ಸಾರಾಂಶ
ಗದಗ: ವಿದ್ಯಾರ್ಥಿಗಳ ಜೀವನ ನಿರ್ಮಿಸಿಕೊಳ್ಳಲು ಇಬ್ಬರ ಪಾತ್ರ ಅತ್ಯಮೂಲ್ಯವಾದದ್ದು. ಸದೃಢ ಸಮಾಜ ನಿರ್ಮಾಣವಾಗಬೇಕಾದರೆ ಪಾಲಕರು ಮತ್ತು ಶಿಕ್ಷಕರು ಒಂದು ರಥದ ಎರಡು ಚಕ್ರಗಳಿದ್ದಂತೆ. ಆದ್ದರಿಂದ ಇಬ್ಬರೂ ಜವಾಬ್ದಾರಿ ವಹಿಸಬೇಕಾಗಿದೆ ಎಂದು ಎಚ್.ಎಚ್. ಕೊಪ್ಪಳ ಹೇಳಿದರು.
ಸ್ಥಳೀಯ ಕೆಎಲ್‌ಇ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆದ ಪಾಲಕರ ಸಭೆಯಲ್ಲಿ ಅವರು ಮಾತನಾಡಿದರು. ದುರದೃಷ್ಟವೆಂಬಂತೆ ಇಂದಿನ ವಿದ್ಯಾರ್ಥಿಗಳು ಶಿಕ್ಷಕ ಹಾಗೂ ಪಾಲಕರ ಮಾರ್ಗದರ್ಶನ ಕಡೆಗಣಿಸಿ ಇಂದಿನ ಋಣಾತ್ಮಕ ವಿಷಯ ಬೆನ್ನತ್ತಿ ಚಿನ್ನದಂತಹ ತಮ್ಮ ಜೀವನ ಹಾಳು ಮಾಡಿಕೊಳುತ್ತಿದ್ದಾರೆ ಎಂದು ಕಳವಳ ವ್ಯಕ್ತಪಡಿಸಿದರು.ಪಾಲಕ ನಿಂಗಪ್ಪ ತಳವಾರ ಮಾತನಾಡಿ, ವಿದ್ಯಾರ್ಥಿಗಳ ಭವಿಷ್ಯ ನಿರ್ಮಾಣದಲ್ಲಿ ಶಿಕ್ಷಕರು ನಮ್ಮ ಮಕ್ಕಳ ಪ್ರಗತಿಗಾಗಿ ತೆಗೆದುಕೊಳ್ಳುವ ನಿರ್ಧಾರ ಸ್ವಾಗತಿಸಿ ಮಕ್ಕಳ ಅಭಿವೃದ್ಧಿಗೆ ಶ್ರಮಿಸೋಣ ಎಂದರು.
ಎ.ಬಿ. ದಾವಣಗೇರಿ ಮಾತನಾಡಿ, ಗುರು-ಶಿಷ್ಯರೊಂದಿಗೆ ಇಂದು ಪಾಲಕನು ತನ್ನ ಜವಾಬ್ದಾರಿಯನ್ನು ಸಮರ್ಪಕವಾಗಿ ನಿರ್ವಹಿಸಿದಾಗ ಮಾತ್ರ ಮಕ್ಕಳು ವಿದ್ಯಾವಂತರಾಗಿ ಸಮಾಜದಲ್ಲಿ ಮೌಲ್ಯಯುಕ್ತ ಬದುಕು ಕಟ್ಟಿಕೊಳ್ಳಲು ಸಾಧ್ಯ ಎಂದರು.ಪ್ರಾಚಾರ್ಯ ಡಾ. ಎ.ಕೆ. ಮಠ ಮಾತನಾಡಿದರು. ಪಾಲಕರಿಗೆ ಮಹಾವಿದ್ಯಾಲಯದ ಗ್ರಂಥಾಲಯ ಸೌಲಭ್ಯಗಳ ಕುರಿತು ಗ್ರಂಥಪಾಲಕ ಡಾ. ಗುಂಡಪ್ಪ ನಾಯಕ ವಿವರಣೆ ನೀಡಿದರು. ದೈಹಿಕ ಶಿಕ್ಷಣ ನಿರ್ದೇಶಕ ವೀರಣ್ಣ ಬಡಿಗೇರ ಅವರು, ದೈಹಿಕ ಶಿಕ್ಷಣ ಮತ್ತು ಕ್ರೀಡಾ ವಿಭಾಗದಲ್ಲಿರುವ ಸೌಕರ್ಯಗಳ ಕುರಿತು ವಿವರಿಸಿದರು. ವೀಣಾ ತಿರ್ಲಾಪುರ (ಅಳಲಗೇರಿ) ಸ್ವಾಗತಿಸಿದರು. ಪ್ರಾಧ್ಯಾಪಕ ಡಾ. ರಾಮಚಂದ್ರ ಪಡೆಸೂರ ಕಾರ್ಯಕ್ರಮ ನಿರೂಪಿಸಿದರು. ಐ.ಬಿ. ಪಾಟೀಲ ವಂದಿಸಿದರು. ಈ ವೇಳೆ ಮಹಾವಿದ್ಯಾಲಯದ ಸಿಬ್ಬಂದಿ, ಪಾಲಕರು, ಮಕ್ಕಳು ಇದ್ದರು.