ಹುಬ್ಬಳ್ಳಿ:

ಹುಬ್ಬಳ್ಳಿ-ಧಾರವಾಡ ಮಹಾನಗರದಲ್ಲಿ ಶನಿವಾರ ಮುಂಗಾರು ಮಳೆ (ರೋಹಿಣಿ) ಮೊದಲ ದಿನವೇ ತನ್ನ ಆರ್ಭಟಿಸಿದ್ದು, ಇಳೆಗೆ ತಂಪಿರೆದಿದೆ.

ರೋಹಿಣಿ ಅಬ್ಬರಕ್ಕೆ ಕೆರೆ-ಕಟ್ಟೆಗಳು, ಗಿಡ-ಮರಗಳು ಅಕ್ಷರಶಃ ತರಗುಟ್ಟಿವೆ. ಹುಬ್ಬಳ್ಳಿಯಲ್ಲಿ ಹತ್ತಕ್ಕೂ ಹೆಚ್ಚು ಕಡೆ ಮರಗಳು ನೆಲಕ್ಕುರುಳಿದರೆ ಕೆಲಕಾಲ ವಿದ್ಯುತ್‌ ಕಡಿತಗೊಂಡಿದೆ.

ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಕೆಲಕಾಲ ತುಂತುರು ಮಳೆ ಸುರಿದಿದೆ. ಬೆಳಗ್ಗೆಯಿಂದ ಅಲ್ಪ-ಸ್ವಲ್ಪ ಮೋಡಕವಿದ ವಾತಾವರಣವಿತ್ತು. ಮಧ್ಯಾಹ್ನ 2.30ರ ಸುಮಾರಿಗೆ ಏಕಾಏಕಿ ಗುಡುಗು, ಸಿಡಿಲು ಬಿರುಗಾಳಿ ಮಿಶ್ರಿತ ಮಳೆ ಶುರುವಾಯಿತು. ಈ ವೇಳೆ ಬಿರುಗಾಳಿಗೆ ಗಿಡ, ಮರಗಳು ನೆಲಕ್ಕುರಳಿದವು. ನಗರದ ಚಿಟಗುಪ್ಪಿ ಆಸ್ಪತ್ರೆ ಆವರಣದಲ್ಲಿ ಮರವೊಂದು ಬಿದ್ದು ಬೈಕ್‌ ಜಖಂಗೊಂಡಿದೆ. ಸಮೀಪದಲ್ಲಿಯೇ ಇದ್ದ ಜನರು ಅಪಾಯದಿಂದ ಪಾರಾಗಿದ್ದಾರೆ.

ಹೊಸ ಕೋರ್ಟ್‌ ಬಳಿಯ ಅಪಾರ್ಟ್‌ಮೆಂಟ್‌ವೊಂದರಲ್ಲಿ ಹಸಿರು ಬಳ್ಳಿಯೊಂದು ಟಿಸಿಯ ಮೇಲೆ ಬಿದ್ದ ಪರಿಣಾಮ ಬೆಂಕಿ ಹೊತ್ತಿಕೊಂಡು ಆತಂಕ ಸೃಷ್ಟಿಸಿತ್ತು. ಉಣಕಲ್‌ ಕ್ರಾಸ್‌ ರಸ್ತೆಯ ಮೇಲೆ ದೊಡ್ಡ ಪ್ರಮಾಣದಲ್ಲಿ ನೀರು ಬಂದು ವಾಹನ ಸಂಚಾರಕ್ಕೆ ಅಡೆತಡೆ ಮಾಡಿತು. ಮಳೆ-ಗಾಳಿಯಿಂದಾಗಿ ನಗರದ ಮಾರುಕಟ್ಟೆ ಪ್ರದೇಶಗಳಾದ ದುರ್ಗದಬೈಲ್‌, ದಾಜೀಬಾನ್‌ಪೇಟೆ, ಶಹಾ ಬಜಾರ, ಹಳೆ ಹುಬ್ಬಳ್ಳಿಯ ಸ್ಲಂ ಪ್ರದೇಶದಲ್ಲಿ ಮಳೆ ನೀರು ನಿಂತು ಕೆಲಕಾಲ ವಾಹನ ಸವಾರರಿಗೆ ಹಾಗೂ ಪಾದಚಾರಿಗಳಿಗೆ ಸಮಸ್ಯೆ ಉಂಟಾಗಿತ್ತಲ್ಲದೇ, ವ್ಯಾಪಾರ ವಹಿವಾಟಿಗೂ ಪೆಟ್ಟು ನೀಡಿತು.


ಗೋಕುಲ ರಸ್ತೆ, ವಿದ್ಯಾನಗರ, ದೇಶಪಾಂಡೆ ನಗರ, ನೇಕಾರ ನಗರ, ಕೇಶ್ವಾಪುರ, ಉಣಕಲ್‌, ನವನಗರ ಸೇರಿದಂತೆ ವಿವಿಧ ಪ್ರದೇಶದಲ್ಲಿ ಗಿಡ-ಮರಗಳ ಕೊಂಬೆಗಳು ಮುರಿದು ಬಿದ್ದವು. ಮತ್ತೆ ಕೆಲವೆಡೆ ಗಿಡದ ಟೊಂಗೆಗಳು ವಿದ್ಯುತ್‌ ತಂತಿಯ ಮೇಲೆ ಬಿದ್ದ ಪರಿಣಾಮ ಶಾರ್ಟ್‌ ಸರ್ಕ್ಯೂಟ್‌ ಉಂಟಾಗಿ, ಕೆಲ ಗಂಟೆಗಳ ಕಾಲ ವಿದ್ಯುತ್‌ ವ್ಯತ್ಯಯ ಉಂಟಾಯಿತು. ಇದರಿಂದಾಗಿ ಅಕ್ಕಪಕ್ಕದ ಮನೆಗಳ ವಿದ್ಯುತ್‌ ಸಂಪರ್ಕ ಸ್ಥಗಿತಗೊಂಡಿತು. ನಂತರ ಹೆಸ್ಕಾಂ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ, ಟಿಸಿ ದುರಸ್ತಿಗೊಳಿಸಿದರು.ಏಕಾಏಕಿ ಮಳೆ ಸುರಿದ ಪರಿಣಾಮ ಕಾರ್ಯನಿಮಿತ್ತ ಹೊರಗೆ ಬಂದಿದ್ದ ಜನರು ಮಳೆಯಿಂದ ಆಸರೆ ಪಡೆಯಲು ಅಕ್ಕಪಕ್ಕದ ಅಂಗಡಿ- ಮುಂಗಟ್ಟುಗಳಲ್ಲಿ ರಕ್ಷಣೆ ಪಡೆದರು. ತಡರಾತ್ರಿ ವರೆಗೂ ಮಳೆ ಸುರಿಯುವ ಲಕ್ಷಣಗಳು ಮುಂದುವರೆಯಿತು.