ಸಾರಾಂಶ
ಮುಗುಳುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟನೆ,
ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರುಮಲೆನಾಡು ಭಾಗದ ಸಣ್ಣ ಹಾಗೂ ಅತಿ ಸಣ್ಣ ರೈತರ ಪರವಾಗಿ ಕೆಲಸ ಮಾಡುವಲ್ಲಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳು ಪ್ರಮುಖ ಪಾತ್ರ ವಹಿಸುತ್ತವೆ ಎಂದು ಮೂಡಿಗೆರೆ ಕ್ಷೇತ್ರದ ಶಾಸಕಿ ನಯನಾ ಮೋಟಮ್ಮ ಹೇಳಿದರು.ಮಂಗಳವಾರ ಮುಗುಳುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡ ಉದ್ಘಾಟಿಸಿ ಮಾತನಾಡಿದ ಅವರು, ಈ ಸಹಕಾರ ಸಂಘದ ವ್ಯಾಪ್ತಿಯ ರೈತರಿಗೆ ತುರ್ತು ಹಣದ ಅವಶ್ಯಕತೆ ಇದ್ದಾಗ ಸಹಕಾರಿ ಬ್ಯಾಂಕ್ ನೆರವಿಗೆ ಬರುತ್ತದೆ. ಆದರೆ, ಇದುವರೆಗೂ ಬ್ಯಾಂಕಿನಲ್ಲಿ ನಿಶ್ಚಿತ ಠೇವಣಿ ಪ್ರಾರಂಭಿಸಿಲ್ಲದರ ಬಗ್ಗೆ ವಿಷಾಧ ವ್ಯಕ್ತಪಡಿಸಿದರು.ಆದಾಯ ಕ್ರೂಢೀಕರಿಸಿ ಉಳಿತಾಯ ಮಾಡಿ ರೈತರಿಗೆ ಸಾಲ ನೀಡಬೇಕು. ಈ ನಿಟ್ಟಿನಲ್ಲಿ ನಿಶ್ಚಿತ ಠೇವಣಿ ಸಂಗ್ರಹಿಸಲು ಸದಸ್ಯರು ಹಾಗೂ ನೌಕರ ಸಿಬ್ಬಂದಿ ಶ್ರಮಿಸಬೇಕೆಂದು ಕರೆ ನೀಡಿದರು.ಈ ಸಹಕಾರಿ ಬ್ಯಾಂಕಿನ ವ್ಯಾಪ್ತಿಗೆ ಮೂರು ಗ್ರಾಮ ಪಂಚಾಯಿತಿಗಳು ಬರಲಿದ್ದು, ಇದನ್ನು ದೊಡ್ಡ ಮಟ್ಟಕ್ಕೆ ಬೆಳೆಯಲು ಎಲ್ಲಾ ಸಹಕಾರಿಗಳ ಶ್ರಮ ಅಗತ್ಯ ಎಂದ ಅವರು, ಹಾಲಿ ಶಾಸಕಿಯಾಗಿ ಈಗ ನೀಡಿರುವ ಅನುದಾನದ ಜೊತೆಗೆ ಮುಂದೆ ಹೆಚ್ಚಿನ ಸಹಕಾರ, ಸಹಾಯ ನೀಡಲು ಬದ್ಧವಾಗಿರುವುದಾಗಿ ಭರವಸೆ ನೀಡಿದರು.ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬ್ಯಾಂಕಿನ ಅಧ್ಯಕ್ಷ ಎಂ.ಎಸ್. ನಿರಂಜನ್ ಮಾತನಾಡಿ, ಈ ಪತ್ತಿನ ಸಹಕಾರ ಸಂಘಕ್ಕೆ 26 ಹಳ್ಳಿಗಳು ಬರಲಿದ್ದು, ಇನ್ನೂ 36 ಹಳ್ಳಿಗಳ ಸೇರ್ಪಡೆಗೆ ಮುಂದಾದರೆ ಆಡಳಿತ ನಡೆಸಲು ಸಾಧ್ಯವಿಲ್ಲ, ಎಲ್ಲರಿಗೂ ನ್ಯಾಯ ಒದಗಿಸಲು ಆಗುವುದಿಲ್ಲ ಎಂದು ಹೇಳಿದರು.ಈ ಪತ್ತಿನ ಕೃಷಿ ಅಭಿವೃದ್ಧಿ ಬ್ಯಾಂಕಿಗೆ ಡಿಸಿಸಿ ಬ್ಯಾಂಕ್ ಅಧ್ಯಕ್ಷರು ಕೋಟಿ ರು. ಅನುದಾನ ನೀಡಿರುವುದರಿಂದ ಈ ಭಾಗದ ರೈತರಿಗೆ ಸಾಲ ನೀಡಲು ಸಹಕಾರಿಯಾಗಿದೆ. ಬ್ಯಾಂಕಿನ ನೌಕರ ಸಿಬ್ಬಂದಿ ಹಾಗೂ ಸದಸ್ಯರ ಸಹಕಾರದೊಂದಿಗೆ ಅಭಿವೃದ್ಧಿ ಸಾಧಿಸಿ ಸಾಧನೆ ಮಾಡಿದ್ದೇವೆಂದರು.ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಒಟ್ಟು ₹ 9 ಕೋಟಿ ವಹಿವಾಟು ನಡೆಸಲಾಗುತ್ತಿದೆ. ಸದಸ್ಯರು, ರೈತರು ಠೇವಣಿ ಇಡುವ ಮೂಲಕ ಅಭಿವೃದ್ಧಿಗೆ ಸಹಕರಿಸಿ ಎಂದು ಮನವಿ ಮಾಡಿದ ಅವರು, ನಿಮ್ಮ ಹಣಕ್ಕೆ ತೊಂದರೆಯಾಗದಂತೆ ಎಚ್ಚರ ವಹಿಸಲಾಗುವುದು ಎಂದು ಭರವಸೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿದ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕಿನ ಅಧ್ಯಕ್ಷ ಡಿ.ಎಸ್. ಸುರೇಶ್ ಮಾತನಾಡಿ, ಬ್ಯಾಂಕಿನ ನೂತನ ಕಟ್ಟಡಕ್ಕೆ ₹ 8 ಲಕ್ಷ ಅನುದಾನ ನೀಡಿದ್ದು, ಇದರಿಂದ ನೂತನ ಕಟ್ಟಡ ನಿರ್ಮಾಣಕ್ಕೆ ಸಹಕಾರಿಯಾಗಿದೆ. ಜೊತೆಗೆ ನಬಾರ್ಡ್ ನಿಬಂಧನೆಗಳು ಬದಲಾಗಿದ್ದರಿಂದ ಈ ಬಾರಿ ಕೃಷಿ ಸಾಲ ವಿತರಿಸಲು ಸಾಧ್ಯವಾಗಿಲ್ಲ ಎಂದು ಹೇಳಿದರು. ರೈತ ಸಂಘದ ಜಿಲ್ಲಾಧ್ಯಕ್ಷ ಗುರುಶಾಂತಪ್ಪಮಾತನಾಡಿ, ತಾನು ಎಲ್ಲರಿಗಾಗಿ, ಎಲ್ಲರೂ ತನಗಾಗಿ ಎಂಬ ಸಹಕಾರಿ ತತ್ವ ದೊಂದಿಗೆ ಸಹಕಾರಿ ಕ್ಷೇತ್ರ ಬೆಳೆಯುತ್ತಿದೆ. ಈ ಪತ್ತಿನ ಸಹಕಾರಿ ಸಂಘವನ್ನು ಉತ್ತಮ ಸ್ಥಿತಿಗೆ ತರುವಲ್ಲಿ ಅಧ್ಯಕ್ಷರ ಶ್ರಮ ಅಭಿನಂದನೀಯ ಎಂದರು.ಸಹಕಾರ ಸಂಘದಲ್ಲಿ ಪೌತಿ ಖಾತೆಗಳ ಸಂಖ್ಯೆ ಹಾಗೇ ಇದ್ದು ಅವುಗಳನ್ನು ಸಂಬಂಧಪಟ್ಟವರ ಹೆಸರಿಗೆ ವರ್ಗಾಯಿಸಿಕೊಂಡು ಖಾತೆ ಮಾಡಿ ಸಹಕಾರ ಸಂಘದಲ್ಲಿ ದೊರೆಯುವ ಸಾಲ ಸೌಲಭ್ಯಗಳ ಸದುಪಯೋಗಪಡೆಯುವಂತೆ ಮನವಿ ಮಾಡಿದರು.ಪತ್ತಿನ ಸಹಕಾರ ಸಂಘ ಪ್ರತೀ ವರ್ಷ ಲಾಭದತ್ತ ಮುನ್ನುಗ್ಗುತ್ತಿದೆ. ಈಗ ಇರುವ ಹಾಗೂ ಹಿಂದಿನ ಆಡಳಿತ ಮಂಡಳಿ ಪರಿಶ್ರಮದಿಂದ ದುಂದು ವೆಚ್ಚಗಳಿಗೆ ಕಡಿವಾಣ ಹಾಕಿ, ಉತ್ತಮ ಸ್ಥಿತಿಗೆ ತಂದಿದ್ದಾರೆಂದು ಹೇಳಿದರು.ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ಶಿವಣ್ಣಗೌಡ, ನಿರ್ದೇಶಕರಾದ ಎಂ.ಡಿ. ರವಿ, ಧರ್ಮಯ್ಯ, ಬಲರಾಮ್, ಬಸವರಾಜು, ವಿಜಯಕುಮಾರ್, ಗ್ರಾಪಂ ಅಧ್ಯಕ್ಷೆ ಸವಿತಾ ಉಮೇಶ್, ಉಪಾಧ್ಯಕ್ಷ ಉಮೇಶ್, ಪಿಡಿಒ ಸುಮ, ಸಹಕಾರ ಸಂಘದ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಶಿವಕುಮಾರ್ ಉಪಸ್ಥಿತರಿದ್ದರು. 23 ಕೆಸಿಕೆಎಂ 6ಚಿಕ್ಕಮಗಳೂರು ತಾಲೂಕಿನ ಮುಗುಳುವಳ್ಳಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ನೂತನ ಕಟ್ಟಡವನ್ನು ಮೂಡಿಗೆರೆ ಶಾಸಕಿ ನಯನಾ ಮೋಟಮ್ಮ ಉದ್ಘಾಟಿಸಿದರು. ಡಿಸಿಸಿ ಬ್ಯಾಂಕ್ ಅಧ್ಯಕ್ಷ ಡಿ.ಎಸ್. ಸುರೇಶ್, ಎಂ.ಎಸ್. ನಿರಂಜನ್ ಇದ್ದರು.