂರು ಸರ್ಕಲ್‌ ಬಳಿ ಇರುವ ರಾಷ್ಟ್ರೀಯ ಹೆದ್ದಾರಿಯ ಅಂಡರ್‌ಪಾಸ್‌ನಲ್ಲಿ ನೀರು ನಿಂತಿದೆ. ಗೌರಮ್ಮನಹಳ್ಳಿ, ವಿಜಾಪುರದಲ್ಲೂ ಬಳೆಯ ಪ್ರಮಾಣ ಹೆಚ್ಚಿದೆ. ಲಕ್ಷ್ಮೀಸಾಗರ ಕೆರೆಗೆ ನೀರು ಹರಿದು ಬರುತ್ತಿದೆ. ಲಕ್ಷ್ಮೀಸಾಗರ ಬಳಿಯ ಬಳಿಗಟ್ಟೆ ಹಳ್ಳದಲ್ಲಿ ನೀರು ಹರಿಯುತ್ತಿರುವುದನ್ನು ನೋಡಿದ ಜನರು ಸಂತೋಷ ವ್ಯಕ್ತಪಡಿಸಿದ್ದಾರೆ.

ಅಲ್ಲಲ್ಲಿ ಅಡಿಕೆ ತೋಟ ಮತ್ತು ಜಮೀನುಗಳಲ್ಲಿ ನೀರು ನಿಂತಿರುವುದು ಸಾಮಾನ್ಯ ದೃಶ್ಯವಾಗಿದೆ. ಭರಮಸಾಗರದ ಚಿಕ್ಕ ಕೆರೆಗೆ ನೀರು ಹರಿದು ಬಂದಿದೆ. ಈ ದೃಶ್ಯವನ್ನು ಜನರು ಮೊಬೈಲ್‌ಗಳಲ್ಲಿ ಸೆರೆ ಹಿಡಿದು ರವಾನಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು. ಹೆಗ್ಗೆರೆ ಬಳಿ ಸುರಿದಿರುವ ಮಳೆಗೆ ಹೊಲ, ತೋಟಗಳಲ್ಲಿನ ಬದುಗಳೇ ಮಾಯವಾಗಿವೆ. ಬಿತ್ತನೆಗೆ ಸಿದ್ಧಮಾಡಿಕೊಂಡಿದ್ದ ಜಮೀನುಗಳಲ್ಲಿ ನೀರು ಹರಿದು ಮಣ್ಣು ಕೊಚ್ಚಿ ಹೋಗಿದೆ. ಕೆಲವು ಕಡೆ ಜಮೀನುಗಳಲ್ಲಿ ಹಾಕಿದ್ದ ಬದುಗಳು ಒಡೆದುಹೋಗಿವೆ.